ವರದಿ: ಸೈಯ್ಯದ ನದಾಫ ಬೀಳಗಿ
ಬೀಳಗಿ 23: ಬೀಳಗಿ ತಾಲೂಕಿನಲ್ಲಿ ಕೃಷ್ಣೆ, ಘಟಪ್ರಭೆ ಎರಡು ವಿಶಾಲವಾದ ನದಿಗಳು ಹರಿಯುತ್ತಿದ್ದರು ಬೇಸಿಗೆಯಲ್ಲಿ ಜನ-ಜಾನುವಾರಗಳಿಗೆ ನೀರಿನ ದಾಹ ಇಂಗಿಸುವುದು ಅಷ್ಟೇ ಕಷ್ಟಕರವಾಗಿದೆ.
ನೀರಿನ ಸಮಸ್ಯೆ ಅಧಿವೇಶನದಲ್ಲಿ ಚರ್ಚೆ:
ಪ್ರಸಕ್ತ ಆಲಮಟ್ಟಿ ಜಲಾಶಯದಲ್ಲಿ ನೀರಿನ ಇಂದಿನ ಮಟ್ಟ 511.07ಮೀಟರ್ ಇದೆ. ಇದನ್ನು ಗಮನಿಸಿದರೆ ಮೇ ಅಂತ್ಯದವರೆಗೆ ನೀರಿನ ಕೊರತೆ ಉಂಟಾಗುವುದಿಲ್ಲವೆಂದು ಹೇಳಲಾಗುತ್ತಿದೆ. ಒಂದು ವೇಳೆ ಮುಂದುವರೆದ ದಿನಗಳಲ್ಲಿ ನದಿ ಪಾತ್ರದಲ್ಲಿ ನೀರು ಕಡಿಮೆ ಆದರೆ ಜನ-ಜಾನುವಾರಗಳಿಗೆ ಕುಡಿಯುವ ನೀರಿನ ಅಗತ್ಯಕ್ಕಾಗಿ ಕೋಹಿನಾ ಜಲಾಶಯದಿಂದ ನೀರು ಬಿಡುಗಡೆಗೆ ಜಿಲ್ಲಾಢಳಿತದಿಂದ ಕ್ರಮ ವಹಿಸಬೇಕಾಗುತ್ತದೆ. ಇಗಾಗಲೇ ಅಧಿವೇಶನದಲ್ಲಿ ಬೀಳಗಿ ಮತಕ್ಷೇತ್ರದ ಕೆಲವು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿಯವರು ಧ್ವನಿಯತ್ತಿದ್ದಾರೆ. ಈ ಧ್ವನಿಗೆ ಸರಕಾರ ಎಷ್ಟರ ಮಟ್ಟಿಗೆ ಸ್ಪಂದನೆ ನೀಡಿ ತಾಲೂಕಿನ ಜನ-ಜಾನುವಾರಗಳ ದಾಹ ದಣಿಸುವುದು ಕಾದು ನೋಡಬೇಕಾಗಿದೆ.
ನೀರಿನ ಸಮಸ್ಯ ಉದ್ಭವಿಸದು:
ಕೃಷ್ಣಾ ನದಿಯ ಹಳ್ಳಿಗಳಿಗೆ 3ಕಡೆಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು ಈ ಯೋಜನೆಗಳಿಂದ ಪ್ರತಿದಿನ 22ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜುವಾಗುತ್ತಿದೆ. ಪುನರವಸತಿ ಕೇಂದ್ರಗಳ ಸ್ಥಿತಿ ಸಧ್ಯದ ಮಟ್ಟಿಗೆ ನೀರಿನ ಸಮಸ್ಯ ಉದ್ಭವಿಸುವುದಿಲ್ಲ.
ಅರಕೇರಿ ಬಹು ಕುಡಿಯುವ ನೀರಿನ ಯೋಜನೆ ಸ್ಥಗಿತ:
ಘಟಪ್ರಭಾ ನದಿಯ ಪಾತ್ರದಲ್ಲಿನ 38ಗ್ರಾಮಗಳು 3ಬಹು ಕುಡಿಯುವ ನೀರಿನ ಯೋಜನೆಗಳಿಂದ ಅವಲಂಭಿತವಿದ್ದು ಪ್ರಸಕ್ತ ಕಾತರಕಿ ಬ್ಯಾರೇಜ್‌ನಲ್ಲಿ ಘಟಪ್ರಭೆ ನೀರು ಕಡಿಮೆ ಆಗಿರುವುದರಿಂದ ಸದರಿ ಬ್ಯಾರೇಜ್ ಅವಲಂಬಿತ ಅರಕೇರಿ ಬಹು ಕುಡಿಯುವ ನೀರಿನ ಯೋಜನೆಯನ್ನು ಇದೇ ಮಾರ್ಚ 14ರಿಂದ ಸ್ಥಗಿತಗೊಳಿಸಲಾಗಿದೆ. ಈ ಯೋಜನೆಗೆ ಒಳಪಡುವ 8ಗ್ರಾಮಗಳಲ್ಲಿ ಒಟ್ಟು 38 ಕಾರ್ಯನಿರತ ಸರಕಾರಿ ಕೊಳವೆ ಬಾವಿಗಳಿದ್ದು ಇವುಗಳ ಮೂಲಕ ಕುಡಿಯುವ ನೀರನ್ನು ಗ್ರಾಪಂಗಳಿಂದ ಸರಬರಾಜು ಮಾಡಲಾಗುತ್ತಿದೆ. ಉಳಿದ ಇನ್ನೂ 2ಯೋಜನೆಗಳಿಗೆ ಎಪ್ರೀಲ್ ಅಂತ್ಯದವರೆಗೆ ಕುಡಿಯುವ ನೀರು ಲಭ್ಯವಿದ್ದು ಈ 2ಯೋಜನೆಗಳ ಅವಲಂಬಿತ 30ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಕಾರ್ಯನಿರತವಾಗಿವೆ.
2ಟಿಎಂಸಿ ನೀರಿಗೆ ಪ್ರಸ್ತಾವನೆ:
ಘಟಪ್ರಭಾ ನದಿ ಪಾತ್ರದಲ್ಲಿ ಈಗಾಗಲೇ ನೀರು ಕಡಿಮೆಯಾಗಿದ್ದು ನದಿಗೆ ನೀರು ಬಿಡುವ ಕುರಿತು ಇದೇ ಮಾರ್ಚ 11ರಂದು ತಹಶೀಲ್ದಾರ ಮೂಲಕ ಜಿಲ್ಲಾಢಳಿತಕ್ಕೆ ಮನವಿ ಸಲ್ಲಿಸಿದೆ. ಇದೇ ಮಾರ್ಚ 17ರಂದು ಘಟಪ್ರಭಾ ನದಿಗೆ 2ಟಿಎಂಸಿ ನೀರು ಬಿಡುಗಡೆಗೊಳಿಸಲು ಕಾರ್ಯನಿರತ ಇಂಜನೀಯರ ಗ್ರಾ.ಕು.ನೀ ಮತ್ತು ನೈರ್ಮಲ್ಯ ವಿಭಾಗ ಬಾಗಲಕೋಟೆಯವರು, ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದರಿ ನೀರು ಬಿಡುಗಡೆಗೊಳಿಸಿದ್ದಲ್ಲಿ ಮೇ ಅಂತ್ಯದವರೆಗೆ ಜನ-ಜಾನುವಾರಗಳಿಗೆ ಕುಡಿಯುವ ನೀರು ಅನುಕೂಲವಾಗುತ್ತದೆ.
ರೈತರೊಂದಿಗೆ ಒಪ್ಪಂದ ಪತ್ರ:
ನೀರಿನ ಸಮಸ್ಯೆ ಉಲ್ಭಣವಾಗದಂತೆ ಮುಂಜಾಗ್ರತ ಕ್ರಮವಾಗಿ ಇದೇ ಮಾರ್ಚ 13ರಂದು ಜಮಖಂಡಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರವರು ಕುಡಿಯುವ ನೀರಿನ ಸಮಸ್ಯೆ ಸಭೆ ಜರುಗಿಸಿ ಗ್ರಾಮೀಣ ಭಾಗದಲ್ಲಿ ಒಟ್ಟು 214 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ರೈತರೊಂದಿಗೆ ಒಪ್ಪಂದ ಪತ್ರ ಪಡೆದಿದ್ದಾರೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಿದರೆ ಈ ಖಾಸಗಿ ಕೊಳವೆ ಬಾವಿಗಳನ್ನು ಬಾಡಗೆ ರೂಪದಲ್ಲಿ ಪಡೆದು ಅಗತ್ಯ ನೀರಿನ ಪ್ರಮಾಣ ಒದಗಿಸಲು ಕ್ರಮ ಜರುಗಿಸಲಾಗುತ್ತಿದೆ.
ಬೀಳಗಿ ಜನತೆಗೆ ಸದ್ಯಕ್ಕಿಲ್ಲ ಸಂಕಷ್ಟ :
ಪಟ್ಟಣದಲ್ಲಿ ಬೇಸಿಗೆ ನೀರಿನ ಅಭಾವ ತಪ್ಪಿಸಲು ಪೂರಕವಾಗಿ ಬೇಕಾಗುವ ವಸ್ತುಗಳನ್ನು ತಯಾರಿ ಮಾಡಿಕೊಳ್ಳಲಾಗಿದೆ. ನೀರು ಶುದ್ಧಿಕರಣ ಘಟಕಗಳು ಒಟ್ಟು 8 ಇದ್ದು ಅವುಗಳಲ್ಲಿ 5ಚಾಲ್ತಿಯಲ್ಲಿವೆ, 3ರ ದುರಸ್ಥಿ ಕಾರ್ಯನಡೆದಿದೆ. ಎರಡು ದಿನಗಳಲ್ಲಿ ಪ್ರಾರಂಭಿಸುವದಾಗಿ ಪಪಂ ಮುಖ್ಯಾಧಿಕಾರಿ ಹೇಳುವರು.
ಗ್ರಾಮೀಣ ಪ್ರದೇಶ ಸ್ಥಿತಿ-ಗತಿ
ಸರಕಾರಿ ಕೊಳವೆ ಬಾವಿಗಳು: 316
ಚಾಲ್ತಿ ಇರುವ ಬಾವಿಗಳು: 271
ಸ್ಥಗಿತ ಕೊಳವೆ ಬಾವಿಗಳು: 45
ನೀರು ಶುದ್ಧಿಕರಣ ಘಟಕಗಳು: 83
ಕಾರ್ಯನಿರ್ವಹನೆ ಘಟಕ: 76
ದುರಸ್ಥಿ ಘಟಕಗಳು: 7
ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನ-ಜಾನುವಾರಗಳಿಗೆ ಕುಡಿಯುವ ನೀರು ಅಭಾವ ತಪ್ಪಿಸಲು ಎಸಿಯವರ ಜೊತೆ ಸಭೆ ಸೇರಿ ನೀರಿನ ಪೂರಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಘಟಪ್ರಭಾ ನದಿ ನೀರು ಕಡಿಮೆ ಆಗಿರುವುದರಿಂದ ಆ ಭಾಗದ ಜನತೆಗೆ ಪರಾ್ಯಯ ವ್ಯವಸ್ಥೆ ಕಲ್ಪಿಸಲಾಗುವುದು.
-ವಿನೋದ ಹತ್ತಳ್ಳಿ ತಹಶೀಲ್ದಾರ ಬೀಳಗಿ.