ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ 13ನೇ ವಾರ್ಷಿಕ ಘಟಿಕೋತ್ಸವ
ಬೆಳಗಾವಿ, ಏ.11: ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯ ರಾಷ್ಟವಾಗಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಿ ಪದವಿ ನಂತರ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೋಪಿಸಿಕೊಳ್ಳಬೇಕು. ಬರುವಂತಹ ದಿನಗಳಲ್ಲಿ ಭಾರತ ವಿಶ್ವಗುರು ಸ್ಥಾನ ಅಲಂಕರಿಸಲಿದೆ ಎಂದು ವಿಶ್ವವಿದ್ಯಾಲಯ ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ (ಏ.11) ನಡೆದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ 13ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪದವಿ ಪಡೆದು ವೃತ್ತಿ ಜೀವನಕ್ಕೆ ಕಾಲಿಡುವ ಸಮಯ ನಿಮ್ಮದಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಣೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ವೃತ್ತಿ ಜೀವನದಲ್ಲಿ ಮುಂದಾಗಬೇಕು.ಸರ್ವಪಲ್ಲಿ ರಾಧಾಕೃಷ್ಣನ್, ಸ್ವಾಮಿ ವಿವೇಕಾನಂದರ, ಡಾ. ಎ. ಪಿ.ಜೆ ಅಬ್ದುಲ್ ಕಲಾಂ ಅವರ ಮಾತಿನಂತೆ ಎಲ್ಲರೂ ಭವಿಷ್ಯದಲ್ಲಿ ಉನ್ನತ ವ್ಯಕ್ತಿಗಳಾಗಿ ಬೆಳೆಯಬೇಕು.
ಯುವ ಶಕ್ತಿ ರಾಷ್ಟ್ರದ ಅಭಿವೃದ್ಧಿಗೆ ಆಧಾರ ಸ್ಥಂಭವಿದ್ದಂತೆ. ಇಂದು ಪದವಿಗಳನ್ನು ಪಡೆದ ವಿಧ್ಯಾರ್ಥಿಗಳಿಗೆ ತಮ್ಮ ಉಜ್ವಲ ಭವಿಷ್ಯಕ್ಕಾಗಿ ಅನೇಕ ದಾರಿಗಳಿವೆ. ವಿದ್ಯೆ ನೀಡಿದ ಶಿಕ್ಷಕರನ್ನು ಹಾಗೂ ಹೆತ್ತ ತಂದೆ ತಾಯಿಯನ್ನು ಯಾವತ್ತು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ವಿಧ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮಾನವಿಯ ಮೌಲ್ಯಗಳನ್ನು ಮರೆಯಬಾರದು. ಇಂದಿನ ಡಿಜಿಟಲ್ ಯುಗದಲ್ಲಿ ಕೌಶಲ್ಯಗಳನ್ನು ಪಡೆದು ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕು. ಈಗಾಗಲೇ ಕೃತಕ ಬುದ್ಧಿಮಾನ್ ತಂತ್ರಜ್ಞಾನ ಆವರಿಸಕೊಳ್ಳುತ್ತಿದ್ದು ಇದಕ್ಕೆ ಅನುಗುಣವಾಗಿ ವಿವಿಧ ಕೌಶಲ್ಯಗಳನ್ನು ಪಡೆದುಕೊಂಡು ಭಾರತವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ವಿಶ್ವ ಗುರುವನ್ನಾಗಿಸಲು ಪಣತೊಡುವಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರೇ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಮಾತನಾಡಿ ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಹೋರಾಡಿದ ಕಿತ್ತೂರಿನ ಧೀರ ರಾಣಿಯ ಹೆಸರನ್ನು ಹೊತ್ತ ವಿಶ್ವವಿದ್ಯಾಲಯ ಇದಾಗಿದೆ. ರಾಣಿ ಚನ್ನಮ್ಮ ಎಂದರೆ ಅದಮ್ಯ ರಾಷ್ಟ್ರೇ್ರಮ, ಸ್ವಾಭಿಮಾನ ಹಾಗೂ ಸ್ತ್ರೀ ಶಕ್ತಿಯ ಸಂಕೇತವಾಗಿದೆ ಎಂದು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕಟ್ಟಡದ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ನೂತನ ಕಟ್ಟಡಕ್ಕೆ ರಸ್ತೆ ಮಾರ್ಗ ಕಲ್ಪಿಸಲು ಈಗಾಗಲೇ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗಿದೆ. ಈಗಾಗಲೇ 9 ಕೋಟಿ ಬಿಡುಗಡೆ ಮಾಡಿ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ ಎಂದರು.
ಉನ್ನತ ಶಿಕ್ಷಣವು ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ವೈಜ್ಞಾನಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜಗತ್ತಿಗೆ ನಿಮ್ಮ ಸೃಜನಶೀಲತೆ, ನಾವೀನ್ಯತೆ ಮತ್ತು ಉತ್ಸಾಹದ ಅವಶ್ಯಕತೆ ಇದೆ. ವಿಶ್ವವಿದ್ಯಾಲಯಗಳು ವಿಷಯಜ್ಞಾನ ಕಾರ್ಯಗಳಿಗೆ ಅಳವಡಣಾಶಕ್ತಿ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪೋಷಿಸುವ ಕೇಂದ್ರಗಳಾಗಬೇಕೆಂದು ಆಶಯ ವ್ಯಕ್ತ ಪಡಿಸಿದರು.
ಕರ್ನಾಟಕವು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇಡೀ ಜಗತ್ತು ಜಾಗತೀಕರಣಗೊಳ್ಳುತ್ತಿದೆ. ಆರ್ಟಿಫಿಷಿಯಲ್ ಇಂಟಲಿಜೆಂಟ್ ಈಗಾಗಲೇ ಮುಂದುವರೆದ ದೇಶಗಳನ್ನು ಅವರಿಸಿದೆ. ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪಯಣ ಮುಂದುವರೆಸಬೇಕು. ಪದವಿ ಬಳಿಕ ಕೌಶಲ್ಯಾಧಾರಿತ ವಿಷಯಗಳ ಕುರಿತು ಹೆಚ್ಚಿನ ಒತ್ತು ನೀಡಲು ಸಚಿವರಾದ ಎಂ.ಸಿ.ಸುಧಾಕರ ಅವರು ತಿಳಿಸಿದರು.
ಘಟಿಕೋತ್ಸವದ ಭಾಷಣ ಮಾಡಿದ ಪದ್ಮಶ್ರೀ ಪುರಸ್ಕೃತರು, ಮುಂಬಯಿನ್ ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊ. ಜಿ.ಎನ್ ದೇವಿ ಅವರು ಮಾತನಾಡಿ ಪ್ರಸ್ತುತ ಶತಮಾನವನ್ನು ಸಾಮಾನ್ಯವಾಗಿ 'ಜ್ಞಾನದ ಶತಮಾನ' ಎಂದು ವರ್ಣಿಸಲಾಗಿದೆ. ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿರುವುದು ನಿಮ್ಮ ಉದ್ಯೋಗಪರ್ವದ ಆರಂಭವನ್ನು ಸಹ ಸೂಚಿಸುತ್ತದೆ ಎಂದರು.
ಪ್ರಸ್ತುತ ಪ್ರಪಂಚದ ಜನಸಂಖ್ಯೆಯು ಸುಮಾರು 820 ಕೋಟಿಯಾಗಿದ್ದರೆ ಭಾರತದ ಈಗಿನ ಜನಸಂಖ್ಯೆ ಸುಮಾರು 145 ಕೋಟಿ ಎಂದು ಅಂದಾಜಿಸಲಾಗಿದೆ. ವಿಶ್ವದ ಯುವ ಜನಸಂಖ್ಯೆ 120 ಕೋಟಿಯಾದರೆ ಭಾರತದ ಯುವ ಜನಸಂಖ್ಯೆಯು 25 ಕೋಟಿಗಿಂತ ಹೆಚ್ಚಾಗಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಶಾಲೆಗಳಿಗೆ ದಾಖಲಾದ ಮಕ್ಕಳಲ್ಲಿ ಕೇವಲ ಪ್ರತಿಶತ 28 ರಷ್ಟು ಮಕ್ಕಳು ಮಾತ್ರ ಕಾಲೇಜು ಹಂತವನ್ನು ತಲುಪುತ್ತಿದ್ದಾರೆ. ಸದ್ಯ ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ದೇಶವಾಗಿದೆಯಲ್ಲದೆ ಅದು ತನ್ನ ರಾಷ್ಟ್ರೀಯ ಜನಸಂಖ್ಯೆಯಲ್ಲೂ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದೆ. ಮುಂಬರುವ ದಶಕದಲ್ಲಿ ಭಾರತದ ಯುವಜನ ಮೇಲೆ ತುಂಬಾ ಹೊಣೆಗಾರಿಕೆಯಿದೆ.
ಪ್ರಾಧ್ಯಾಪಕರು ತಮ್ಮ ಸಮಯವನ್ನು ಓದು ಮತ್ತು ಸಂಶೋಧನೆಗೆ ಮೀಸಲಿಡಲು, ಮಾನವನ ಜ್ಞಾನ ಭಂಡಾರವನ್ನು ಹೆಚ್ಚಿಸಲು ಉತ್ಸುಕರಾಗಬೇಕು. ನಿಮ್ಮ ವಿಚಾರ, ಆವಿಷ್ಕಾರ, ಸಂಶೋಧನೆ ಮತ್ತು ಕೋಟು ಹಾಗೂ ಕೇರಿಗಳ, ಶೈಕ್ಷಣಿಕ ನಂದನ ಹಾಗೂ ಇವುಗಳ ನಡುವಿನ ಬೃಹತ್ ಗೋಡೆಗಳನ್ನು ಒಡೆಯಲು ನೀವು ಅಭಿವೃದ್ಧಿಪಡಿಸುವ ಹೊಸ ದಾರಿಗಳಿಗಳನ್ನು ಕಂಡುಕೊಳ್ಳಬೇಕು.
ಜ್ಞಾನ ನವೀಕರಣ ಪ್ರಕ್ರಿಯೆಯನ್ನು ನಿರಂತರವಾಗಿಟ್ಟುಕೊಳ್ಳುವದರ ಮೂಲಕ ಹೊಸ ವಿಧಾನಗಳು, ಹೊಸ ತಂತ್ರಗಳು, ಹೊಸ ಸಂಗತಿಗಳು ಮತ್ತು ಹೊಸ ಆಲೋಚನೆಗಳನ್ನು ನಿರಂತರವಾಗಿ ಗ್ರಹಿಸುವಂತಿರಬೇಕು. ಸ್ವತಂತ್ರ ಮತ್ತು ಹೆಮ್ಮೆಯ ರಾಷ್ಟ್ರದ ನಾಗರಿಕರಾಗಿ ತಮ್ಮ ಚಿಂತನೆಗಳು, ವಿಚಾರಗಳು ಮತ್ತು ಕ್ರಿಯೆಗಳು ನಿಮ್ಮ ಕುಟುಂಬ ಮತ್ತು ನೆರೆಹೊರೆಯವರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಕಾರಣವಾಗಲಿ, ಅವು ಸಂವಿಧಾನದ ಪಥ ಮತ್ತು ಆಶಯಗಳಿಗೆ ಅನುಗುಣವಾಗಿರಲಿ, ನಿಮ್ಮ ಮಾದರಿಯಿಂದಾಗಿ ಸಮಾಜವು ಧರ್ಮ, ಭಾಷೆ, ಲಿಂಗ, ವೈವಿಧ್ಯವನ್ನು ಗೌರವಿಸುವಂತಾಗಿಸಿ ಸಮಾಜವು ನಿಮಗೇನನ್ನು ನೀಡಬೇಕೆಂದು ನೀವು ನೀರೀಕ್ಷಿಸುತ್ತೀರೋ ಅದನ್ನೇ ನೀವು ಸಮಾಜಕ್ಕೆ ನೀಡಯವಂತಾಗಬೇಕು ಎಂದು ಪ್ರೋ.ಜಿ.ಎನ್.ದೇವಿ ಅವರು ತಿಳಿಸಿದರು.
ಗೌರವ ಡಾಕ್ಟರೇಟ್ ಪ್ರಶಸ್ತಿ:
ಘಟಿಕೋತ್ಸವದ ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಗಾಗಿ ಶ್ರೀ. ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠ, ನಿಡಸೋಶಿಯ ಪೀಠಾದಿಪತಿಗಳಾದ ಶ್ರೀಮನ್ ನಿರಂಜನ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಜಿ ಅವರಿಗೆ ಗೌರವ ಡಾಕ್ಟರೇಟ ಪದವಿಯನ್ನು, ಸಂವಿಧಾನ ಜಾಗೃತಿಯಲ್ಲಿ ಕಾರ್ಯತತ್ಪರಾದ ಮುಖ್ಯ ನ್ಯಾಮೂರ್ತಿ ಎಚ್.ಎನ್.ನಾಗಮೋಹನದಾಸ ಅವರಿಗೆ ಡಾಕ್ಟರ ಆಫ್ ಲಾ ಗೌರವ ಹಾಗೂ ಶಿಕ್ಷಣ, ಸಹಕಾರ ಮತ್ತು ಸಾಮಾಜಿಕ ಸೇವೆಗಾಗಿ ವಿಯಪುರದ ಸೀಕ್ಯಾಬ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶಮಸುದ್ಧಿನ್ ಅಬ್ದುಲ್ಲಾ ಪುಣೇಕರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಒಟ್ಟು 46013 ವಿಧ್ಯಾರ್ಥಿಗಳು ಸ್ನಾತಕ ಪದವಿಯನ್ನು ಹಾಗೂ 2866 ವಿಧ್ಯಾರ್ಥಿಗಳು ಸ್ನಾತ್ತಕೋತ್ತರ ಪದವಿಯನ್ನು ಪಡೆದುಕೊಳ್ಳಲು ಅರ್ಹರಾಗಿದ್ದು, 11 ಸುವರ್ಣ ಪದಕಗಳನ್ನು ಹಾಗೂ ಒಂದು ನಗದು ಬಹುಮಾನವನ್ನು ಸ್ನಾತಕ ಹಾಗೂ ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು 20 ಪಿ.ಹೆಚ್.ಡಿ ಪದವಿಗಳನ್ನು ಪ್ರಧಾನ ಮಾಡಲಾಯಿತು.
ಚಿನ್ನದ ಪದಕ ಪ್ರದಾನ:
ಸ್ನಾತಕ ವಾಣಿಜ್ಯ ವಿಭಾಗದಲ್ಲಿ ಗೋಕಾಕನ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಬಷೀರಾ ಎಂ. ಮಿಲಾಡಿ, ವಿಜ್ಞಾನ ವಿಭಾಗದಲ್ಲಿ ಜಮಂಡಿಯ ತುಂಗಳ ಸ್ಕೂಲ ಆಫ್ ಬೇಸಿಕ್ ್ಘ ಅಪ್ಲೈಡ್ ಸೈನ್ಸ್ ಕಾಲೇಜಿನ ಅಶ್ವಿನಿ ಎಸ್ ಕುಂಬಾರ, ಇಂಗ್ಲೀಷ ವಿಭಾಗದಲ್ಲಿ ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಯಂಕಪ್ಪ ಪುಜಾರಿ, ಕನ್ನಡ ವಿಭಾಗದಲ್ಲಿ ಬೆಳಗಾವಿಯ ಆರ್.ಪಿ.ಡಿ ಕಾಲೇಜಿನ ಮುಸ್ಕಾನ ಹೊಸಳ್ಳಿ, ಸಮಾಜ ಶಾಸ್ತ್ರ ವಿಭಾಗದಲ್ಲಿ ಗೋಕಾಕನ ಜೆ,ಎಸ್.ಎಸ್ ಕಾಲೇಜಿನ ತಿಲಕಸಿಂಗ್ ರಜಪುತ. ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿವಶಂಕರ ಕಾಂಬಳೆ, ಸಮಾಜಶಾಸ್ತ್ರ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಶ್ರೇಯಸ್ಸ ಅಂಗಡಿ, ಎಮ್.ಬಿ.ಏ ವಿಭಾಗದಲ್ಲಿ ಹೀನಾಕೌಸರ ತುಬಾಕಿ, ಗಣಿತಶಾಸ್ತ್ರ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಶ್ರೀದೇವಿ ಅರಕೇರಿ, ವಾಣಿಜ್ಯ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಂತೋಷ ತಳವಾರ ಅವರು ಸ್ವರ್ಣ ಪದಕಗಗಳನ್ನು ವಿತರಿಸಲಾಯಿತು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ ತ್ಯಾಗರಾಜ್, ಕುಲಸಚಿವ ಸಂತೋಷ್ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ್ ಕದಮ್, ಹಣಕಾಸು ಅಧಿಕಾರಿ ಎಂ.ಎ ಸಪ್ನ, ಭೋದಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.