ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಕೊಪ್ಪಳ 01 : ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ 20 ಮತ್ತು 21 ರಂದು ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕನಕಗಿರಿ ಉತ್ಸವ ನಡೆಸಲು ನಿರ್ಧರಿಸಲಾಗಿದ್ದು, ಅದ್ದೂರಿ ಹಾಗೂ ವ್ಯವಸ್ಥಿತ ಉತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕನಕಗಿರಿ ಉತ್ಸವ-2025ರ ಸಂಬಂಧ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಐತಿಹಾಸಿಕ ಪುಣ್ಯ ಕ್ಷೇತ್ರವಾದ ಕನಕಗಿರಿಯ ಜಾತ್ರಾ ಮಹೋತ್ಸವ ಸಂದರ್ಭದಲ್ಲಿಯೇ ಕನಕಗಿರಿ ಉತ್ಸವವನ್ನು ಆಚರಿಸಬೇಕೆಂಬುವುದು ಜನರ ಒತ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಾ.20 ಮತ್ತು 21 ರಂದು ಕನಕಗಿರಿ ಉತ್ಸವ ಆಚರಿಸಲಾಗುವುದು. ಉತ್ಸವ ಪ್ರಯುಕ್ತ ಕಳೆದ ಬಾರಿಯಂತೆ ಸ್ವಾಗತ ಸಮಿತಿ, ಶಿಷ್ಠಾಚಾರ, ಮೇರವಣಿಗೆ, ಸಾಂಸ್ಕೃತಿಕ, ವಸತಿ, ಕ್ರೀಡಾ, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ, ಮೂಲಭೂತ ಸೌಕರ್ಯಗಳ ಸಮಿತಿ, ಸಾರಿಗೆ ಸೇರಿದಂತೆ ಇತರ ಸಮಿತಿಗಳನ್ನು ಕೂಡಲೇ ರಚಿಸಬೇಕು ಮತ್ತು ಎಲ್ಲಾ ಸಮಿತಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು. ಸಮಿತಿಗಳು ಕಾರ್ಯಕ್ರಮಗಳ ಯೋಜನೆಗಳನ್ನು ರೂಪಿಸಿ, ತಮ್ಮ ಬೇಡಿಕೆಗಳನ್ನು ಮಾ. 5ರೊಳಗಾಗಿ ಸಲ್ಲಿಸಬೇಕು ಎಂದರು.
ಉತ್ಸವದ ಈ ಬಾರಿಯ ಕ್ರಿಡಾಕೂಟದಲ್ಲಿ ಹೆಚ್ಚು ಕ್ರೀಡೆಗಳು ಬೇಡ. ಇದರ ಬದಲಿಗೆ ವಿಶೇಷವಾಗಿ ಹೊನಲು ಬೆಳಕಿನ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿಯನ್ನು ಜನರ ಹೆಚ್ಚು ಆಕರ್ಷಣೆಯನ್ನು ಸೆಳೆಯುವ ರೀತಿಯಲ್ಲಿ ಹಮ್ಮಿಕೊಳ್ಳಿ. ಈ ಪಂದ್ಯಗಳು ಎರಡು ದಿನಗಳ ಕಾಲ ನಡೆಯಬೇಕು. ಕನಿಷ್ಠ 20 ರಿಂದ 30 ತಂಡಗಳು ಪದ್ಯಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ. ಇದರ ಜೊತೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಕ್ರಿಕೇಟ್ ಪಂದ್ಯವನ್ನು ಸಹ ಹಮ್ಮಿಕೊಳ್ಳಲು ಕ್ರೀಡಾ ಸಮಿತಿಯ ಅಧಿಕಾರಿಗಳು ನೋಡಿಕೊಳ್ಳಬೇಕು. ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಉತ್ಸವ ಆಚರಣೆ ಸಂದರ್ಭದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಉತ್ಸವದಲ್ಲಿ ಈ ಬಾರಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಆರೋಗ್ಯ ಶಿಬಿರದಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ. ಉತ್ಸವದ ಕವಿಗೋಷ್ಠಿಗಾಗಿ ಪ್ರತ್ಯೇಕ ಸಮಿತಿ ರಚಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮೆರವಣಿಗೆ, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೂ ಕ್ರಮ ವಹಿಸಬೇಕು. ಉತ್ಸವ ಸಂದರ್ಭದಲ್ಲಿ ಕನಕಗಿರಿ ಪಟ್ಟಣ, ದೇವಸ್ಥಾನ, ವೇದಿಕೆ ಮಾರ್ಗ ಹಾಗೂ ಐತಿಹಾಸಿಕ ಸ್ಮಾರಕ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಜೆಸ್ಕಾಂ ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಬ್ಯಾನರ್ ಅಳವಡಿಕೆ ಮತ್ತು ಬಸ್‌ಗಳ ಮೇಲೆ ಉತ್ಸವದ ಪೋಸ್ಟರ್‌ಗಳನ್ನು ಲಗತ್ತಿಸುವ ಮೂಲಕ ಕನಕಗಿರಿ ಉತ್ಸವದ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಬೇಕು. ಒಟ್ಟಾರೆ ಕನಕಗಿರಿ ಉತ್ಸವವನ್ನು ವ್ಯವಸ್ಥಿತವಾಗಿ ಆಚರಿಸಲು ಎಲ್ಲಾ ಸಮಿತಿಗಳು ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಕೊಪ್ಪಳ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಟಿ.ಲಿಂಗರಾಜು, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಗಂಗಾವತಿ ತಹಶಿಲ್ದಾರರ ಯು.ನಾಗರಾಜ್, ಕನಕಗಿರಿ ತಹಶಿಲ್ದಾರರ ವಿಶ್ವನಾಥ್ ಮುರಡಿ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.