ಕೋರ್ಟ್‌ ಕಟ್ಟಡಕ್ಕೆ ಜಾಗ ಮಂಜೂರು ಮಾಡಿಸುವಂತೆ ಮನವಿ

ಕಾಗವಾಡ 06: ನೂತನ ತಾಲೂಕು ಅಂತ ಘೋಷಣೆಯಾಗಿ ನೂತನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಪ್ರಾರಂಭವಾದರೂ ಎಪಿಎಂಸಿಯ ಬಾಡಿಗೆ ಕಟ್ಟದಲ್ಲಿ ನಡೆಯುತ್ತಿದ್ದು, ಸರಕಾರ ಕೂಡಲೇ ನೂತನ ಕೋರ್ಟ್‌ಗಾಗಿ ಜಾಗ ಮಂಜೂರು ಮಾಡಿಸುವಂತೆ ಕಾಗವಾಡ ನ್ಯಾಯವಾದಿಗಳ ಸಂಘ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹಾಗೂ ನೂತನ ಚಿಕ್ಕೋಡಿ ಸಂಸದೆ ಪ್ರೀಯಾಂಕ ಜಾರಕಿಹೋಳಿಗೆ ಮನವಿ ಮಾಡಿದರು. 

ಮಂಗಳವಾರ ದಿ. 02 ರಂದು ಕಾಗವಾಡದ ಎಲ್ಲ ನ್ಯಾಯವಾದಿಗಳ ಸಂಘದ ಸದಸ್ಯರು ಅಧ್ಯಕ್ಷ ಪಿ.ಎ. ಮಾನೆ ಅವರ ನೇತೃತ್ವದಲ್ಲಿ ನೂತನ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಕಾಗವಾಡ ಎಪಿಎಂಸಿ ಗೋಡಾವಣ ಜಾಗದಲ್ಲಿ ಬಾಡಿಗೆ ಆಧಾರದಲ್ಲಿ ಪ್ರಾರಂಭ ಆಗಿದ್ದು ಸದರಿ ಪಟ್ಟಣದಲ್ಲಿ ಜಾಗ ಇದ್ದು, ಸುಮಾರು ಮೂರು ಎಕರೆ ಜಮೀನನ್ನು ಕಾಗವಾಡ ಸಿವ್ಹಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ರಿಜಿಸ್ಟಾರ್ ಜನರಲ್ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಇವರ ಹೆಸರಿಗೆ ಕೂಡಲೇ ಹಸ್ತಾಂತರ ಮಾಡಬೇಕು ಎಂದು ಮಾನ್ಯ ಉಚ್ಚ ನ್ಯಾಯಾಲಯ ಬೆಂಗಳೂರು ಇವರು ಸರಕಾರಕ್ಕೆ ಎರಡು ಸಲ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅದರ ಕುರಿತು ಸರ್ಕಾರದವರು ಯಾವುದೇ ರೀತಿಯ ಸೂಕ್ತ ಕ್ರಮ ಕೈಗೊಂಡಿಲ್ಲಾ. ಸದರಿ ಜಾಗದ ಹಸ್ತಾಂತರ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಭಂದಿಸಿದ ಸರ್ಕಾರಿ ಇಲಾಖೆಯವರಿಗೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡರು. 

ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಎ. ಮಾನೆ, ಉಪಾಧ್ಯಕ್ಷ ಬಿ.ಎ. ಮಗದುಮ್ಮ, ಎಂ.ಜಿ. ವಡ್ಡರ, ಬಿ.ಜೆ. ಮೋಳೆ, ರಾಹುಲ ಕಟಗೇರಿ, ಜೆ.ಡಿ. ಕುರುಂದವಾಡೆ, ವಾಯ್‌.ಬಿ. ಯಡೂರೆ, ವಿ.ಎಸ್‌. ಸಿದ್ದನಾಳೆ, ಎ.ಎಸ್‌. ಕಮತೆ, ಎ.ಬಿ. ಭಂಡಾರೆ, ಆರ್‌.ಎಚ್‌. ಸಾಲಿಮನಿ ಸೇರಿದಂತೆ ಅನೇಕ ವಕೀಲರು ಇದ್ದರು.