ಜಿಲ್ಲಾ ಮಕ್ಕಳ ರಕ್ಷಣಾ ಘಟಕ: ವಿಭಾಗ ಮಟ್ಟದ ಕಾರ್ಯಾಗಾರ

District Child Protection Unit: Division Level Workshop

ಜಿಲ್ಲಾ ಮಕ್ಕಳ ರಕ್ಷಣಾ ಘಟಕ: ವಿಭಾಗ ಮಟ್ಟದ ಕಾರ್ಯಾಗಾರ 

 ಬೆಳಗಾವಿ, ಮಾ,01 : ಮಕ್ಕಳ ಸಂರಕ್ಷಣೆಯ ವಿಶೇಷ ಕಾಯ್ದೆಗಳಾದ ಪೊಕ್ಸೋ, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಬಾಲ್ಯ ವಿವಾಹ ನಿಷೇಧ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ಹೆಣ್ಣು ಭ್ರೂಣ ಹತ್ಯೆ, ಭ್ರೂಣ ಪತ್ತೆ ನಿಷೇಧ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಮಕ್ಕಳು ದೇಶದ ಆಸ್ತಿ, ಅವರ ರಕ್ಷಣೆ, ಸುರಕ್ಷತೆ  ನಮ್ಮೆಲ್ಲರ  ಜವಾಬ್ದಾರಿ ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ಅವರು ತಿಳಿಸಿದರು.  

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಸುವರ್ಣ ವಿಧಾನಸೌಧ ಸೆಂಟ್ರಲ್ ಹಾಲ್ ನಲ್ಲಿ ಶನಿವಾರ (ಮಾ.01) ನಡೆದ "ಮಕ್ಕಳ ರಕ್ಷಣಾ ಕಾಯ್ದೆಗಳ ಅನುಷ್ಠಾನಗೊಳಿಸುವಲ್ಲಿ ಅಧಿಕಾರಗಳ ಪಾತ್ರ" ಕುರಿತು ಬೆಳಗಾವಿ ವಿಭಾಗ ಮಟ್ಟದ ತರಬೇತಿ  ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.  

ಎಲ್ಲ ವಲಯಗಳಲ್ಲಿ ಮಕ್ಕಳಿಗೆ ರಕ್ಷಣೆ ಒದಗಿಸಲು ಪ್ರತಿ ಇಲಾಖೆ ಕಾರ್ಯ ನಿರ್ವಹಿಸಬೇಕು. ಮೂರು ತಿಂಗಳಲ್ಲಿ ಕನಿಷ್ಠ ಒಂದು ಬಾರಿ ಮಕ್ಕಳ ರಕ್ಷಣೆ ಕುರಿತು ಸಭೆಗಳನ್ನು ಆಯೋಜಿಸಬೇಕು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸಭೆಗಳಿಗೆ ಹಾಜರಿರಬೇಕು. ಅದೇ ರೀತಿಯಲ್ಲಿ ರಕ್ಷಣಾ ಸಮಿತಿಗಳ ಸಹಯೋಗದಲ್ಲಿ ವ್ಯಾಪಕ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.  

ಮಾದಕ ದ್ರವ್ಯ, ಮೊಬೈಲ್ ವ್ಯಸನ ಎಲ್ಲವನ್ನೂ ಮಕ್ಕಳಿಂದ ದೂರ ಇರಿಸಬೇಕು. ಮಕ್ಕಳಗೆ ಹೊರಾಂಗಣ ಕ್ರೀಡಾ ಚಟುವಟಿಕೆಗಳು ಸೂಕ್ತ ಆದರೆ ಬದಲಿಗೆ ಮೊಬೈಲ್, ಟಿವಿ ವ್ಯಸನಿಗಳಾಗಿ ಬದಲಾಗದಂತೆ ನೋಡಿಕೊಳ್ಳಬೇಕು.  


ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು:  

ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಪ್ರತಿ ಶಾಲೆಗಳಲ್ಲಿ ಆಟಗಳಲ್ಲಿ ಸಮಯ ನಿಗದಿಪಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಸೂಚಿಸಬೇಕು. ಪ್ರತಿ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಫಲಕ ಕಡ್ಡಾಯವಾಗಿ ಅಳವಡಿಸಬೇಕು. ಮಕ್ಕಳಿಗೆ ತೊಂದರೆ ಎದುರಾದಲ್ಲಿ ತುರ್ತಾಗಿ ಸೇವೆ ಒದಗಿಸಬೇಕು ಎಂದು ಕೆ. ನಾಗಣ್ಣಗೌಡ ಸೂಚನೆ ನೀಡಿದರು.  

ಕಾಯ್ದೆಗಳ ಅನುಷ್ಠಾನದ ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ತೊಂದರೆಯಾಗದಂತೆ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಅಧಿಕಾರಿಗಳು ಮಕ್ಕಳ ರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯ ತೋರಿದೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.  


ಜಾಗೃತಿ ಅಭಿಯಾನ ಹೆಚ್ಚಿಸಿ:  

ವಿವಾಹ ವಯೋಮಿತಿ ಸರ್ಕಾರದ ನಿಗದಿ ಅನ್ವಯವಿರಬೇಕು. ಒಂದುವೇಳೆ ಬಾಲ್ಯ ವಿವಾಹವಾಗಿ ಗರ್ಭವಸ್ಥೆಯಲ್ಲಿದ್ದರೆ ಡಾಕ್ಟರ್ ಗಳ ಗಮನಕ್ಕೆ ಬಂದ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.  

ಅಂಗನವಾಡಿ ಕಾರ್ಯಕರ್ತರ ಮೂಲಕ ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸೂಚನೆ ನೀಡಬೇಕು.  

ಮಕ್ಕಳ ರಕ್ಷಣೆಗೆ ನಿರಂತರ ದಾಳಿಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳ ರಕ್ಷಣೆಯ ನಂತರ ರಕ್ಷಣೆಯಾದ ಮಗು ವ್ಯವಸ್ಥಿತ ಹಂತಕ್ಕೆ ಬರೋವರೆಗೂ ಮಕ್ಕಳನ್ನು ನೋಡಿಕೊಳ್ಳಬೇಕು.  

ಮಕ್ಕಳ ಗ್ರಾಮ ಸಭೆಯಲ್ಲಿ ಶಾಲೆಗಳಿಗೆ ಸರಿಯಾದ ಸಮಯಕ್ಕೆ ತಲುಪುವಂತೆ ಮಕ್ಕಳಿಗೆ ಬಸ್ ವ್ಯವಸ್ಥೆ, ರಕ್ಷಣೆ, ಹಕ್ಕುಗಳ ಉಲ್ಲಂಘನೆ ಸೇರಿದಂತೆ ಮಕ್ಕಳ ಸಂರಕ್ಷಣೆಯ ಕುರಿತು ಕಡ್ಡಾಯವಾಗಿ ಚರ್ಚೆಗಳಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ಹೇಳಿದರು.  

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸದಸ್ಯೆ ಅಪರ್ಣಾ ಕೊಳ್ಳಾ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಸುಲಭವಾಗಿ ಅನುಷ್ಠಾನಗೊಳಿಸಲು ಕಾಯ್ದೆಗಳನ್ನು ಅರಿತುಕೊಳ್ಳಬೇಕು. ಚಿಕ್ಕೋಡಿಯಲ್ಲಿ ಮಕ್ಕಳ ರಕ್ಷಣೆಗಳ ಕುರಿತು ನೂತನವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ಅಧಿಕಾರಿಗಳು ರಕ್ಷಣೆಗೊಂಡ ಮಕ್ಕಳ ಮೇಲೆ ನಿಗಾ ವಹಿಸಬೇಕು. ಇದರಿಂದ ಅಂತಹ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿ ಕೊಡಬಹುದು ಎಂದು ಹೇಳಿದರು.  

ಎಲ್ಲ ಅಧಿಕಾರಿಗಳು ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕು. ಬಾಲ್ಯ ವಿವಾಹ, ಪೊಕ್ಸೋ ಪ್ರಕರಣಗಳ ಮಾಹಿತಿ ಗಮನಿಸಿದಾಗ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 7 ರಿಂದ 8 ಮಕ್ಕಳಿಗೆ ತೊಂದೆಯಾಗಿದೆ.  

ಸರ್ಕಾರಿ ಶಾಲೆಗಳ ಮಕ್ಕಳು 7 ದಿನಗಳ ಕಾಲ ನಿರಂತರವಾಗಿ ಶಾಲೆಗೆ ಬಾರದೆ ಹೋದರೆ ಅಂತಹ ಮಕ್ಕಳ ಮಾಹಿತಿ ಪಡೆದು ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸಬೇಕು. ಪೊಕ್ಸೋ ಪ್ರಕರಣಗಳಲ್ಲಿ ಕೆಲವು ಇಲಾಖೆಗಳು ದೂರು ದಾಖಲಿಸಿದ ಉದಾಹರಣೆಗಳೆ ಇಲ್ಲ.   

ಸರ್ಕಾರಿ ಶಾಲೆಯಲ್ಲಿ ಶಾಲೆ ಬಿಟ್ಟುಹೋದ ಮಕ್ಕಳ ಮಾಹಿತಿ ಕಲೆಹಾಕಬೇಕು. ಮಕ್ಕಳ ಮೇಲಿನ ದೌರ್ಜನ್ಯ ಸಮಾಜದ ಅತೀ ಕೆಟ್ಟ ಪಿಡುಗು. ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅಪರ್ಣಾ ಕೊಳ್ಳಾ ಅವರು ತಿಳಿಸಿದರು.  


ಮಕ್ಕಳ ಸಾಗಾಣಿಕೆಗೆ ಕಡಿವಾಣ ಅಗತ್ಯ:   

ಗಡಿ ಭಾಗಗಳಲ್ಲಿ ಅನೈತಿಕವಾಗಿ ಮಕ್ಕಳ ಸಾಗಾಣಿಕೆ ಪ್ರಕರಣಗಳು ಕಂಡು ಬರುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಕ್ಕಳ ಅಪಹರಣ, ಸಾಗಾಣಿಕೆ ಪ್ರಕರಣಗಳು ದಾಖಲಾಗಿವೆ.  

ರಾಜ್ಯದಲ್ಲಿ 4 ಸಾವಿರ 39 ಪಾಲಕರು ಮಕ್ಕಳ ಬೇಕು ಎಂಬ ಅರ್ಜಿಗಳು ಬಂದಿವೆ. ಅಂತಹದರಲ್ಲಿ ಮಕ್ಕಳ ಮಾರಾಟ, ಸಾಗಾಣಿಕೆಗೆ ಮುಖ್ಯವಾಗಿ ಕಡಿವಾಣ ಹಾಕಿ ಅವರ ಭವಿಷ್ಯ ರೂಪಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಹೇಳಿದರು.  

ಕೆಲವು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಭ್ರೂಣ ಹತ್ಯೆ, ಗರ್ಭಪಾತ ಪ್ರಕರಣಗಳು ಕಂಡು ಬಂದಿವೆ. ಮಕ್ಕಳ ರಕ್ಷಣೆಗೆ ಅಧಿಕಾರಿಗಳ ಜೊತೆಗೆ ಸಾರ್ವಜನಿಕ ಸಹಭಾಗಿತ್ವದ ಜವಾಬ್ದಾರಿ ತೆಗೆದುಕೊಳ್ಳಬೇಕು. ಮಹರಾಷ್ಟ್ರ, ಗೋವಾ ರಾಜ್ಯಗಳಿಗೆ ಮಕ್ಕಳ ಸಾಗಾಣಿಕೆಯಾಗುತ್ತಿವೆ ಇದರ ಕಡಿವಾಣಕ್ಕೆ ಮೇಲುಸ್ತುವಾರಿ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಬೇಕು.  


ವಿದ್ಯಾರ್ಥಿ ವೇತನ; ತಾಂತ್ರಿಕ ದೋಷ ನಿವಾರಣೆಗೆ ಅಧಿಕಾರಿಗಳ ಜವಾಬ್ದಾರಿ:   

ಬಾಲ್ಯ ವಿವಾಹ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಇನ್ನಷ್ಟು ಕೆಲಸ ಮಾಡಬೇಕಿದೆ. ಜಾಗೃತಿ, ಅರಿವು ಅಭಿಯಾನಗಳನ್ನು ಹೆಚ್ಚಾಗಿ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅಧಿಕಾರಿಗಳು ಮಕ್ಕಳ ಕಾನೂನಾತ್ಮಕ ಪೋಷಕರು ಹಾಗಾಗಿ ಅಧಿಕಾರಿಗಳು ಪ್ರಕರಣ ದಾಖಲಿಸಲು ಹಿಂದೇಟು ಹಾಕಬಾರದು ಎಂದು ತಿಳಿಸಿದರು.  

ವಿದ್ಯಾರ್ಥಿ ವೇತನಕ್ಕಾಗಿ ಬಹಳಷ್ಟು ವಿದ್ಯಾರ್ಥಿಗಳ ಆಧಾರ್‌- ಬ್ಯಾಂಕ್ ಖಾತೆಗೆ ಜೋಡಣೆಯಾಗಿಲ್ಲ. ಇದು ವಿದ್ಯಾರ್ಥಿಗಳ ಜವಾಬ್ದಾರಿಯಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಖುದ್ದಾಗಿ ಅಂತಹ ಮಕ್ಕಳನ್ನು ಪಟ್ಟಿ ಮಾಡಿ ಆಧಾರ-ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಸುವುದು ಅಧಿಕಾರಿಗಳ ಜವಾಬ್ದರಿಯಾಗಿದೆ ಎಂದು ಶಶಿಧರ ಕೋಸಂಬೆ ಹೇಳಿದರು.  

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ. ಮುರಳಿ ಮೋಹನ ರೆಡ್ಡಿ ಮಾತನಾಡಿ, ಮಕ್ಕಳು ಹೆಚ್ಚಾಗಿ ಮೊಬೈಲ್‌-ಟಿವಿ ವ್ಯಸನಿಗಳಾಗಿದ್ದಾರೆ ಅವರಿಗೆ ತಿಳಿಹೇಳುವ ಕೆಲಸವಾಗಬೇಕು ಎಂದರು.  

ಕರ್ನಾಟಕ ಸರ್ಕಾರದ ಯೋಜನೆಯಾದ "ಸಂತ್ರಸ್ತರ ಪರಿಹಾರ ಯೋಜನೆ" ಮೂಲಕ ಫೋಕ್ಸೋ ಸಂತ್ರಸ್ತರು, ಎಸ್‌.ಸಿ ಎಸ್‌.ಟಿ ವರ್ಗದ ಸಂತ್ರಸ್ತರಿಗೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಪರಿಹಾರ ಒದಗಿಸಲಾಗುವುದು ಈ ಕುರಿತು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳಬೇಕು.  


ಸಂತ್ರಸ್ತರ ಪರ ಉಚಿತ ಕಾನೂನು ಸೇವೆ:   

ಪರಿಹಾರ ವಿತರಣೆಯಲ್ಲಿ ಎರಡು ವಿಧಗಳಿವೆ ಮಧ್ಯಂತರ ಪರಿಹಾರ ಮತ್ತು ಕೊನೆಯ ಪರಿಹಾರ ಇದಕ್ಕೆ ಸಂತ್ರಸ್ತರು ಕಡ್ಡಾಯವಾಗಿ ಪೊಲೀಸ್ ತನಿಖೆಗೆ ಸಹಕಾರ ನೀಡಬೇಕು. ನ್ಯಾಯಾಲಯದಲ್ಲಿ ಸರಿಯಾದ ಹೇಳಿಕೆ ನೀಡಬೇಕು. ಅವರಿಗೆ ಸಂಪೂರ್ಣ ರಕ್ಷಣೆ ಜವಾಬ್ದಾರಿಯನ್ನು ನೀಡಲಾಗುವುದು.  

ಕಾನೂನು ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳನ್ನು ಒದಗಿಸಲಾಗುವುದು. ಮಕ್ಕಳ ರಕ್ಷಣೆ ಪೊಲೀಸ್ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸ ಮಾತ್ರವಲ್ಲ, ಸಂಬಂಧಿಸಿದ ಎಲ್ಲ ಇಲಾಖೆಗಳು ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಪಿ. ಮುರಳಿ ಮೋಹನ್ ರೆಡ್ಡಿ ಅವರು ಹೇಳಿದರು.  


ಕಡ್ಡಾಯ ದೂರು ದಾಖಲಿಸಲು ಅಧಿಕಾರಿಗಳಿಗೆ ಸೂಚನೆ:  

ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯಡಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಮಕ್ಕಳ ರಕ್ಷಣೆಯ ನಂತರ ಪ್ರಕರಣ ದಾಖಲಿಸುವುದು ಅಧಿಕಾರಿಗಳ ಸವಾಲಿನ ಕೆಲಸವಾಗಿದೆ. ಯಾವುದೇ ಒತ್ತಡಕ್ಕೆ ಮಣಿಯದೇ ಕಾನೂನು ಪೊಲೀಸ್ ಇಲಾಖೆ ನೆರವು ಪಡೆದು ಧೈರ್ಯವಾಗಿ ಪ್ರಕರಣ ದಾಖಲಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು. 

ಅಧಿಕಾರಿಗಳ ವ್ಯಾಪ್ತಿಯಲ್ಲಿರುವ ಮಕ್ಕಳ ರಕ್ಷಣೆ ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ. ಕೆಲವು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಬ್ಯಾಂಕ್ ಆಧಾರ ಜೋಡಣೆ ಆಗಬೇಕಿದೆ ಇದಕ್ಕಾಗಿ ಈಗಾಗಲೇ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ.  

ಬಾಲಕಿಯರು ಪ್ರೌಢಾವಸ್ಥೆಯಲ್ಲಿ ಗರ್ಭಿಣಿಯಾದ ಪ್ರಕರಣಗಳು ಕಂಡು ಬಂದರೆ ಅವರ ರಕ್ಷಣೆ ಬಹಳ ಕಷ್ಟಕರ. ಅಂತಹ ಮಕ್ಕಳ ಪರಿಸ್ಥಿತಿ ನಿಜಕ್ಕೂ ಊಹಿಸಲು ಸಾಧ್ಯವಾದಷ್ಟು ಕೆಟ್ಟದ್ದು, ಇಂತಹ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳು ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ರೋಷನ್ ಸೂಚನೆ ನೀಡಿದರು.  


ಕಾರ್ಯಾಗಾರದ ಮಾಹಿತಿ:  

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಹಿಳಾ ಕಲ್ಯಾಣ ಸಂಸ್ಥೆಯ ಯೋಜನಾ ಸಂಯೋಜಕರಾದ ಸುರೇಖಾ ಪಾಟೀಲ ಮಕ್ಕಳ ವಲಸೆ, ಗುಳೆ, ಮಕ್ಕಳ ಸಾಗಾಣಿಕೆ, ಮಕ್ಕಳ ಬಿಕ್ಷಾಟನೆ ನಿರ್ಮೂಲನೆ, ಪೊಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.  

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಹಾವೇರಿ ಜಿಲ್ಲಾ ಪೊಲೀಸ್ ತರಬೇತುದಾರ ಮಲ್ಲೇಶ ಜಾಲಗಾರ ಮಾತನಾಡಿ "ಬಾಲ ನ್ಯಾಯ ಕಾಯ್ದೆ-2015", ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಕಾಯ್ದೆ, "ಮಕ್ಕಳ ಬಿಕ್ಷಾಟನೆ ನಿರ್ಮೂಲನೆ" ಕುರಿತು ಮಾಹಿತಿ ನೀಡಿದರು.  

ಅದೇ ರೀತಿಯಲ್ಲಿ "ಮಿಷನ್ ವಾತ್ಸಲ್ಯ" ಮೂಲಕ ತುರ್ತು ಪರಿಸ್ಥಿತಿಯಲ್ಲಿ 24ಘಿ7 ಉಚಿತ ಮಕ್ಕಳ ಸಹಾಯವಾಣಿ ಕಾರ್ಯಾಚರಣೆಯಲ್ಲಿದೆ. ಭಿಕ್ಷಾಟನೆ ಮಾಡುತ್ತಿರುವ ಮಕ್ಕಳು, ಬಾಲ ಕಾರ್ಮಿಕ ಮಕ್ಕಳು, ಕಾಣೆಯಾದ ಮಕ್ಕಳು, ಒಂಟಿ ಮಕ್ಕಳು, ಮಾದಕ ವ್ಯಸನಿ, ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ಅತ್ಯಾಚಾರ, ಶಿಕ್ಷಣ ವಂಚಿತ ಮಕ್ಕಳು ಕಂಡು ಬಂದಲ್ಲಿ ತಕ್ಷಣವೇ 1098 ಅಥವಾ 112 ಗೆ ಕರೆ ಮಾಡಬಹುದು.   

ಅಸುರಕ್ಷಿತ ಸ್ಪರ್ಶ (ಗಓಖಂಈಇ ಖಿಓಗಅಊ), ಸುರಕ್ಷಿತ ಸ್ಪರ್ಶ (ಖಂಈಇ ಖಿಓಗಅಊ) ಕುರಿತು ಕಾರ್ಯಾಗಾರದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.  

ಮಕ್ಕಳ ವಿಶೇಷ ಪೊಲೀಸ್ ಘಟಕದ ನೋಡಲ್ ಅಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರಿ​‍್ಬ ಬಸರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್‌. ನಾಗರಾಜ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಶೇಖರ ಸುಖಸಾರೆ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಗದೀಶ್ ಸರಿಕರ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.