ನಿರಾಶ್ರಿತರಿಗೆ ನಿವೇಶನ ನೀಡಿ: ತಸೀಲ್ದಾರ್ಗೆ ಮನವಿ
ಲೋಕದರ್ಶನ ವರದಿ
ವಿಜಯಪುರ 16: ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿರುವ ನಿರಾಶ್ರಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ತಸೀಲ್ದಾರ್ ಎಂ.ಆರ್. ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಪಟ್ಟಣದ ಗ್ರಾಮ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಬಜಾರ್ ರಸ್ತೆ, ಹೊಸ ಬಸ್ ನಿಲ್ದಾಣ, ಕಾಲೇಜ್ ರಸ್ತೆ ಮಾರ್ಗವಾಗಿ ತಹಸೀಲ್ದಾರ್ ಕಚೇರಿ ತಲುಪಿದರು.
ತಾಲೂಕಾಧ್ಯಕ್ಷ ಆನಂದ ಹಡಗಲಿ ಮಾತನಾಡಿ, ಪಟ್ಟಣದಲ್ಲಿ ಬಡವರಿಗೆ ಸೂಕ್ತ ಆಶ್ರಯವಿಲ್ಲದೆ ಪರದಾಡುವಂತಾಗಿದೆ. ದಲಿತರು, ಬಡವರು, ನಿರಾಶ್ರಿತರಿಗೆ ಪಟ್ಟಣದಲ್ಲಿರುವ ಸರ್ವೇ ನಂ. 46ರಲ್ಲಿ ನಿವೇಶನ ಒದಗಿಸಬೇಕು. ಈ ಕುರಿತು ಸಾಕಷ್ಟು ಬಾರಿ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದ್ದರೂ ಕ್ರಮ ಕೈಗೊಂಡಿಲ್ಲ. ಕೂಡಲೇ ಜಿಲ್ಲಾಡಳಿತ ಪಟ್ಟಣದ ಅರ್ಹ ನಿರಾಶ್ರಿತರಿಗೆ ನಿವೇಶನ ನೀಡದಿದ್ದರೆ ನಿರಾಶ್ರಿತರೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದರು.
ತಾಲೂಕು ಗೌರವಾಧ್ಯಕ್ಷ ಪ್ರಹ್ಲಾದ ಪತ್ತಾರ ಮಾತನಾಡಿದರು. ಉಪಾಧ್ಯಕ್ಷ ಸಂತೋಷ ಕಡಿ, ಕಪೀಲದೇವ ಹಿರೇಮಠ, ಆನಂದ ಭೋವಿವಡ್ಡರ, ನಗರ ಘಟಕದ ಅಧ್ಯಕ್ಷ ಮಂಜುನಾಥ ಪಟ್ಟಣದ, ಮುಖಂಡ ರವಿಕುಮಾರ ದಳವಾಯಿ, ರಾಘು ನಾಯಕ, ವೀರೇಶ ಗಣಾಚಾರಿ, ಮುತ್ತು ಬಣ್ಣದ, ಬಸವರಾಜ ಗೌರಿ, ಮಹಾಂತಗೌಡ ಪಾಟೀಲ, ಸತೀಶ ನರಸರೆಡ್ಡಿ, ಮುರುಗೇಶ ಗಣಾಚಾರಿ, ವೀರೇಶ ತೋಟದ, ಶಿವು ಬಣಗಾರ, ಪ್ರದೀಪ ಮಮದಾಪುರ ಇತರರು ಇದ್ದರು.