ಸಿದ್ಧೆಶ್ವರ ಶ್ರೀಗಳು ಸತ್ಯದ ಅರಿವು ಮೂಡಿಸುವುದರ ಜತೆಗೆ ಜ್ಞಾನದ ಬೆಳಕು ತೋರಿಸಿದವರು
ತಾಂಬಾ 01: ಸಿದ್ಧೇಶ್ವರ ಶ್ರೀಗಳು ಎಲ್ಲರ ಬದುಕಿಗೂ ಬೆಳಕು ತೋರಿದವರು. ಪದವಿ, ಗೌರವ, ಹಣ, ಅಂತಸ್ತನ್ನು ನಯವಾಗಿ ತಿರಸ್ಕರಿಸಿದ ಆ ಗುರುವಿಗೆ ನಮಿಸಿ, ಬದುಕು ಪವಿತ್ರಗೊಳಿಸಿಕೊಳ್ಳೋಣ ಎಂದು ಪ್ರಜ್ಞಾನಂದ ಸ್ವಾಮೀಜಿ ಹೇಳಿದರು.
ಬುಧವಾರದಂದು ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ವಿಜಯಪುರದ ಜ್ಞಾನಯೋಗಿ ಸಿದ್ಧೆಶ್ವರ ಶ್ರೀಗಳು ಸತ್ಯದ ಅರಿವು ಮೂಡಿಸುವುದರ ಜತೆಗೆ ಜ್ಞಾನದ ಬೆಳಕು ತೋರಿಸಿ ಎಲ್ಲರ ಬದುಕಿಗೆ ದಿವ್ಯ ಚೇತನರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯ ಶಿಕ್ಷಕ ಶಿವಶರಣಪ್ಪ ಶಿರೂರು ಮಾತನಾಡಿ, ಜಾಗತಿಕ ದಾರ್ಶನಿಕರ ಗ್ರಂಥಗಳನ್ನು ಅಧ್ಯಯನ ಮಾಡಿದ್ದ ಶ್ರಿಗಳು, ಜನರಿಗೆ ಅರ್ಥವಾಗುವ ಶೈಲಿಯಲ್ಲಿ ಸರಳೀಕರಿಸಿ ಪ್ರವಚನ ಹೇಳುತ್ತಾ, ಬದುಕುವ ರೀತಿಯನ್ನು ತಿಳಿಸಿದ್ದಾರೆ. ಶ್ರೀಗಳ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಶಿವಪ್ರಸಾದ ಸ್ವಾಮೀಜಿ ಮಾತನಾಡಿ, ಭಕ್ತರ ಮನದ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ ಶ್ರೀಗಳ ಬದುಕೇ ಎಲ್ಲರಿಗೂ ಪ್ರೇರಣಾದಾಯಕ. ಅವರ ಅಮೃತ ಸಮಾನ ಪ್ರವಚನದ ಸಾರಸತ್ವವನ್ನು ತಿಳಿದು ಸುಂದರ ಬದುಕು ನಮ್ಮದಾಗಿಸಿಕೊಳ್ಳಬೇಕು ಎಂದರು.
ಪೂಜಣ್ಣ ಪೂಜಾರಿ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಶಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ, ಕಾರ್ಯದರ್ಶಿ ಸುನಂದಾ ಹುಣಶ್ಶಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ನವೀನ ಬಂಡೆನ್ನವರ, ಜಯಶ್ರೀ ಬಂಗಾರಿ, ಸಚಿನ ಅವಟಿ, ಮಧುಮತಿ ನಿಕ್ಕಂ, ಸರೋಜನಿ ಕಟ್ಟಿಮನಿ, ಆರ್ ಎಸ್ ಭಜಂತ್ರಿ, ಎಸ್ ಎಂ ಬಾಗಲಕೋಟ, ಎಂ ಎಂ ವಾಡೇದ, ಎಂ ವ್ಹಿ ಭಜಂತ್ರಿ, ವೀರೇಶ ಹುಣಶ್ಶಾಳ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
1ತಾಂಬಾ1
ಪೋಟೊ ಪೈಲ್: ಸಿದ್ಧೇಶ್ವರ ಶ್ರೀಗಳ ಭವ್ಯ ಭಾವಚಿತ್ರದ ಮೆರವಣಿಗೆಯಲ್ಲಿ ಜ್ಞಾನದ ಬುತ್ತಿಯನ್ನು ತಲೆಯ ಮೇಲೆ ಹೊತ್ತು ಸಾಗಿದ ಶಾಲಾ ಮಕ್ಕಳು ಜತೆಗೆ ಕುಂಭವನ್ನು ಹೊತ್ತ ಸುಮಂಗಲೆಯರು.