ಬೆಂಗಳೂರು 31: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ತಳ್ಳಿಹಾಕಿದ್ದು, ನಾನು ಅವರ ಸಿದ್ಧಾಂತಕ್ಕೆ ವಿರುದ್ಧವಾಗಿರುವುದರಿಂದ ಬಿಜೆಪಿ ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದರು.
ಬಿಜೆಪಿಯು ಎಲ್ಲವನ್ನೂ ಮಾಡಬಹುದು. ಆದರೆ, ಈ ಆತ್ಮಹತ್ಯೆಯು ಸರ್ಕಾರಕ್ಕೂ ಮತ್ತು ನನಗೂ ಹೇಗೆ ಸಂಬಂಧಿಸಿದೆ ಎಂಬುದನ್ನು ಕರ್ನಾಟಕದ ಜನರ ಮುಂದಿಡುವಲ್ಲಿ ಅವರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಈ ವಿಚಾರದ ಮೂಲಕ ಅವರು ತಮ್ಮ ನಾಯಕತ್ವವನ್ನು ಸ್ಥಾಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಬಿಜೆಪಿ ಈಗ ಒಂದು ಬಣ-ಪ್ರೇರಿತ ಪಕ್ಷವಾಗಿದೆ. ಕರ್ನಾಟಕದಲ್ಲಿ ನಾಯಕತ್ವದ ಕಿತ್ತಾಟ ನಡೆಯುತ್ತಲೇ ಇದೆ. ಅವರು ಎಂದಿನಂತೆ ಈ ಸಾವನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
ನಾನು ಅವರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದೇನೆ. ನಾನು ಆರ್‌ಎಸ್‌ಎಸ್ ಮತ್ತು ಮನುಸ್ಮೃತಿಯ ವಿರುದ್ಧ ಇದ್ದೇನೆ ಮತ್ತು ನಾನು ಅದರ ಬಗ್ಗೆ ದನಿಯೆತ್ತಿದ್ದೇನೆ. ಅಲ್ಲದೆ, ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಮತ್ತು ಸಂವಿಧಾನವನ್ನು ಅನುಸರಿಸುತ್ತೇವೆ. ಆದ್ದರಿಂದ ಅವರು ಸಹಜವಾಗಿ ಇಂತಹ ವಿಚಾರಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಾರೆ.
ಬೀದರ್ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ಬಿಜೆಪಿ ಮುಖ್ಯಸ್ಥ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದರು, ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ ಸಂತ್ರಸ್ತರಲ್ಲಿ ಯಾರಿಗಾದರೂ ನ್ಯಾಯ ದೊರಕಿಸಿಕೊಡಲು ಬಿಜೆಪಿಗೆ ನಿಜವಾಗಿಯೂ ಆಸಕ್ತಿ ಇದ್ದರೆ, ಮೊದಲು ವಿಜಯೇಂದ್ರ ತನ್ನ ತಂದೆಯ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ತಾವು ರಾಜೀನಾಮೆ ನೀಡಲಿ ಎಂದು ಸವಾಲೆಸೆದರು.