ಮಣಿಪುರ ಹಿಂಸಾಚಾರ: ಕ್ಷಮೆಯಾಚಿಸಿದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್

Manipur violence: CM N Biren Singh apologizes for communal violence

ಇಂಫಾಲ್: ಮೇ 2023ರ ಬಳಿಕ ತಮ್ಮ ಆಡಳಿತದ ಅವಧಿಯಲ್ಲಿ ಸಂಭವಿಸಿದ ಜನಾಂಗೀಯ ಹಿಂಸಾಚಾರಕ್ಕಾಗಿ ರಾಜ್ಯದ ಜನರಲ್ಲಿ ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕ್ಷಮೆಯಾಚಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಒಟ್ಟು 200 ಮಂದಿ ಸಾವನ್ನಪ್ಪಿದ್ದು, ಸಾವಿರಕ್ಕೂ ಮಿಕ್ಕಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು 625 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಸ್ಫೋಟಕಗಳು ಮತ್ತು ಸುಮಾರು 35,000 ಮದ್ದುಗುಂಡುಗಳು ಸೇರಿದಂತೆ ಸುಮಾರು 5,600 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಎಂ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.

ಮಂಗಳವಾರ ಇಂಫಾಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್ ನನ್ನ ಆಡಳಿತ ಅವಧಿಯಲ್ಲಿ ಜನಾಂಗೀಯ ಹಿಂಸಾಚಾರಗಳು ನಡೆದು ಹಲವು ಜೀವಗಳನ್ನು ಕಳೆದುಕೊಂಡಿದ್ದೇವೆ, ಈ ಇಡೀ ವರ್ಷ ಅತ್ಯಂತ ದುರದೃಷ್ಟಕರವಾಗಿದೆ. ಕಳೆದ ಮೇ 3 ರಿಂದ ಹಿಡಿದು ಇಂದಿನವರೆಗೆ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ಆದರೆ ಕಳೆದ ಎರಡು ಮೂರೂ ತಿಂಗಳಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳ್ಳುತ್ತಿದೆ. ಜನರು ಹಿಂದಿನ ತಪ್ಪುಗಳನ್ನು ಮರೆತು ಹೊಸ ಜೀವನ ಆರಂಭಿಸೋಣ, ನಾವೆಲ್ಲರೂ ಒಗ್ಗಟ್ಟಾಗಿ ಬಾಳಿ, ಹಳೆಯ ಕಹಿಯನ್ನು ಮರೆತು ಹೊಸ ಜೀವನ ನಡೆಸೋಣ ಎಂದು ಸಮುದಾಯದ ಜನರಲ್ಲಿ ಮನವಿ ಮಾಡಿದರು.