ಆಸ್ತಿಗಾಗಿ ವಾಮಾಚಾರ : ಸಿದ್ಧಾಳ ಕುಟುಂಬದ ವಿರುದ್ಧ ದೂರು ನೀಡಿದ ವಿಜಯ ಸಂಕೇಶ್ವರ ಪುತ್ರಿ

ಬೆಳಗಾವಿ 02 : ತಮಗೆ ವಾಮಾಚಾರ ಮಾಡಿಸುವ ಮೂಲಕ ತನ್ನ ಆಸ್ತಿ ಕಬಳಿಸಲು ಯತ್ನ ನಡೆಸಿದ್ದಾರೆಂದು ದೂರಿರುವ ಉದ್ಯಮಿ ವಿಜಯ ಸಂಕೇಶ್ವರ ಅವರ ಪುತ್ರಿ ಬೆಳಗಾವಿಯ ಮಾಜಿ‌ ಸಂಸದ ದಿ. ಎಸ್.ಬಿ.ಸಿದ್ನಾಳ್ ಅವರ ಕುಟುಂಬದ ಸದಸ್ಯರ ವಿರುದ್ದ ನಗರದ ಕ್ಯಾಂಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಮಗೆ ಸೇರಿರುವ ಆಸ್ತಿಗಾಗಿ ದಿ.ಎಸ್.ಬಿ. ಸಿದ್ನಾಳ ಅವರ ಪುತ್ರ ಶಶಿಕಾಂತ ಸಿದ್ನಾಳ, ಅವರ ಪತ್ನಿ ವಾಣಿ ಹಾಗೂ ದಿಗ್ವಿಜಯ ಸಿದ್ನಾಳ (ಶಶಿಕಾಂತ ಪುತ್ರ) ಅವರು ತಮಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಆರೋಪಿಸಿರುವ ಉದ್ಯಮಿ ವಿಜಯ ಸಂಕೇಶ್ವರ ಅವರ ಪುತ್ರಿ ಹಾಗೂ ಮಾಜಿ ಸಂಸದ ಎಸ್.ಬಿ.ಸಿದ್ದಾಳ ಅವರ ಸೊಸೆ, ದೀಪಾ ಸಿದ್ನಾಳ (ಶಿವಕಾಂತ ಅವರ ಪತ್ನಿ) ಈಗ ನ್ಯಾಯ ಕೋರಿದ್ದಾರೆ. 

ಈ ಬಗ್ಗೆ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೀಪಾ ಅವರು ದೂರು ದಾಖಲು ಮಾಡಿದ್ದಾರೆ. ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ. ಉದ್ಯಮಿ ವಿಜಯ ಸಂಕೇಶ್ವರ ಪುತ್ರಿ ದೀಪಾ ಸಿದ್ನಾಳ ಅವರು ಎಸ್.ಬಿ.ಸಿದ್ನಾಳರ ಪುತ್ರ ಶಿವಕಾಂತ್ ಸಿದ್ನಾಳ ಅವರನ್ನು 2002ರಲ್ಲಿ ವಿವಾಹವಾಗಿದ್ದರು. ಆದರೆ, ಅನಾರೋಗ್ಯ ಕಾರಣದಿಂದ ಶಿವಕಾಂತ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರು.

ನನ್ನ ಪತಿಯ ಸಾವಿಗೆ ಇವರು ಮಾಡಿರುವ ಮಾಟ-ಮಂತ್ರ ಕಾರಣವಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ದೀಪಾ ಅವರು, ಶಿವಕಾಂತ ಅವರ ಸಮಾಧಿ ಸುತ್ತ ಇವರು ಮಾಟ- ಮಂತ್ರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶಿವಕಾಂತ ಸಿದ್ನಾಳ ಅವರು 2006ರಲ್ಲಿ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ವಿಜಯಕಾಂತ ಡೈರಿ (ಆದಿತ್ಯ) ಸ್ಥಾಪಿಸಿ ಹಾಲು ಉತ್ಪಾದಕರಿಗೆ ಅನುಕೂಲತೆ ಒದಗಿಸಿ ಕೊಟ್ಟಿದ್ದರು. ಉದ್ಯಮಿ ವಿಜಯ ಸಂಕೇಶ್ವರ ಅವರು ಈ ಡೈರಿಯ ಚೇರ್ಮನ್ ಆಗಿದ್ದಾರೆ. 

ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ವಿಜಯಕಾಂತ ಡೈರಿ ಕಬಳಿಸುವ ಹುನ್ನಾರ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಶಶಿಕಾಂತ ಸಿದ್ನಾಳ, ಅವರ ಪತ್ನಿ ವಾಣಿ ಮತ್ತು ಪುತ್ರ ದಿಗ್ವಿಜಯ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿವರಿಸಿದ್ದಾರೆ.