ಉತ್ಪಾದನೆ ಕುಸಿತ* ಮಾರುಕಟ್ಟೆಯಲ್ಲಿ ನೀರೀಕ್ಷಿತ ಪ್ರಮಾಣದಲ್ಲಿ ಕಾಣದ ಕಲ್ಲಂಗಡಿ* ಬೆಳೆಗಾರರು ಕಂಗಾಲು
ಮಾಂಜರಿ /ಸಂತೋಷ್ ಕುಮಾರ್ ಕಾಮತ್
ಶಿವರಾತ್ರಿ ಹಬ್ಬ ಮುಗಿದಮೇಲೆ ಕಲ್ಲಂಗಡಿ ಸೀಜನ್ ಬಂತೆಂದೇ ಅರ್ಥ. ಆದರೆ ಈ ಬಾರಿ ಜಿಲ್ಲೆಯಲ್ಲಿ ಕಲ್ಲಂಗಡಿ ಉತ್ಪಾದನೆ ಕಡಿಮೆಯಾಗಿದ್ದು, ಬೇಸಿಗೆಯ ಬಿಸಿಲಿನೊಂದಿಗೆ ಕಲ್ಲಂಗಡಿ ಬೆಲೆಯೂ ಏರಿಕೆಯಾಗುವ ಸಾಧ್ಯತೆಗಳಿವೆ.
ಮಹಾಶಿವರಾತ್ರಿ ಹೊತ್ತಿಗೆ ಶಿವ, ಶಿವಾ ಎನ್ನುವಷ್ಟು ಬಿಸಿಲು ಆರಂಭವಾಗುತ್ತದೆ ಎಂಬುದು ಲೋಕಾನುಭವದ ಮಾತು. ಅದರಂತೆ ಈಗಾಗಲೇ ಬೆಳಗಿನ ಜಾವ ಮಂಜು ಕವಿದ ವಾತಾವರಣ ದೊಂದಿಗೆ ಚಳಿಯ ಅನುಭವವಾದರೂ ಹೊತ್ತು ಏರಿದಂತೆ ತಾಪಮಾನವೂ ವಿಪರೀತವಾಗುತ್ತಿದೆ. ಸೂರ್ಯನ ಕಿರಣಗಳ ಪ್ರಕೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರು ಕಲ್ಲಂಗಡಿಯಂತಹ ಶೀತ ಪ್ರಕೃತಿಯ ಹಣ್ಣು ಪಾನೀಯಗಳ ಮೊರೆ ಹೋಗುವುದು ಸಾಮಾನ್ಯ. ಆದರೆ ಈ ವರ್ಷ ಬಿಸಿಲಿನ ಧಗೆ ಏರಿಕೆಯಾಗುತ್ತಿದ್ದರೂ ಮಾರುಕಟ್ಟೆಯಲ್ಲಿ ನೀರೀಕ್ಷಿತ ಪ್ರಮಾಣದಲ್ಲಿ ಕಲ್ಲಂಗಡಿ ಕಂಡುಬರುತ್ತಿಲ್ಲ.
ಬೆಳೆ ಕುಂಠಿತ: ಪ್ರತಿವರ್ಷ ಇಷ್ಟೊತ್ತಿಗಾಗಲೇ ಸಾಕಷ್ಟು ಕಲ್ಲಂಗಡಿ ರಾಶಿಗಳು ಕಾಣಸಿಗುತ್ತಿದ್ದವು. ಜನರೂ ಕೂಡ ಬಿಸಿಲಿನ ತಾಪ ಪರಿಹರಿಸಿಕೊಳ್ಳಲು ಖರೀದಿಯಲ್ಲಿ ತೊಡಗುತ್ತಿರುವ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಬಂಗಾಳ ಕೊಲ್ಲಿಯ ಚಂಡಮಾರುತದಿಂದಾಗಿ ತಮಿಳುನಾಡು, ಆಂಧ್ರ ಭಾಗದಲ್ಲಿ ಕಲ್ಲಂಗಡಿ ಉತ್ಪಾದನೆ ಕುಂಠಿತಗೊಂಡಿದೆ. ಅಲ್ಲದೆ, ಹವಾಮಾನ ವೈಪರೀತ್ಯದಿಂದ ಸ್ಥಳೀಯವಾಗಿಯೂ ಕಲ್ಲಂಗಡಿ ಇಳುವರಿ ಕಡಿಮೆಯಾಗಿದೆ. ಹೀಗಾಗಿಯೇ ಈ ವರ್ಷ ಬೇಡಿಕೆಗೆ ತಕ್ಕಂತೆ ಸುತ್ತಮುತ್ತ ಕಲ್ಲಂಗಡಿ ಸಿಗುತ್ತಿಲ್ಲ. ಹೊರಜಿಲ್ಲೆ, ಹೊರ ರಾಜ್ಯಗಳಿಂದ ಕಲ್ಲಂಗಡಿ ಬರಬೇಕಾಗಿರುವುದರಿಂದ ಸಾಗಾಣಿಕೆ ವೆಚ್ಚ ಸೇರಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಬಹುದು ಎನ್ನಲಾಗಿದೆ.
ಜಿಲ್ಲೆಗೆ ಬರುವ ಕಲ್ಲಂಗಡಿಯಲ್ಲಿ ನಾಮಧಾರಿ ಹಾಗೂ ಕಿರಣ್ ತಳಿಗಳು ಪ್ರಮುಖವಾಗಿವೆ. ಭಟ್ಕಳ, ತಮಿಳುನಾಡಿನ ಸೇಲಂ, ಪಾಂಡಿಚರಿಯಿಂದ ಬರುವ ನಾಮಧಾರಿ ತಳಿಗಳ ಉತ್ಪಾದನೆ ಚಂಡಮಾರುತದ ಕಾರಣ ವ್ಯತ್ಯಾಸವಾಗಿದೆ. ಇನ್ನು, ಹವಾಮಾನ ವೈಪರೀತ್ಯದ ಕಾರಣ ಸ್ಥಳೀಯವಾಗಿ ಕೂಡ ಈ ತಳಿಯನ್ನು ಸಾಕಷ್ಟು ಕಡೆ ಬೆಳೆದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಚಿಕ್ಕ ಗಾತ್ರದ ಕಿರಣ್ ತಳಿಯನ್ನು ವರ್ಷಪೂರ್ತಿ ಬೆಳೆಯಬಹುದಾಗಿದ್ದು, ಇದಕ್ಕೆ ಯಾವುದೇ ಸೀಜನ್ ಇಲ್ಲ. ಗಾತ್ರದಲ್ಲಿ ಚಿಕ್ಕವಾದರೂ ಹೆಚ್ಚು ರುಚಿಯಾಗಿರುವ ಕಾರಣಕ್ಕೆ ಜನರು ಇವುಗಳನ್ನು ಇಷ್ಟಪಡುತ್ತಾರೆ. ಸದ್ಯ ಪ್ರತಿ ಕೆ.ಜಿ ಕಿರಣ್ ತಳಿಗೆ 10-12 ರೂ. ಬೆಲೆ ಇದ್ದು, ಶಿವರಾತ್ರಿ ವೇಳೆಗೆ 20 ರೂ. ದರವಾಗುವ ನೀರೀಕ್ಷೆ ಇದೆ. ಈ ತಳಿಯನ್ನು ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಮತ್ತು ನೀರಿನ ಸೌಕರ್ಯ ಇರುವ ಭಾಗದಲ್ಲಿ ಬೆಳೆಯುತ್ತಾರಾದರೂ, ಈ ವರ್ಷ ಸ್ಥಳೀಯವಾಗಿ ಶೇ.70ರಷ್ಟು ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಕಲ್ಲಂಗಡಿ ಬರುತ್ತಿದೆ.
ಬೇಡಿಕೆಯಷ್ಟು ಪೂರೈಕೆಯಿಲ್ಲ: ದೊಡ್ಡಗಾತ್ರದ ನಾಮಧಾರಿ ತಳಿಗೆ ಸೀಜನ್ ಇದ್ದರೂ, ಹೊರರಾಜ್ಯಗಳಲ್ಲಿ ಋತುಮಾನ ವ್ಯತ್ಯಾಸವಾಗುವುದರಿಂದ ಮಳೆಗಾಲ ಹೊರತುಪಡಿಸಿ ವರ್ಷದ 9 ತಿಂಗಳು ಕೂಡ ಈ ತಳಿ ಜಿಲ್ಲೆಗೆ ಬರುತ್ತದೆ. ನಮ್ಮ ರಾಜ್ಯದ ನದಿ ತೀರದ ಗ್ರಾಮದ ಮತ್ತು ಇನ್ನುಳಿದ ಪ್ರದೇಶದಿಂದಲೂ ಕಲ್ಲಂಗಡಿ ಬರಲಿದ್ದು, ದೂರದಿಂದ ತರಿಸಿಕೊಳ್ಳುವುದರಿಂದ ನಮಗೇ ಪ್ರತಿ ಕೆಜಿಗೆ 26 ರೂ. ಬೀಳುತ್ತದೆ. ಗ್ರಾಹಕರಿಗೆ 35-40 ರೂ.ಗಳಿಗೆ ಮಾರುವುದು ಅನಿವಾರ್ಯವಾಗುತ್ತದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಹಣ್ಣು ಮಾರುಕಟ್ಟೆಗೆ ಬರುತ್ತಿದ್ದರೂ ಸುಗ್ಗಿ ಈಗಷ್ಟೇ ಆರಂಭವಾಗಿದೆ. ಆವಕದ ಪ್ರಮಾಣ ನೀರೀಕ್ಷಿತ ಮಟ್ಟದಲ್ಲಿಲ್ಲ. ಆದರೆ ಶಿವರಾತ್ರಿ ಹಬ್ಬ ಹಾಗೂ ಬೇಸಿಗೆಯ ಕಾರಣಕ್ಕೆ ಬೇಡಿಕೆ ಹೆಚ್ಚಿದೆ. ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಈ ವಾರ ಶಿವರಾತ್ರಿ ಹಬ್ಬ ಮುಗಿಯುವುದರಿಂದ ಇನ್ನು ನಾಲೈದು ದಿನಗಳಲ್ಲಿ ಜಿಲ್ಲೆಗೆ ಹೊರಜಿಲ್ಲೆ, ಹೊರ ರಾಜ್ಯಗಳ ಕಲ್ಲಂಗಡಿ ಆಗಮಿಸಲಿದ್ದು, ಭರಪೂರ ದಾಸ್ತಾನು ನೀರೀಕ್ಷಿಸಲಾಗಿದೆ. ಆದರೆ ಹಬ್ಬದ ನಂತರ ಕಲ್ಲಂಗಡಿ ಬೆಲೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ.