ಎ.ಐ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಲಿ : ಎನ್‌.ಎ.ಎಂ. ಇಸ್ಮಾಯಿಲ್

Taming AI technology in our own language: N.A.M. Ismail

ಎ.ಐ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಲಿ : ಎನ್‌.ಎ.ಎಂ. ಇಸ್ಮಾಯಿಲ್ 

ಹಂಪಿ 21:ಎ.ಐ ತಂತ್ರಜ್ಞಾನದ ಇಂದಿನ ಯುಗದಲ್ಲಿ ಭಾಷೆಯ ಜೊತೆಗಿನ ಸಾವಯವ ಸಂಬಂಧವನ್ನು ಮತ್ತು ಜೈವಿಕ ಸಂಬಂಧವನ್ನು ಮರು ಸ್ಥಾಪಿಸಿಕೊಳ್ಳುವ ಕಡೆ ನಾವು ಮುಖಮಾಡಬೇಕು. ಎ.ಐ ತಂತ್ರಜ್ಞಾನ ಇಂಗ್ಲೀಷ್ ಭಾಷೆಯ ಮೂಲಕ ಉಗಮಗೊಂಡಿದ್ದು, ಅದರ ಬೆಳವಣಿಗೆಯೂ ಇಂಗ್ಲೀಷ್ ಭಾಷೆಯ ಮೂಲಕವೇ ನಡೆಯುತ್ತಿದೆ. ಎ.ಐ ತಂತ್ರಜ್ಞಾನವನ್ನು ಪ್ರಾದೇಶಿಕ ಭಾಷೆಗಳಲ್ಲಿ ಬಳಸುವ ಮೂಲಕ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಬೇಕು ಎಂದು ಕನ್ನಡ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರು ಮತ್ತು ಲೇಖಕರಾದ ಎನ್‌.ಎ.ಎಂ. ಇಸ್ಮಾಯಿಲ್ ಅವರು ಅಭಿಪ್ರಾಯಪಟ್ಟರು.  ಕನ್ನಡ ವಿಶ್ವವಿದ್ಯಾಲಯದ ಕೇಶಿರಾಜ ಸಭಾಂಗಣದಲ್ಲಿ 21ನೇ ಫೆಬ್ರವರಿ 2025ರಂದು ಕನ್ನಡ ಭಾಷಾಧ್ಯಯನ ವಿಭಾಗ ಮತ್ತು ಕೆ.ಎಲ್‌.ಇ ದತ್ತಿನಿಧಿ ಸಹಯೋಗದೊಂದಿಗೆ ಲೋಕ ತಾಯ್ನುಡಿ ದಿನದ ಅಂಗವಾಗಿ ಮೆರೆವ ಕರ್ಣಾಟ ದೇಶದೊಳ್ ಎ.ಐ ಕಾಲದ ತಾಯ್ನುಡಿ ತಲ್ಲಣಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎ.ಐ ತಂತ್ರಜ್ಞಾನವು ಅದಕ್ಕೆ ಅಳವಡಿಸಲಾದ ಮಾಹಿತಿ ಮತ್ತು ತಾರ್ಕಿಕ ಲೆಕ್ಕಚಾರದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಆದರೆ ಮನುಷ್ಯನ ಬುದ್ಧಿಮತ್ತೆ ಎಂಬುದು ಶಾರೀರಿಕ ಮತ್ತು ಮಾನಸಿಕ ಪ್ರಕ್ರಿಯೆ. ಮನುಷ್ಯನ ಬುದ್ಧಿಮತ್ತೆ ಯಾವುದೇ ವಿಚಾರವನ್ನು ಪ್ರಸ್ತುತಪಡಿಸುವಾಗ ಅವನಲ್ಲಿರುವ ಆಲೋಚನೆ ಮತ್ತು ನೆನಪುಗಳು ಪ್ರಭಾವ ಬೀರುತ್ತವೆ. ಈ ಬುದ್ಧಿವಂತಿಕೆ ಮತ್ತು ಪ್ರಜ್ಞೆ ಯಂತ್ರದ ಜೊತೆ ಸೇರುವುದಿಲ್ಲ. ಸಾರ್ವತ್ರಿಕ ಉದ್ದೇಶದ ಬುದ್ಧಿವಂತಿಕೆ ಮತ್ತು ತರ್ಕವನ್ನು ಎ.ಐ. ತಂತ್ರಜ್ಞಾನದಲ್ಲಿದೆ. ಆದರೆ ಕಥೆ ಹೇಳುವ, ಮಂಡಿಸುವ ಕ್ರಿಯೆಯಿಲ್ಲ. ಎ.ಐ ದೇಹ ಎನ್ನುವ ಸಾಮಾಜಿಕ, ರಾಜಕೀಯ, ಆರ್ಥಿಕ ಪರಿಸರದಿಂದ ಹೊರತಾಗಿದೆ. ಪರಿಸರವೇ ಇಲ್ಲದೇ ಲೆಕ್ಕಚಾರ ಮಾಡಿ ಫಲಿತಗಳನ್ನು ಮುಂದಿಡುತ್ತದೆ ಎಂದರು. ಜ್ಞಾನದ ಕುರಿತಂತೆ ಈಗಾಗಲೇ ಸಾಕಷ್ಟು ಚರ್ಚೆಗಳಾದರೂ, ಯಾವುದು ಜ್ಞಾನ ಎಂಬುದು ನಿರ್ಧರಿತವಾಗಿಲ್ಲ. ದೇಶಿಯ ಭಾಷೆಗಳಲ್ಲಿದ್ದ ಜ್ಞಾನವನ್ನು ಜ್ಞಾನ ಎಂದು ಪರಿಗಣಿಸಿರುವುದು ಕಂಡು ಬರುವುದಿಲ್ಲ. ಆದರೆ 12ನೇ ಶತಮಾನದ ವಚನಕಾರರು ದೇಶಿಯ ಭಾಷೆಗಳ ಕರಕುಶಲ ಕಲೆಗಳಲ್ಲಿನ ಜ್ಞಾನವನ್ನು ಗುರುತಿಸುತ್ತಾರೆ. ಕೈಗಾರಿಕ ಕ್ರಾಂತಿಯ ಎಲ್ಲ ಆವಿಷ್ಕಾರಗಳು ಕುಶಲಕರ್ಮಿಗಳಿಂದ ಆಗಿದ್ದು.  ಕರಕುಶಲ ಸಮುದಾಯಗಳು ತಮ್ಮಲ್ಲಿನ ಜ್ಞಾನವನ್ನು ತಂತ್ರಜ್ಞಾನದ ಮೂಲಕ ಪ್ರಸ್ತುತಪಡಿಸುವಂತಾಗಬೇಕು ಆ ಮೂಲಕ ತಾಯ್ನುಡಿಗಳನ್ನು ಉಳಿಸುವ ಮತ್ತು ಜಾಗತಿಕ ಮಟ್ಟದಲ್ಲಿ ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಇಂದು ನಗರಗಳಲ್ಲಿ ಇಂಗ್ಲೀಷ್, ಹಳ್ಳಿಗಳಲ್ಲಿ ಕನ್ನಡ ಎನ್ನುವಾಗಲೂ, ಏನನ್ನು ಕಳೆದು ಕೊಂಡಿದ್ದೇವೆ ಎನ್ನುವಾಗಲೆಲ್ಲ ತಾಯ್ನುಡಿಗೆ ಹೊರಳುತ್ತೇವೆ. ಭಾಷೆ ನಮ್ಮ ಭಾವನೆಗಳೊಂದಿಗೆ ಬೆಸೆದುಕೊಂಡಿರುವುದು. ಯಾವುದೇ ತಂತ್ರಜ್ಞಾನದ ಮೂಲಕ ತಾಯ್ನುಡಿಯನ್ನು ಸುಲಭವಾಗಿ ಮರೆಮಾಚಲು ಸಾಧ್ಯವಿಲ್ಲ. ಎ.ಐ ತಂತ್ರಜ್ಞಾನವು ಇನ್ನು ಶೈಶವಾಸ್ಥೆಯಲ್ಲಿರುವಾಗಲೇ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಯಾವುದೇ ತಂತ್ರಜ್ಞಾನಗಳು ಹೊಸದಾಗಿ ಬಂದಾಗ ಆತಂಕಗಳು ಸಹಜವೇ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಎ.ಐ ತಂತ್ರಜ್ಞಾನವನ್ನು ಪಳಗಿಸುವ ಮತ್ತು ನಮ್ಮದಾಗಿಸಿಕೊಳ್ಳುವ ಧೀಶಕ್ತಿ ನಾವು ಬೆಳಸಿಕೊಳ್ಳಬೇಕು ಎಂದು ಹೇಳಿದರು. ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಪಿ. ಮಹಾದೇವಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ವಿಶ್ವಸಂಸ್ಥೆಯು ಫೆಬ್ರುವರಿ 21, 2000ನೇ ಇಸ್ವಿಯಲ್ಲಿ ಲೋಕ ತಾಯ್ನುಡಿ ದಿನವನ್ನು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಎಲ್ಲಡೆ ತಾಯ್ನುಡಿ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತದೆ. ಎ.ಐ. ತಂತ್ರಜ್ಞಾನವು ಭಾಷೆಗೆ ಸಂಬಂಧಿಸಿದಂತೆ ರೂಪ ಭೇಧ, ಅರ್ಥ ಭೇಧ ಮತ್ತು ಧ್ವನಿ ಬೇಧಗಳನ್ನು ತೋರಿಸುವಲ್ಲಿ ಮತ್ತು ಸಮುದಾಯಗಳ ಸಾಂಸ್ಕೃತಿಕ ಅನನ್ಯತೆ, ನಿಲುವು, ಭಾವನಾತ್ಮಕ ದೃಷ್ಠಿಕೋನಗಳನ್ನು ತೋರಿಸುವಲ್ಲಿ ವಿಫಲವಾಗಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಭಾಷಾಧ್ಯಯನ ವಿಭಾಗದ ಸಂಶೋಧನಾರ್ಥಿ ಶ್ರೀದೇವಿ ಅವರು ನಿರೂಪಿಸಿದರು. ಸಂಶೋಧನಾರ್ಥಿ  ಚಂದುಸ್ವಾಮಿ ಅವರು ವಂದಿಸಿದರು.