ಇಂಡಿಯನ್ ಪ್ರೀಮಿಯರ್ ಲೀಗ್ ನ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರಿತುರಾಜ್ ಗಾಯಕ್ವಾಡ್ ಮೊಣಕೈ ಮುರಿತದಿಂದಾಗಿ ಸಂಪೂರ್ಣ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು ಮುಂದಿನ ಚೆನ್ನೈ ಪಂದ್ಯಗಳಿಗೆ ಎಂಎಸ್ ಧೋನಿ ಮುಂದಾಳತ್ವ ವಹಿಸಲಿದ್ದಾರೆ ಎಂದು ಚೆನ್ನೈ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ತಂಡದ ತವರು ಪಂದ್ಯದ ಮುನ್ನಾದಿನ ಚೆನ್ನೈ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಇದನ್ನು ದೃಢಪಡಿಸಿದರು.
ಮಾರ್ಚ್ 30ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತುಷಾರ್ ದೇಶಪಾಂಡೆ ಅವರನ್ನು ಎದುರಿಸುವಾಗ 28 ವರ್ಷದ ಗಾಯಕ್ವಾಡ್ ಮೊಣಕೈ ಗಾಯಕ್ಕೆ ಒಳಗಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ ಅವರು ಆಡಿದ್ದರೂ, ಸ್ಕ್ಯಾನ್‌ಗಳು ಈಗ ಗಾಯವನ್ನು ದೃಢಪಡಿಸಿವೆ. 2025ರ ಟೂರ್ನಿಯಲ್ಲೂ ಚೆನ್ನೈ ಕಳಪೆ ಪ್ರದರ್ಶನ ನೀಡುತ್ತಿದೆ. ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋಲು ಕಂಡಿದೆ.