ವಿಶೇಷ ಆರ್ಥಿಕ ವಲಯದ ಮೂಲಕ ಕರಾವಳಿಯ ಅಭಿವೃದ್ಧಿ- ಸಂಸದ ಹೆಗಡೆ ಹೇಳಿಕೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶವು ವಿಶೇಷ ಆರ್ಥಿಕ ವಲಯದ ಯೋಜನೆ ಮೂಲಕ ಅಭಿವೃದ್ದಿಯಾಗಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಕಾರವಾರ ತಾಲೂಕಿನ ದೇವಳಮಕ್ಕಿಯಿಂದ ಸೋರೆಗದ್ದೆ ಸಿದ್ಧರಾಮೇಶ್ವರ ದೇವಾಲಯದಿಂದ ಕೊಂಕಣ ಗದ್ದೆ ಶಿರ್ವೆವರೆಗಿನ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ -3ರ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಉತ್ತರಕನ್ನಡ ಜಿಲ್ಲೆಗೆ ಕೈಗಾರಿಕೆಗಳು ಬರಬೇಕು ಇದರಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ಯೋಜನೆಗೆ ಆರ್ಥಿಕ ಚಟುವಟಿಕೆಗಳ ಪೂರಕವಾಗಿ ನಡೆಯಬೇಕು. ಇದಕ್ಕಾಗಿ ಪ್ರಯತ್ನವೂ ನಡೆದಿದೆ. ಮುಂದಿನ ದಿನದಲ್ಲಿ ಕಲ್ಪನೆಗೂ ನಿಲುಕದಷ್ಟು ಬೃಹತ್ ಪ್ರಮಾಣದಲ್ಲಿ ಕೈಗಾರಿಕೆಗಳು ಆರಂಭವಾಗಿ ಜಿಲ್ಲೆ ಆರ್ಥಿಕ ಪ್ರಗತಿ ಸಾಧಿಸುತ್ತದೆ. ಬೇಲಿಕೇರಿ ಬಂದರು ನಿರ್ಮಾಣವಾದರೆ ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಅನುದಾನದಲ್ಲಿ ಅನೇಕ ಕಾಮಗಾರಿಗಳನ್ನು ಪೂರ್ಣಗೊಂಡಿವೆ. ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಸಂಸದರ ಅನುದಾನ ಸಹಕಾರಿಯಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಂಸದರು ಹಲವಾರು ಯೋಜನೆಗಳನ್ನು ತಂದಿದ್ದಾರೆ. ಕಾರವಾರ ಮತ್ತು ಅಂಕೋಲಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅನುಷ್ಠಾನಕ್ಕೆ ತಂದು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ, ಅವುಗಳ ಬಗ್ಗೆ ಯಾವುದೇ ಪ್ರಚಾರವನ್ನು ಮಾಡಿಲ್ಲ ಎಂದು ಹೇಳಿದರು.
ಕ್ಷೇತ್ರದ ಜನರಿಗೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಕೆಲವು ಯುವಕರು ಅಲ್ಪ ಸಂಬಳಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಕಾರವಾರ-ಅಂಕೋಲಾ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಕೆಲಸ ಒದಗಿಸಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.
ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೊಗೆರ, ಮೀನುಗಾರರ ಮುಖಂಡ ಗಣಪತಿ ಉಳ್ವೇಕರ, ರಾಜೇಶ್ ನಾಯಕ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು, ಸ್ಥಳೀಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
***