ಗುಣಮಟ್ಟದ ಕಾಮಗಾರಿಗೆ ಸಾರ್ವಜನಿಕರು ನಿಗಾ ವಹಿಸಿ: ರಾಜು ಕಾಗೆ

ಕಾಗವಾಡದಲ್ಲಿ ಅಮೃತ ಯೋಜನೆಯ ರೂ.66.74 ಕೋಟಿ ಅನುದಾನದ ಕಾಮಗಾರಿಗೆ ಚಾಲನೆ 

ಕಾಗವಾಡ 03: ಸರ್ಕಾರಗಳು ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುತ್ತವೆ. ನಾವು ಅದನ್ನು ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತೇವೆ. ಸರ್ಕಾರದಿಂದ ಬರುವ ಅನುದಾನ ಸಾರ್ವಜನಿಕರ ತೆರಿಗೆ ಹಣವಾಗಿರುವುದರಿಂದ ಅದು ನಿಮ್ಮ ಕೆಲಸವಾಗಿರುತ್ತದೆ. ಆದ್ದರಿಂದ ಗುಣಮಟ್ಟದ ಕಾಮಗಾರಿಯ ಬಗ್ಗೆ ಸಾರ್ವಜನಿಕರು ನಿಗಾ ವಹಿಸಬೇಕು. ಮತ್ತು ಗುತ್ತಿಗೆದಾರರು ಸಹ ಗುಣಮಟ್ಟದ ಕಾಮಗಾರಿ ಮಾಡಿ, ಮುಂದಿನ ಪೀಳಿಗೆಗೆ ಅದು ಉಪಯೋಗವಾಗುವಂತೆ ಮಾಡಬೇಕೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. 

ಅವರು ಬುಧವಾರ ದಿ. 03 ರಂದು ಪಟ್ಟಣದಲ್ಲಿ ಅಮೃತ-02 ಯೋಜನೆಯಡಿ ರೂ. 66.74 ಕೋಟಿ ಅನುದಾನದಲ್ಲಿ ಕಾಗವಾಡ, ಶೇಡಬಾಳ ಮತ್ತು ಉಗಾರ ಖುರ್ದ ಪಟ್ಟಣಗಳಿಗೆ ಸಂಯುಕ್ತ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗರಾರಿ ಭೂಮಿ ಪೂಜೆ ನೆರವೇರಿಸಿ, ನಂತರ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಾರ್ವಜನಿಕರ ತೆರಿಗೆ ಹಣದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೇ ಅದಕ್ಕೆ ಸಾರ್ವಜನಿಕರೇ ಮಾಲೀಕರಾಗಿರುತ್ತಾರೆ. ಆದ್ದರಿಂದ ಅವರು ತಮ್ಮ ಮನೆಯ ಕೆಲಸದಂತೆಯೇ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಕಡೆಗೆ ನಿಗಾ ವಹಿಸಬೇಕು. ಕಳಪೆ ಕಾಮಗಾರಿ ಕಂಡು ಬಂದಲ್ಲಿ ಧ್ವನಿ ಎತ್ತಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.  

ಆರ್‌.ಕೆ. ಉಮೇಶ ಪ್ರಾಸ್ಥಾವಿಕವಾಗಿ ಮಾತನಾಡಿ, ಕಾಮಗಾರಿಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ವಿದ್ಯಾಲಯದ ವಿದ್ಯಾರ್ಥಿನಿಯರ ಈಶಸ್ಥವನ ಮತ್ತು ಪ್ರಾರ್ಥನೆ ಗೀತೆಯೊಂದಿಗೆ ಚಾಲನೆ ನೀಡಲಾಯಿತು. ನಂತರ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.  

ಕಾರ್ಯಕ್ರಮದಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಾದ ಆರ್‌.ಕೆ. ಉಮೇಶ, ಉಮೇಶ ಶಿಗಿಹಳ್ಳಿ, ಪ.ಪಂ. ಮುಖ್ಯಾಧಿಕಾರಿಗಳಾದ ಕೆ.ಕೆ. ಗಾವಡೆ, ಸುಬ್ಬನ್ನಾ ಪೂಜಾರಿ, ಸುನೀಲ ಬಬಲಾದಿ, ಮುಖಂಡರಾದ ಸೌರವ ಪಾಟೀಲ, ರಮೇಶ ಚೌಗುಲಾ, ವೀರಭದ್ರ ಕಟಗೇರಿ, ಸುಭಾಷ ಕಠಾರೆ, ಶಂಕರ ವಾಘಮೋರೆ, ಅಜೀತ ಕರವ, ಶಾಂಥಿನಾಥ ಕರವ, ಚಿದಾನಂದ ಅವಟಿ, ವಿದ್ಯಾಧರ ಧೋಂಡಾರೆ, ಶಂಕರ ಕಾಂಬಳೆ, ತಾತ್ಯಾಸಾಬ ಗಡಗೆ, ನಾಗೇಂದ್ರ ಪ್ರಸಾದ ಸೇರಿದಂತೆ ಕಾಗವಾಡ, ಶೇಡಬಾಳ, ಉಗಾರ ಖುರ್ದ ಪಟ್ಟಣ ಪಂಚಾಯತಿಗಳ ಅಧಿಕಾರಿಗಳು, ಎಲ್ಲ ಪಟ್ಟಣಗಳ ಗ್ರಾಮಸ್ಥರು ಉಪಸ್ಥಿತರಿದ್ದರು. ಆರ್‌.ಪಿ. ಗುರವ ಸ್ವಾಗತಿಸಿದರು. ಎಂ.ಬಿ. ಪಾಟೀಲ ವಂದಿಸಿದರು. 

ಯೋಜನೆಯ ಕುಡಿಯುವ ನೀರು ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ, ಮಾತನಾಡುತ್ತಿರುವ ಶಾಸಕ ರಾಜು ಕಾಗೆ, ತಹಶೀಲ್ದಾರ ರಾಜೇಶ ಬುರ್ಲಿ, ಆರ್‌.ಕೆ. ಉಮೇಶ, ಉಮೇಶ ಶಿಗಿಹಳ್ಳಿ ಸೇರಿದಂತೆ ಇತರರ ಚಿತ್ರ.