ಉರ್ದು ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ
ಮಹಾಲಿಂಗಪುರ 01: ಯಾವುದೇ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ಧೇಶದಿಂದ, ರಾಜ್ಯ ಸರ್ಕಾರ ಪ್ರತಿ ವರ್ಷ ರಾಜ್ಯದ ತಲಾ ವಿದ್ಯಾರ್ಥಿಗೆ 20 ಸಾವಿರ ಹಣವನ್ನು ವ್ಯಯ ಮಾಡುತ್ತಿದೆ.ಅಂದರೆ ಬಿಸಿ ಊಟ, ಸಮವಸ್ತ್ರ, ಮೊಟ್ಟೆ, ಹಾಲು ಇತ್ಯಾದಿಗಳನ್ನು ನೀಡುತ್ತಿದೆ ಎಂದು ಮೂಡಲಗಿಯ ಯುವ ಮುಖಂಡ ಸಾಕೀಬ್ ಪೀರಜಾದೆ ಹೇಳಿದರು.
ಸೋಮವಾರ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ (ಸಾಧು ಗುಡಿ)ಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಷ್ಟೆಲ್ಲ ಅವಕಾಶಗಳು ಸರ್ಕಾರದಿಂದ ಲಭ್ಯವಿರುವಾಗ, ಅಲ್ಪಸಂಖ್ಯಾತರು ತಮ್ಮ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಲು ಅವಕಾಶ ಮಾಡಿ ಕೊಡದೆ, ಸರ್ಕಾರ ನೀಡುತ್ತಿರುವ ವಿಫೂಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಲ್ಪಸಂಖ್ಯಾತ ಮುಖಂಡರಲ್ಲಿ ಮನವಿ ಮಾಡಿದರು. ಶಿಕ್ಷಣಕ್ಕೆ ಸರ್ಕಾರದ ಕೊಡುಗೆಗಳ ಬಗ್ಗೆ ತಿಳಿಸಿದರು.
5ನೇ ತರಗತಿಯ ಇಕ್ರಾ ತಟಗಾರ ಹಾಗೂ ರಖೀಬಾ ಪೀರಜಾದೆ ವರ್ಷದ ಶ್ರೇಷ್ಠ ವಿದ್ಯಾರ್ಥಿಗಳಾಗಿ ಆಯ್ಕೆಗೊಂಡು ಶಾಲೆಯಿಂದ ಪಾರಿತೋಷಕ ಮತ್ತು ಸರ್ಟಿಫಿಕೇಟ್ ಪಡೆದುಕೊಂಡರು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಮತ್ತು ಗಣ್ಯರನ್ನು ಸತ್ಕರಿಸಲಾಯಿತು.
ಶಾಲೆಯ ಮಕ್ಕಳು ನೃತ್ಯ, ಗಾಯನ ಮತ್ತು ಬೇರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೇರಿದ ಜನರನ್ನು ರಂಜಿಸಿದರು. ಸುಲ್ತಾನಸಾಬ ನದಾಫ್, ಸಯ್ಯದ್ ನದಾಫ, ಫಾರೂಕ್ ಪಕಾಲಿ, ಶಿಕ್ಷಕರಾದ ಮೂಸಾ ಅಲಾಸ್, ಮುಬಾರಕ್ ಮುನ್ನೂರ, ಡಾ. ಅಜ್ಹರ್ ಕೋಲಾರ, ಅಬ್ದುಲ್ ಆಲಗೂರ, ಎಸ್. ಡಿ. ಎಂ. ಸಿ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಏಜಾಜ್ ಆಹ್ಮದ ಬಾಗೇವಾಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.