ಚಮಕೇರಿ-ಅಡಹಳ್ಳಿ ರಸ್ತೆ ದುರಸ್ತಿಗಾಗಿ ರಸ್ತೆ ತಡೆ ಪ್ರತಿಭಟನೆ
ಅಥಣಿ 01: ಚಮಕೇರಿ-ಅಡಹಳ್ಳಿ ಸಂಪರ್ಕ ರಸ್ತೆಯನ್ನು ಡಾಂಬರೀಕರಣ ಗೊಳಿಸಬೇಕು ಎಂದು ಆಗ್ರಹಿಸಿ ಚಮಕೇರಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ರಸ್ತೆಗೆ ಅಡ್ಡಲಾಗಿ ಮುಳ್ಳಿನ ಕಂಟಿ, ಕಲ್ಲು ಬಂಡೆ ಹಚ್ಚಿ ಎರಡು ಗಂಟೆಗೂ ಹೆಚ್ಚು ಕಾಲ ನೂರಾರು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಸ್ಥಳೀಯ ಗ್ರಾಮ ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಗ್ರಾಮಸ್ಥ ರಮೇಶ ಪೂಜಾರಿ ಮಾತನಾಡಿ, ಕಳೆದ ಒಂದು ದಶಕದಿಂದಲೂ ಈ ರಸ್ತೆ ಹದಗೆಟ್ಟು ಹೋಗಿದೆ. ಇದರ ಪರಿಣಾಮ ಅಪಘಾತಗಳು ಸಂಭವಿಸುತ್ತಿದ್ದು, ಈ ರಸ್ತೆಯನ್ನು ಸುಧಾರಣೆ ಮಾಡಬೇಕು ಎಂದು ಅನೇಕ ಬಾರಿ ಗ್ರಾಮ ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ ಎಂದ ಅವರು ತಕ್ಷಣ ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ರಸ್ತೆ ಮಧ್ಯೆ ತಗ್ಗು ತೆಗೆದು ಶಾಶ್ವತವಾಗಿ ಸಂಚಾರವನ್ನೇ ಬಂದ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮಸ್ಥರ ಹೋರಾಟಕ್ಕೆ ಮಣಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಶಿಧರ ಮಾಲಗಾರ ಮಾತನಾಡಿ, ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಜೆಸಿಬಿ ಜೊತೆಗೆ ಧಾವಿಸಿ ಸುಗಮ ಸಂಚಾರಕ್ಕೆ ತಾತ್ಕಾಲಿಕವಾಗಿ ದುರಸ್ತಿಗೊಳಿಸುತ್ತೇನೆ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ ಅಧಿಕಾರಿಗಳ ಗಮನಕ್ಕೆ ತಂದು ಸುಸಜ್ಜಿತ ರಸ್ತೆ ನಿರ್ಮಿಸುತ್ತೇವೆ ಎಂದು ಹೇಳಿದರು.
ಧುರೀಣರಾದ ಬಸವಗೌಡ ಪಾಟೀಲ ಮತ್ತು ಡಾ.ಸದಾಶಿವ ಕಾಗವಾಡೆ ಹೋರಾಟಗಾರರ ಮತ್ತು ಪಂಚಾಯತ ಅಧಿಕಾರಿಗಳ ಮಧ್ಯೆ ಮಧ್ಯಸ್ಥಿಕೆ ವಹಿಸಿ ಮಾತನಾಡಿ, ಈಗಾಗಲೇ ಈ ರಸ್ತೆಯನ್ನು ಸುಧಾರಿಸಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದು, ತಕ್ಷಣ ನಮ್ಮ ಮನವಿಗೆ ಸ್ಪಂದಿಸಿದ ಶಾಸಕರು ಜಿಲ್ಲಾ ಪಂಚಾಯತನ ವಿಶೇಷ ಅನುದಾನದಲ್ಲಿ ಚಮಕೇರಿ-ಅಡಹಳ್ಳಿ ರಸ್ತೆಯನ್ನು ದುರಸ್ಥಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು ಶಾಸಕರು ಭರವಸೆ ನೀಡಿದ್ದರಿಂದ ಅವರ ಮೇಲೆ ವಿಶ್ವಾಸ ಇಟ್ಟು ನಾವು ಹೋರಾಟ ಹಿಂದೆ ಪಡೆಯೋಣ ಎಂದು ಹೋರಾಟಗಾರರ ಮನ ಒಲಿಸಿದ ಪರುಣಾಮ ಹೋರಾಟ ಹಿಂದೆ ಪಡೆದುಕೊಂಡರು.
ಗ್ರಾಮ ಪಂಚಾಯತ ಕಾರ್ಯದರ್ಶಿ ದಿನಕರ ರಾಮಪುರ, ಸದಸ್ಯರಾದ ನೀಲಕಂಠ ಕಾಂಬಳೆ, ಕಾಶಿನಾಥ ಬಿರಾದಾರ, ಸಿದ್ದಪ್ಪ ಪಡೋಲಕರ, ಧುರೀಣರಾದ ಸಂಗಪ್ಪ ತೇಲಿ, ಶ್ರೀಶೈಲ ತೇಲಿ, ಮುರೆಪ್ಪ ಪಡೋಲಕರ, ಸದಾಶಿವ ತೇಲಿ, ರಾಮ ಪೂಜಾರಿ, ತಮ್ಮಣ್ಣ ಸೂರ್ಯವಂಶಿ, ಸರದಾರ ಸೂರ್ಯವಂಶಿ, ಜಯವಂತ ಸೂರ್ಯವಂಶಿ, ವಿಷ್ಣು ಸೂರ್ಯವಂಶಿ, ವಸಂತ ಸೂರ್ಯವಂಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.