ವಿಜಯಪುರ: ಸತ್ಯಸಂಧತೀರ್ಥರ ಆರಾಧನಾ ಮಹೋತ್ಸವ ಆಚರಣೆ

ಲೋಕದರ್ಶನ ವರದಿ

ವಿಜಯಪುರ 06: ನಗರದ ಮಠಪತಿಗಲ್ಲಿಯಲ್ಲಿರುವ ಮೃತ್ತಿಕಾ ವೃಂದಾವನದಲ್ಲಿ ಬುಧವಾರ ಉತ್ತರಾದಿ ಮಠ ಪರಂಪರೆಯ ಯತಿವರೇಣ್ಯ ಸತ್ಯಸಂಧ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ಜರುಗಿತು.

ಶತಮಾನದ ಹಿಂದೆ  ಐತಿಹಾಸಿಕ ನಗರದಲ್ಲಿ ಪ್ರಪ್ರಥಮವಾಗಿ ಸ್ಥಾಪನೆಗೊಂಡ ಅಷ್ಟಪೈಲಾಕೃತಿಯ ಮೃತ್ತಿಕಾ ವೃಂದಾವನವಾಗಿದ್ದು, ಮೊದಲಿನಿಂದಲೂ ಬೋಧರಾಚಾರ್ಯರ ಮಠವೆಂದೇ ಪ್ರಸಿದ್ಧವಾದ ಇದು ಅತ್ಯಂತ ಪವಿತ್ರ ಧಾಮರ್ಿಕ ಶ್ರದ್ಧಾ ಕೇಂದ್ರವಾಗಿದೆ. ಮಠ ಮನೆತನದವರು ಆರಾಧನೆಯನ್ನು ಪ್ರತಿವರ್ಷ ಆಚರಿಸುತ್ತ ಬಂದಿರುವರು.

ಬೆಳಿಗ್ಗೆಯಿಂದಲೆ ಭಕ್ತಾದಿಗಳು ತಂಡೋಪತಂಡವಾಗಿ ಮೃತ್ತಿಕಾ ವೃಂದಾವನದ ದರ್ಶನ ಪಡೆದುಕೊಂಡರು. ಬೆಳಿಗ್ಗೆ ವೃಂದಾವನಕ್ಕೆ ಮಠದ ಪರಿವಾರದವರು ಪಂಚಾಮೃತ ಅಭಿಷೇಕ ಮಾಡಿದರಲ್ಲದೇ ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಿದ್ದರು. ವೈದಿಕ ವೃಂದದ ಮಂತ್ರಘೋಷ  ಮಾರ್ದನಿಸುತ್ತಿತ್ತು. ದಾಸವರೇಣ್ಯರ ಹಾಡುಗಳ ನಿನಾದ ವೃಂದಾವನದ ತುಂಬ ಕೇಳಿ ಬರುತ್ತಿತ್ತು.

ಬಳಿಕ ಪಂಡಿತ  ವೇದನಿಧಿ ಆಚಾರ್ಯರು ಸತ್ಯಸಂಧ ತೀರ್ಥರ ಮಹಿಮೆಯನ್ನು  ಪ್ರವಚನದ ಮೂಲಕ ಹೇಳಿದರಲ್ಲದೇ ಅವರು ರಚಿಸಿದ ಪುರುಷಸೂಕ್ತ ವ್ಯಾಖ್ಯಾನ, ಧರ್ಮ ಸೂಕ್ತ ವ್ಯಾಖ್ಯಾನ, ಶ್ರೀ ವಿಷ್ಣು ಸಹಸ್ರನಾಮ ವ್ಯಾಖ್ಯಾನ ಮೊದಲಾದ ಗ್ರಂಥಗಳ ಕುರಿತು ವಿವರಿಸಿದರು.

ತದನಂತರ ಭಕ್ತಿಸಂಗೀತ ಸೇವೆ, ವಿವಿಧ ಬಗೆಯ ಸೇವೆಗಳು ಜರುಗಿ, ಬಂದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ನಡೆಯಿತು.

ಮಹೋತ್ಸವದಲ್ಲಿ ಮಠ ಮನೆತನದ ವೇಣುಗೋಪಾಲ ಮಠ, ಪಾಂಡುರಂಗ ಮಠ, ಗೋಪಾಲ ಮಠ, ನಾಗರಾಜ ಮಠ, ರಂಗಣ್ಣ ಮಠ, ಅನಂತ ಮಠ, ಜಿ.ಎಸ್ ಡಂಬಳ ಮುಂತಾದವರು ಭಾಗವಹಿಸಿದ್ದರು.