ವರದಿ: ಸಂತೋಷ್ ಕುಮಾರ್ ಕಾಮತ್
ಮಾಂಜರಿ 24: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯು ಕಾರ್ಖಾನೆಗಳು ಹರಿಬಿಡುವ ನೀರು ಹಾಗೂ ಚರಂಡಿ ನೀರಿನಿಂದಾಗಿ ಇದೀಗ ಕಲುಷಿತಗೊಂಡಿದ್ದು ಲಕ್ಷಾಂತರ ಮತ್ರಗಳು ಸಾಯಲಾರಂಭಿಸಿವೆ. ಇದರಿಂದಾಗಿ ಕೃಷ್ಣಾ ನದಿ ತೀರದ ಜನರಲ್ಲಿ ಆತಂಕ ಮನೆ ಮಾಡಿದೆ.
ಬಿರು ಬೇಸಿಗೆಯಲ್ಲಿ ಕೃಷ್ಣಾ ನದಿ ನೀರನ್ನೇ ನೆಚ್ಚಿಕೊಂಡ ಸಾವಿರಾರು ಹಳ್ಳಿಗಳಿವೆ. ಜಾನುವಾರುಗಳೂ ಈ ನದಿಯನ್ನೇ ಅವಲಂಬಿಸಿವೆ. ಇದೀಗ ಮೀನುಗಳ ಸಾವಿನಿಂದಾಗಿ ಜನರು ಭಯಭೀತರಾಗಿದ್ದಾರೆ. ಮೀನುಗಳು ಸಾಯುತ್ತಿದ್ದರೂ ಪರಿಸರ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾರಣ ಪತ್ತೆಹಚ್ಚದೆ ಇರುವುದರಿಂದಾಗಿ ನದಿ ತೀರದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೇಲ್ನೋಟಕ್ಕೆ ಮೀನುಗಳ ಸಾವಿಗೆ ಕಲುಷಿತ ನೀರು ಕಾರಣ ಎಂದು ಜನರು ಹೇಳುತ್ತಿದ್ದಾರೆ. ನೀರು ಕಲುಷಿತಕ್ಕೆ ಕಾರ್ಖಾನೆ ತ್ಯಾಜ್ಯ ಕಾರಣವೇ ಅಥವಾ ಬೇರೆ ಏನಾದರೂ ಕಾರಣವಿದೆಯಾ ಎಂಬುದರ ಬಗ್ಗೆ ಜಿಲ್ಲಾಡಳಿತ ಪತ್ತೆಹಚ್ಚಲು ಮುಂದಾಗಬೇಕಾಗಿದೆ.
ಸುಡು ಬಿಸಿಲಿನಿಂದಾಗಿ ಕೃಷ್ಣಾ ನದಿ ನೀರು ದಿನದಿಂದ ದಿನಕ್ಕೆ ಖಾಲಿ ಖಾಲಿಯಾಗುತ್ತಿದೆ. ಮತ್ತೊಂದೆಡೆ ನೀರಿನಿಂದ ಮೀನುಗಳು ಸಾಯುತ್ತಿರುವುದರಿಂದ ಜನ ಆತಂಕಕ್ಕೆ ಒಳಗಿದ್ದಾರೆ.
ಚಿಕ್ಕೋಡಿ ತಾಲೂಕಿನ ಮಾಂಜರಿ, ಇಂಗಳಿ, ರಾಯಬಾಗ ತಾಲೂಕಿನ ಬಾವಾನಸೌದತ್ತಿ, ಜಲಾಲಪುರ, ಅಥಣಿ ತಾಲೂಕಿನ ಸಪ್ತಸಾಗರ, ಹಲ್ಯಾಳ, ಶಿರಹಟ್ಟಿ ಬಳಿ ಲಕ್ಷಾಂತರ ಮೀನು ಸಾಯುತ್ತಿವೆ. ಸತ್ತ ಮೀನುಗಳು ನದಿ ದಡದತ್ತ ಬರುತ್ತಿರುವುದರಿಂದ ದುರ್ನಾತ ಹೆಚ್ಚಾಗಿ ನದಿ ನೀರು ಮತ್ತಷ್ಟು ಮಲೀನವಾಗುತ್ತಿದೆ.
ಚಿಕ್ಕೋಡಿ, ಕಾಗವಾಡ, ರಾಯಬಾಗ, ಅಥಣಿ, ಜಮಖಂಡಿ ಸೇರಿದಂತೆ ಲಕ್ಷಾಂತರ ಜನರು ಪ್ರತಿನಿತ್ಯ ಕೃಷ್ಣಾ ನದಿ ನೀರನ್ನೇ ಕುಡಿಯಲು ಬಳಕೆ ಮಾಡುತ್ತಿದ್ದಾರೆ. ಆದರೆ ಇದೀಗ ನೀರು ಕಲುಷಿತವಾಗಿರುವುದರಿಂದ ಮನುಷ್ಯರಿಗೆ ಕುಡಿಯಲು ಜಾನುವಾರುಗಳು ಮೈತೊಳೆಯಲು ಯೋಗ್ಯವಾಗಿಲ್ಲ. ಮತ್ತೊಂದೆಡೆ ನದಿಯಲ್ಲಿ ಸಂಗ್ರಹಿಸಿದ ಇದೇ ನೀರನ್ನು ಕುಡಿಯಲು ಸರಬರಾಜು ಮಾಡಲಾಗುತ್ತದೆ. ಇದರಿಂದಾಗಿ ಸಾವಿರಾರು ಜನರ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತವೆ
ನೀರು ಬಿಡುತ್ತಿರುವುದು ಯಾರು?
ಈಗ ಕೃಷ್ಣಾ ನದಿಯಲ್ಲಿ ನೀರು ಹರಿಯುತ್ತಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಾರ್ಖಾನೆಗಳ ಮಾಲಿಕರು ಟ್ಯಾಂಕರ್ ಮೂಲಕ ಮಲಿನ, ತ್ಯಾಜ್ಯವನ್ನು ನದಿಗೆ ಬಿಡುತ್ತಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ. ಅತ್ತ ಕಾರ್ಖಾನೆಗಳ ಮುಖ್ಯಸ್ಥರನ್ನು ಕೇಳಿದರೆ ತಾವು ಕಲುಷಿತ ನೀರನ್ನು ನದಿಗೆ ಬಿಡುತ್ತಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಕೃಷ್ಣ ಒಡಲಿಗೆ ವಿಷ ಬಿಡುತ್ತಿರುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.
ಕೃಷ್ಣಾ ನದಿಗೆ ಕೆಲವು ಕಾರ್ಖಾನೆಗಳು ವಿಷಕಾರಿ ತಾಜ್ಯ ಬಿಡುತ್ತಿವೆ. ಇದರಿಂದಾಗಿ ಲಕ್ಷಾಂತರ ಮೀನು ಸಾಯುತ್ತಿವೆ. ಇದೇ ವಿಷಕಾರಿ ನೀರನ್ನು ರೈತರು ಬೆಳೆಗಳಿಗೆ ಬಳಕೆ ಮಾಡುತ್ತಿರುವುದರಿಂದ ಫಸಲು ಹಾಗೂ ಜನರು ನದಿ ನೀರನ್ನೇ ಕುಡಿಯುವುದರಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜಿಲ್ಲಾಡಳಿತ ತ್ಯಾಜ್ಯ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಸಂಜೀವ್ ಬಡಿಗೇರ್ ಕೆರೂರ
ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡುಗಡೆ ಮಾಡಲು ಮನವಿ ಸಲ್ಲಿಸಲಾಗಿದೆ. ನೀರು ಕಲುಷಿತಗೊಂಡಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು.
*ಸುಭಾಷ ಸಂಪಗಾವಿ ಉಪವಿಭಾಗಾಧಿಕಾರಿ