ಪರಿಹಾರ ಹಣ ವಿಳಂಬ: ಉಪವಿಭಾಗಾಧಿಕಾರಿಯ ಟಾಟಾ ಸುಮೋ ವಾಹನ ವಶ

ಬೈಲಹೊಂಗಲ 03: ಪಟ್ಟಣದ ಒಳಚರಂಡಿ ಯೋಜನೆ ಹಾಗೂ ನೀರಿನ ಶುದ್ಧಿ ಕರಣ ಘಟಕ ನಿರ್ಮಾಣ ಯೋಜನೆಗೆ ವಶಪಡಿಸಿಕೊಂಡಿದ್ದ ಭೂಮಿಗೆ ಪರಿಹಾರ ವಿತರಿಸಲು ವಿಳಂಬ ಮಾಡಿದ್ದರಿಂದ ಹಿರಿಯ ದಿವಾಣಿ ನ್ಯಾಯಾಧೀಶರ ಆದೇಶ ಮೇರೆಗೆ  ಉಪವಿಭಾಗಾಧಿಕಾರಿಯ 10 ಲಕ್ಷ ರೂ. ಮೌಲ್ಯದ ಟಾಟಾ ಸುಮೋ ವಾಹನವನ್ನು ಮಂಗಳವಾರ ವಶಪಡಿಸಿಕೊಳ್ಳಲಾಯಿತು.  

ಒಳಚರಂಡಿ ಯೋಜನೆ ಹಾಗೂ ನೀರಿನ ಶುದ್ಧಿಕರಣ ಘಟಕ ನಿರ್ಮಾಣ ಯೋಜನೆಗೆ ನಬೀಸಾಬ ಬಾಬುಸಾಬ ಬೇಪಾರಿ ಹಾಗೂ ಇತನ ಮೈತ ವಾರಸುದಾರರ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ಇವರಿಗೆ 1 ಕೋಟಿ 72 ಲಕ್ಷ ರೂ.ಪರಿಹಾರ ವಿತರಿಸಲಾಗಿತ್ತು. ಯೋಗ್ಯ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. 4 ಕೋಟಿ 43 ಲಕ್ಷ 25 ಸಾವಿರ ರೂ.ಪರಿಹಾರವನ್ನು ನೀಡುವಂತೆ ಹಿರಿಯ ದೀವಾಣಿ ನ್ಯಾಯಾಧೀಶರು ಮಾಡಿದ್ದರು. ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವದರಿಂದ ಜಪ್ತಿ ಕಾರ್ಯ ನಡೆಯಿತು.  

ಜಮೀನುಗಳನ್ನು ಪಡೆದುಕೊಂಡು 15 ವರ್ಷಗಳಾದರೂ ಪರಿಹಾರ ವಿತರಿಸುವಲ್ಲಿ ವಿಳಂಬ ಮಾಡುತ್ತಿರುವದರಿಂದ ರೈತರು ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.  

ರೈತರ ಪರವಾಗಿ ನ್ಯಾಯವಾದಿಗಳಾದ ಟಿ.ಕೆ.ಸಂತೋಷ, ಎ.ಎಂ.ಮೋಹಿದ್ದೀನ ವಕಾಲತ್ತುವಹಿಸಿದ್ದರು. ನ್ಯಾಯವಾದಿಗಳಾದ ಚೇತನ ಹೆಡಗೆ, ಸ್ಟ್ಯಾನ್ಲಿ ಫಿಲೀಫ್ ಹಾಗೂ  ನ್ಯಾಯಾಲಯದ ಬೀಲೀಫ್ ಎಸ್‌.ಬಿ.ದೊಡ್ಡಸಾವಳಗಿ ಕಾರ್ಯನಿರ್ವಹಿಸಿದ್ದರು.