ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸುವ ಅಕ್ಷಯಪಾತ್ರೆ : ತಮ್ಮಣ್ಣವರ

ಹಾರೂಗೇರಿ 02: ಗ್ರಾಮೀಣ ಹಾಗೂ ನಗರ ಪ್ರದೇಶದ ಬಡವರು, ಶ್ರಮಿಕರು ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಒದಗಿಸುವ ಉದ್ದೇಶದಿಂದ ಹಾರೂಗೇರಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುತ್ತಿದೆ ಎಂದು ಕುಡಚಿ ವಿಧಾನಸಭಾ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. 

ಪಟ್ಟಣದ ಗೋಕಾಕ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಮಂಗಳವಾರ ನೂತನ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.  

ಹಾರೂಗೇರಿ ಪಟ್ಟಣಕ್ಕೆ ನೂರಾರು ಜನ ಬಡವರು ಸುತ್ತಮುತ್ತಲಿನ ಗ್ರಾಮಗಳಿಂದ ಕೂಲಿ ಕೆಲಸಕ್ಕೆ ಹಾಗೂ ಇನ್ನೀತರ ಕೆಲಸಗಳಿಗೆ ಆಗಮಿಸುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆಗೆಂದು ನಿತ್ಯ ಬರುತ್ತಿರುತ್ತಾರೆ. ಅವರಿಗೆ 5ರೂ. ಉಪಹಾರ ಹಾಗೂ 10ರೂ. ಊಟ ದೊರೆಯಲಿದೆ. ಕಾಂಗ್ರೆಸ್ ಸರ್ಕಾರದ ಪ್ರತಿಯೊಂದು ಯೋಜನೆಗಳು ಬಡವರ ಪರವಾಗಿ ಇವೆ. ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಆರಂಭಗೊಂಡ ಇಂದಿರಾ ಕ್ಯಾಂಟೀನ್‌ಗಳು ಲಕ್ಷ, ಕೋಟಿ ಜನರ ಹೊಟ್ಟೆ ತುಂಬಿಸುತ್ತಿವೆ. ಪೌಷ್ಠಿಕಾಂಶಯುಕ್ತ ಆಹಾರವನ್ನು ಅತ್ಯಂತ ಕಡಿಮೆ ಬೆಲೆಗೆ ಜನರಿಗೆ ಒದಗಿಸುವುದು ಇಂದಿರಾ ಕ್ಯಾಂಟೀನ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. 

ಪುರಸಭೆ ಮುಖ್ಯಾಧಿಕಾರಿ ಅಭಿಷೇಕ ಪಾಂಡೆ, ಇಂಜೀನೀಯರ ಎಸ್‌.ಆರ್‌.ಚೌಗಲಾ, ವೈದ್ಯಾಧಿಕಾರಿ ಡಾ.ಸುಮೀತ ಪಾಟೀಲ, ಗಣ್ಯರಾದ ವರ್ಧಮಾನ ಶಿರಹಟ್ಟಿ, ಭೀಮು ಬದ್ನಿಕಾಯಿ, ಬಾಳೇಶ ಹಾಡಕಾರ, ಸಚೀನ ಹಳಕಲ್ಲ, ಬುರಾನ ಶೇಖ, ಶಶಿಧರ ಶಿಂಗೆ, ಆನಂದಗೌಡ ಪಾಟೀಲ, ಬಾಪುಸಾಬ ಜಮಾದಾರ, ಪರಶುರಾಮ ಧರ್ಮಟ್ಟಿ, ಪುರಸಭೆ ಸದಸ್ಯರಾದ ಬಸವರಾಜ ಚೌಗಲಾ, ವಿಶಾಲ ಅರಕೇರಿ, ಸಲಿಂ ಅಲಾಸೆ, ರವಿ ಕರೋಶಿ, ವಸಂತ ಅಲಖನೂರ, ಅಪ್ಪಾಸಾಬ ಅರಕೇರಿ, ಶಂಕರ ಪಾಗೆ ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು.