ಶ್ರೀ ಮಾರುತಿಗೆ ಹರಕೆ ಹೊತ್ತು ದೇಗುಲದ ಮೇಲಿಂದ ಮಕ್ಕಳನ್ನು ತೂರಿದ ಭಕ್ತರು

Devotees throw children from the temple roof as a vow to Sri Maruti

ಶ್ರೀ ಮಾರುತಿಗೆ ಹರಕೆ ಹೊತ್ತು ದೇಗುಲದ ಮೇಲಿಂದ ಮಕ್ಕಳನ್ನು ತೂರಿದ ಭಕ್ತರು 

ಹಾರೂಗೇರಿ 12: ಪಟ್ಟಣದ ಗ್ರಾಮ ದೇವರು ಮಾರುತಿ ದೇವರ ಜಯಂತಿ ಉತ್ಸವದ ನಿಮಿತ್ತ ಶನಿವಾರ ಸಂಜೆ ಭಕ್ತರು ಹರಕೆ ಹೊತ್ತು ಮಾರುತಿ ದೇವಸ್ಥಾನದ ಮೇಲಿಂದ ಮಕ್ಕಳನ್ನು ತೂರಲಾಯಿತು. 

  ಮಾರುತಿ ದೇವರ ಜಯಂತಿಯಂದು ಸುಮಾರು 20 ಅಡಿ ಎತ್ತರದಿಂದ 6 ತಿಂಗಳಿಂದ 4 ವರ್ಷದವರೆಗಿನ ಮಕ್ಕಳನ್ನು ದೇಗುಲದ ಮೇಲಿಂದ ಹಾರಿಸುವ ಸಂಪ್ರದಾಯ ಹಾರೂಗೇರಿಯಲ್ಲಿ ಇಂದಿಗೂ ಪ್ರಚಲಿತದಲ್ಲಿದೆ. 

  ಅನೇಕ ಹೆಣ್ಣು ಮಕ್ಕಳು ತಮ್ಮ ಬಂಜೆತನ ನಿವಾರಣೆಯಾಗಲೆಂದು ಬೇಡಿಕೊಂಡು, ಮಕ್ಕಳು ಹುಟ್ಟಿದ ನಂತರ ಹನುಮ ಜಯಂತಿಯಂದು ತಮ್ಮ ಹರಕೆ ತೀರಿಸುತ್ತಾರೆ. ಮಕ್ಕಳು ರಾತ್ರಿ ಹೊತ್ತು ಅಂಜದಿರಲು, ಮಕ್ಕಳಿಗೆ ದೆವ್ವದ ಕಾಟ ತಪ್ಪಿಸಲು, ಮಾಟಮಂತ್ರಗಳಿಂದ ಮುಕ್ತಿ ಹೊಂದಲು, ಮಕ್ಕಳಾಗಲೆಂದು, ಜನಿಸುವ ಮಗು ಹೆಣ್ಣು ಅಥವಾ ಗಂಡಾಗಲೆಂದು, ಮಕ್ಕಳು ಹುಟ್ಟಿದ ಕೂಡಲೇ ಸಾಯುತ್ತಿರುತ್ತವೆ ಅದಕ್ಕಾಗಿ ಮಕ್ಕಳು ಸಾಯದಿರಲೆಂದು, ಮಕ್ಕಳು ಶಕ್ತಿವಂತರಾಗಿ ಹಾಗೂ ಆರೋಗ್ಯವಾಗಿ ಬೆಳೆಯಲೆಂದು ಮಾರುತಿ ದೇವರಲ್ಲಿ ಹರಕೆ ಹೊರುತ್ತಾರೆ. ಅದರಂತೆ ಹನುಮಾನ ಜಯಂತಿ ಉತ್ಸವದಂದು ದೇವರ ಸನ್ನಿಧಾನದಲ್ಲಿ ಹಾರಿಸುವುದು ರೂಢಿಯಲ್ಲಿದೆ. 

  ಹೀಗೆ ಮಕ್ಕಳನ್ನು ದೇವರ ಸನ್ನಿಧಾನದಲ್ಲಿ ಹಾರಿಸುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ಕೇಡುಂಟಾಗುವುದಿಲ್ಲ ಎಂಬ ಬಲವಾದ ನಂಬಿಕೆಯಿದೆ. ಸುಮಾರು 47 ವರ್ಷಗಳಿಂದ ಜಾತಿ, ಮತ, ಧರ್ಮದ ಬೇಧ ಭಾವವಿಲ್ಲದೇ ಮುಸ್ಲಿಂ ಬಾಂಧವರೂ ಕೂಡ ಹರಕೆ ತೀರಿಸುತ್ತಾ ಬಂದಿರುವುದು ವಿಶೇಷ. ಬೆಳಗಾವಿ ಸೇರಿದಂತೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಹರಕೆ ತೀರಿಸುತ್ತಾರೆ. 

  ಸಂಜೆ ಮಾರುತಿ ದೇವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪಲ್ಲಕ್ಕಿಯು ಕೊಂಡ ಪೂಜೆ ಸಲ್ಲಿಸಿ ನಂತರ ಶಂಕರಭಾವಿಯಲ್ಲಿ ಸ್ನಾನ ಮಾಡಿಸಿ ಮಾರುತಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಮಕ್ಕಳನ್ನು ದೇಗುಲದ ಮೇಲಿನಿಂದ ಹಾರಿಸಲಾಯಿತು. ಸುಮಾರು 50ಕ್ಕಿತ ಹೆಚ್ಚು ಮಕ್ಕಳನ್ನು ದೇಗುಲದ ಮೇಲಿನಿಂದ ಹಾರಿಸಿ ಹೆತ್ತವರು ಹರಕೆ ತೀರಿಸಿದರು.