ಗದಗ 26: ಸೆಪ್ಟೆಂಬರ್ ಮಾಹೆಯ 2ನೇ ವಾರದಲ್ಲಿ ರೋಟಾ ವೈರಸ್ನಿಂದ ಅತಿಸಾರ ಬೇಧಿಯ ವಿರುದ್ಧ ರಕ್ಷಣೆ ನೀಡುವ ಸಲುವಾಗಿ ರೋಟಾ ವೈರಸ್ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏರ್ಪಡಿಸಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ತಿಳಿಸಿದರು. ಅವರು ದಿ. 23ರಂದು ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಟಾಸ್ಕ್ ಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ರೋಟಾ ವೈರಸ್ನಿಂದ ಅತಿಸಾರ ಬೇಧಿಯ ಸಲುವಾಗಿ ರೋಟಾ ವೈರಸ್ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಕುರಿತು ಕಿರಿಯ ಮಹಿಳಾ ಆರೋಗ್ಯ ಸಹಾಯಕರು, ಕಿರಿಯ ಪುರುಷ ಆರೋಗ್ಯ ಸಹಾಯಕರುಗಳು, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು. ಗದಗ ಜಿಲ್ಲೆಯಲ್ಲಿ 19618 ಮಕ್ಕಳಿಗೆ ರೋಟಾ ವೈರಸ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರೂಟಾ ವೈರಸ್ ಲಸಿಕೆ ಮಗು ಜನಿಸಿದ 6ನೇ ವಾರ, 10ನೇ ವಾರ, 14ನೇ ವಾರ ಹೀಗೆ ಮೂರು ಡೋಸ್ ಲಸಿಕೆಯನ್ನು ನೀಡಲಾಗುವುದು. ಗರ್ಭಿಣಿ ಯರಿಗೆ ಟಿಟಿ ವೈರಸ್ ಸೋಂಕು ಹರಡದಂತೆ ಟಿಡಿ ಲಸಿಕೆಯನ್ನು ನೀಡಲಾಗುವುದು ಎಂದು ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿರುಪಾಕ್ಷರಡ್ಡಿ ಮಾದಿನೂರು ಅವರು ಸಭೆಗೆ ತಿಳಿಸಿದರು.
ಗದಗ ಜಿಲ್ಲೆಯಲ್ಲಿ 4 ತಾಯಂದಿರ ಮರಣಗಳು ಸಂಭವಿಸಿದ್ದು, 36 ಶಿಶು ಮರಣ ಸಂಭವಿಸಿವೆ. ಜಿಲ್ಲೆಯಲ್ಲಿ ಶೇಕಡ 100 ರಷ್ಟು ಸಾಂಸ್ಥಿಕ ಹೆರಿಗೆಗಳು ಸಂಭವಿಸಿವೆ. (institutional delivery) ಎಂದು ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ. ಗೊಜನೂರ ಸಭೆಗೆ ತಿಳಿಸಿದರು.
ಸಭೆಯಲ್ಲಿ ಬಿಜಾಪುರ ಎಸ್.ಎಮ್.ಓ ಡಾ. ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಜಿ. ಎಸ್. ಪಲ್ಲೇದ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ.ಕೆ. ಭಜಂತ್ರಿ, ತಾಲೂಕಾ ವೈದ್ಯಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ ಚಂದ್ರಕಲಾ ಜೆ, ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿ ಡಾ. ಶ್ರೀಕಾಂತ ಕಾಟವಟೆ, ಜಿಲ್ಲಾ ಕೀಟ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ , ಜಿಲ್ಲಾ ನರ್ಸಿಂಗ ಅಧಿಕಾರಿಗಳಾದ ಕೆ.ಎಚ್. ಉಮಚಗಿ, ಆರೋಗ್ಯ ಇಲಾಖೆಯವರು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.