ಧಾರವಾಡ ಜಿಲ್ಲೆಯಲ್ಲಿಯೂ ಸಹ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಗರಿಷ್ಠ ತಾಪಮಾನ; ಸಾರ್ವಜನಿಕರು ಜಾಗೃತಿ, ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು

Maximum temperature in Dharwad district also exceeds 40 degrees Celsius; Public should be aware and

ಲೋಕದರ್ಶನ ವರದಿ 

ಧಾರವಾಡ ಜಿಲ್ಲೆಯಲ್ಲಿಯೂ ಸಹ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಗರಿಷ್ಠ ತಾಪಮಾನ; ಸಾರ್ವಜನಿಕರು ಜಾಗೃತಿ, ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು 

ಧಾರವಾಡ 25:  ಭಾರತೀಯ ಹವಾಮಾನ ಇಲಾಖೆಯು 2025 ನೇ ಸಾಲಿನ ಬಿಸಿ ವಾತಾವರಣ ಅವಧಿಯಲ್ಲಿ (ಮಾರ್ಚ ದಿಂದ ಮೇ ವರೆಗೆ) ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಸಾಧ್ಯತೆಗಳಿದ್ದು, ಬಿಸಿಗಾಳಿ ಹಾಗೂ ತಾಪಮಾನದ ಮುನ್ಸೂಚನೆಯಿದೆ. ಮುಂದಿನ ಅವಧಿಯಲ್ಲಿ ಸಾಮಾನ್ಯ ಶಾಖದ ಅಲೆಗಳ ದಿನಗಳು ಹೆಚ್ಚಾಗುವ ಸಾಧ್ಯತೆಯಿದೆ. ಶಾಖದ ಅಲೆಗಳಿಂದ ರಕ್ಷಿಸಿಕೊಳ್ಳಲು ಮಹಿಳೆಯರು, ಮಕ್ಕಳು, ವೃದ್ದರು ಸೇರಿದಂತೆ ಎಲ್ಲ ಸಾರ್ವಜನಿಕರು ಜಾಗೃತಿವಹಿಸಿ, ಆರೋಗ್ಯ ಇಲಾಖೆಯ ಸುರಕ್ಷತಾ ಮಾರ್ಗಸೂಚಿಗಳ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿಯೂ ಸಹ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ಗರಿಷ್ಠ ತಾಪಮಾನದ ಬಗ್ಗೆ ವರದಿಯಾಗುತ್ತಿದೆ. ಆದುದ್ದರಿಂದ ಅತೀ ಹೆಚ್ಚು ತಾಪಮಾನದಿಂದ ಆಗುವ ಪ್ರತಿಕೂಲ ಪರಿಣಾಮವನ್ನು ತಡೆಗಟ್ಟಲು ಆರೋಗ್ಯ ಇಲಾಖೆ ನೀಡಿದ ಸಲಹೆ ಮತ್ತು ಸೂಚನೆಗಳನ್ನು ಜಿಲ್ಲೆಯ ಸಾರ್ವಜನಿಕರು ಪಾಲಿಸಬೇಕೆಂದು ಅವರು ತಿಳಿಸಿದರು. 

ತಾಪಮಾನದಿಂದ ಅನಾರೋಗ್ಯ ತಡೆಗಟ್ಟಲು ಆರೋಗ್ಯ ಇಲಾಖೆ ಸೂಚನೆಗಳು: ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಠ ತಾಪಮಾನ ಇರುವ ಮಧ್ಯಾಹ್ನ 12 ರಿಂದ 3 ಗಂಟೆವರೆಗಿನ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕು. ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕಗಳು, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸಬೇಕು. ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಬೇಕು. ಪೂರ್ವಾಹ್ನ 11 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಹೊರಾಂಗಣ ಸಭೆಗಳು, ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆಯನ್ನು ನೀಡಲು ಅಗತ್ಯ ಶಾಮಿಯಾನ, ಪೆಂಡಾಲ್ ವ್ಯವಸ್ಥೆ ಮಾಡಬೇಕು. ಉತ್ತಮ ಗಾಳಿಯ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು. ಹಾಗೂ ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಲಾಗಿದೆ. 

ಪ್ರಯಾಣ ಮಾಡುವಾಗ ನೀರನ್ನು ಜೊತೆಯಲ್ಲಿ ಒಯ್ಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ನಿಂಬೆ ಹಣ್ಣಿನ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಓಆರ್‌ಎಸ್‌ನ್ನು ಬಳಸಬೇಕು.  

ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ. ಅನಾನಸ್, ಸೌತೆಕಾಯಿ, ತೆಂಗಿನಕಾಯಿ ಎಳೆ ನೀರನ್ನು ಹೆಚ್ಚಾಗಿ ಸೇವಿಸಬೇಕು. ಸಾಕು ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು. ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್ ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಬೇಕು. ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ, ಟೋಪಿ ಅಥವಾ ಕ್ಯಾಪ್, ಹೆಡ್ ಕವರ್, ಹ್ಯಾಂಡ್ ಟವೆಲ್, ಹ್ಯಾಂಡ್ ಫ್ಯಾನ್, ಎಲೆಕ್ಯೂಲೈಟ್, ಗ್ಲೋಕೋಸ್, ಓಆರ್‌ಎಸ್‌ನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು ತಡೆಗಟ್ಟುವ ಕಿಟ್‌ನ್ನು ಒಯ್ಯಲು ನಾಗರಿಕರನ್ನು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಲಾಗಿದೆ. 


ಅತೀ ಹೆಚ್ಚು ತಾಪಮಾನದಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳೆತ, ಶಾಖದ ಬಳಲಿಕೆ ಮತ್ತು, ಅಥವಾ ಶಾಖದ ಅಘಾತದಂತಹ (ಸನ್ ಸ್ಟ್ರೋಕ್) ಆರೋಗ್ಯದ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. 

ಶಾಖ ಸೆಳೆತಗಳಿಂದ (ಹಿಟ್ ಕ್ರಾಂಪ್ಸ್‌)  ಊತ ಮತ್ತು ಮೂರ್ಛೆ ಸಾಮಾನ್ಯವಾಗಿ 39 ಡಿಗ್ರಿ ಸೆಲ್ಸಿಯಸ್ ಅಂದರೆ 102 ಡಿಗ್ರಿ ಪ್ಯಾರನ್‌ಹಿಟ್ ಗಿಂತ ಕಡಿಮೆ ಜ್ವರದಿಂದ ಕೂಡಿರುತ್ತದೆ. 

ಅತೀ ಹೆಚ್ಚು ತಾಪಮಾನದಿಂದ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆಯಾದ ಬಟ್ಟೆಯಿಂದ ಮೈ ಒರಸುವುದು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕುವುದು ಹಾಗೂ ವ್ಯಕ್ತಿಗೆ ತಂಪಾದ ಗಾಳಿಯ ವ್ಯವಸ್ಥೆ ಮಾಡುವುದು ಮಾಡಬೇಕು. ನೀರು ಅಥವಾ ಪುನರ್ಜಲೀಕರಣ ಪಾನೀಯಗಳಾದ ಓಆರ್‌ಎಸ್ ನಿಂಬೆಪಾನಕ ನೀಡಬೇಕು.  

ಅತೀ ಹೆಚ್ಚು ತಾಪಮಾನದಿಂದ ಉದ್ಭವಿಸಬಹುದಾದ ರೋಗಲಕ್ಷಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಆಗಿಂದಾಗ್ಗೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆರೋಗ್ಯ ಇಲಾಖೆ ನೀಡಿರುವ ಎಲ್ಲ ರೀತಿಯ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ  

ಕಿರು ಅಕ್ಕ ಕೆಫೆ ನಿರ್ವಹಿಸಲು ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನ 


ಧಾರವಾಡ 25: ದೀನ್‌ದಯಾಳ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಧಾರವಾಡ ಶಹರದ ಜಿಲ್ಲಾ ಆಸ್ಪತ್ರೆ ಆವರಣದ ಕಟ್ಟಡದಲ್ಲಿ ಕಿರು ಅಕ್ಕ ಕೆಫೆ ಯೋಜನೆ ಅನುಷ್ಠಾನಗೊಳಿಸಲು ಮತ್ತು ನಿರ್ವಹಿಸಲು ಧಾರವಾಡ ಶಹರದ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  

 ಅರ್ಜಿ ಸಲ್ಲಿಸಬಯಸುವ ಸ್ವ-ಸಹಾಯ ಗುಂಪುಗಳು ಕಡ್ಡಾಯವಾಗಿ ಡೇ-ನಲ್ಮ್‌ ಯೋಜನೆಯ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ರಚನೆಗೊಂಡಿರಬೇಕು ಮತ್ತು ಎಂಐಎಸ್ ನಂಬರನ್ನು ಹೊಂದಿರಬೇಕು.  

ಡೇ-ನಲ್ಮ್‌ ಯೋಜನೆಯಡಿ ಪ್ರದೇಶ ಮಟ್ಟದ ಒಕ್ಕೂಟ (ಎಎಲ್‌ಎಫ್) ದಲ್ಲಿ ಸದಸ್ಯತ್ವ ಹೊಂದಿರಬೇಕು. ಪಾಕ ಪರಿಣಿತಿ ಹೊಂದಿದವರಿರಬೇಕು ಮತ್ತು ಆಸಕ್ತರಿದ್ದು, ಪರಿಣಿತಿ ಪ್ರಮಾಣ ಪತ್ರ ಹೊಂದಿರಬೇಕು.  

ಸ್ವಂತ ಬಂಡವಾಳ ಹೂಡಲು ಸಶಕ್ತರಾಗಿಬೇಕು. ಮತ್ತು ಯಾವುದೇ ಹಣಕಾಸು ಸಂಸ್ಥೆ, ಬ್ಯಾಂಕುಗಳಲ್ಲಿ ಸುಸ್ತಿದಾರರಾಗಿರಬಾರದು. 

 ಆಯ್ಕೆಯ ಸಂದರ್ಭದಲ್ಲಿ ಕೆಫೆ ನಿರ್ವಹಣೆಗೆ ಸಂಬಂಧಪಟ್ಟ ಶ್ರೇಣಿಕರಣ ಮತ್ತು ಆಯ್ಕೆಯ ಪ್ರಕ್ರೀಯೆಗೆ ಬದ್ದರಾಗಿರಬೇಕು. ಉಖಖಿ, ಕಂಓ, ಈಖಖಂಋ ಪ್ರಮಾಣ ಪತ್ರ ಹೊಂದಿದವರಿರಬೇಕು. 

 ಪ್ರಾರಂಭಿಕ ಹಂತದಲ್ಲಿ ಒಂದು ವರ್ಷದ ಅವಧಿಗೆ ಮಾತ್ರ ಒಡಂಬಡಿಕೆಗೆ ಒಪ್ಪಂದ ಮಾಡಿಕೊಳ್ಳಲು ಸಿದ್ದರಿರಬೇಕು. 

ಆಸಕ್ತರು ಈ ಷರತ್ತುಗಳಿಗೆ ಒಳಪಟ್ಟು ನಿಗದಿಪಡಿಸಿದ ತಾಂತ್ರಿಕ ಮತ್ತು ಆರ್ಥಿಕ ದಾಖಲೆಗಳ ಮತ್ತು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಮುದಾಯ ಸಂಘಟನಾಧಿಕಾರಿಗಳು ವಲಯ ಕಚೇರಿ ನಂ-01 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಕಚೇರಿಗೆ ಮಾರ್ಚ್‌ 26, 2025 ರಿಂದ ಏಳು ದಿನಗಳೊಳಗಾಗಿ ಸಲ್ಲಿಸಬೇಕು.  

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಸಮುದಾಯ ಸಂಘಟನಾಧಿಕಾರಿಗಳು ವಲಯ ಕಚೇರಿ ನಂ-01 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಧಾರವಾಡ (ಮೊ-9632612668) ಸಂಪರ್ಕಿಸಬಹುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಡಾ. ಜಗಜೀವನ್ ರಾಂ ಅವರ 118ನೇ ಜಯಂತಿ  

ಪರಿಶಿಷ್ಟ ಜಾತಿಯ ಶ್ರೇಯಸ್ಸಿಗಾಗಿ ಶ್ರಮಿಸಿರುವ ವ್ಯಕ್ತಿಗಳಿಗೆ ಸನ್ಮಾನಿಸಲು 

ಅರ್ಹರಿಂದ ಅರ್ಜಿ ಆಹ್ವಾನ  


ಧಾರವಾಡ 25: ಹಸಿರು ಕ್ರಾತಿಯ ಹರಿಕಾರ ಹಾಗೂ ಭಾರತದ ಉಪಪ್ರಧಾನಿ ಡಾ. ಜಗಜೀವನ್ ರಾಂ ಅವರ 118 ನೇ ಜಯಂತಿಯನ್ನು ಎಪ್ರಿಲ್ 05, 2025 ರಂದು ಜಿಲ್ಲಾ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳಿಗೆ ಸನ್ಮಾನಿಸಲು ಅರ್ಜಿ ಆಹ್ವಾನಿಸಲಾಗಿದೆ.   

ಪರಿಶಿಷ್ಟ ಜಾತಿಯ ಶ್ರೇಯಸ್ಸಿಗಾಗಿ ಶ್ರಮಿಸಿರುವ ವ್ಯಕ್ತಿಗಳು ಸಮಾಜ ಕಲ್ಯಾಣ ಇಲಾಖೆಯ ಆಯಾ ತಾಲ್ಲೂಕುಗಳ ಸಹಾಯಕ ನಿರ್ದೇಶಕರ ಕಚೇರಿಗಳಿಂದ ಅರ್ಜಿ ಪಡೆದು, ಆಯಾ ತಾಲ್ಲೂಕುಗಳಿಗೆ ಮಾರ್ಚ್‌ 29, 2025 ರೊಳಗಾಗಿ ಸಲ್ಲಿಸಬೇಕು.  

 ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ:0836-2447201 ಹಾಗೂ ಆಯಾ ತಾಲ್ಲೂಕು ಕಚೇರಿಗಳಿಗೆ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.