ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದ ವೇಳೆ ನೂಕುನುಗ್ಗಲು ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 130ಕ್ಕೆ ಏರಿಕೆ

ಸಂತ ಭೋಲೆ ಬಾಬಾ ಪ್ರವಚನ ಕೇಳಲು ಹೆಚ್ಚಿನ ಸಂಖ್ಯೆಯ ಜನರು ಹತ್ರಾಸ್ ಇಟಾಹ್ ಗಡಿಯ ಸಮೀಪವಿರುವ ರತಿಭಾನ್‌ಪುರವನ್ನು ತಲುಪಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿತ್ತು. ಪೊಲೀಸ್ ಆಡಳಿತ ಮತ್ತು ಆಂಬುಲೆನ್ಸ್ ಸ್ಥಳಕ್ಕೆ ತಲುಪುವಲ್ಲಿ ಸಾಕಷ್ಟು ವಿಳಂಬವಾಯಿತು. ಸ್ಥಳೀಯರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳು ಮತ್ತು ಇಟಾಹ್ ಆಸ್ಪತ್ರೆಗಳಿಗೆ ಕಳುಹಿಸಿದ್ದಾರೆ. 27 ಮೃತದೇಹಗಳು ಎಟಾಹ್ ಸರ್ಕಾರಿ ಆಸ್ಪತ್ರೆಗೆ ತಲುಪಿವೆ.

ಹತ್ರಾಸ್ ಜಿಲ್ಲೆಯ ಮುಘಲ್‌ಗರ್ಹಿ ಗ್ರಾಮದಲ್ಲಿ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದ ವೇಳೆ ನೂಕುನುಗ್ಗಲಿನಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 130ಕ್ಕೆ ಏರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು 150ಕ್ಕೂ ಹೆಚ್ಚು ಮಂದಿ ಈ ಭೀಕರ ಕಾಲ್ತುಳಿತದಲ್ಲಿ ಗಾಯಗೊಂಡಿದ್ದು ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಧ್ಯಮ ವರದಿ ಪ್ರಕಾರ, ಹತ್ರಾಸ್ ಕಾಲ್ತುಳಿತದಲ್ಲಿ ಇಲ್ಲಿಯವರೆಗೂ ಸುಮಾರು 130 ಮಂದಿ ಸಾವನ್ನಪ್ಪಿದ್ದು 150 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಪೈಕಿ ಹೆಚ್ಚಿನವರು ಹತ್ರಾಸ್ ಮತ್ತು ಇಟಾಹ್ ನಿವಾಸಿಗಳು ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದೆ. ಯುಪಿ ಸರ್ಕಾರವು ಎಲ್ಲಾ ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಿದೆ. ಇದರಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರಿಗೆ ನನ್ನ ಸಹಾನುಭೂತಿ ಇದೆ. ಇನ್ನು ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮೃತರ ಕುಟಂಬಗಳಿಗೆ ತಲಾ 2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

 ದುರದೃಷ್ಟಕರ ಅಪಘಾತ :ಸಿಎಂ ಯೋಗಿ

ಹತ್ರಾಸ್ ಜಿಲ್ಲೆಯಲ್ಲಿ ಸಂಭವಿಸಿದ ದುರದೃಷ್ಟಕರ ಅಪಘಾತದಲ್ಲಿ ಜೀವಹಾನಿ ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಯುದ್ಧೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮೃತರ ಕುಟಂಬಗಳಿಗೆ ತಲಾ 2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.