ಲೋಕದರ್ಶನ ವರದಿ
ಹೂವಿನಹಡಗಲಿ 02: ಫೆ.02 ನಾಡಿನ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗ ಸ್ವಾಮಿಯ ಜಾತ್ರೆಗೆ ಶನಿವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.11ರಂದು ನಡೆಯುವ ಕಾರ್ಣಿಕೋತ್ಸವಕ್ಕೆ ಬರುವ ಹೊರ ರಾಜ್ಯ ಮತ್ತು ನಾಡಿನ ನಾನಾ ಜಿಲ್ಲೆಗಳಿಂದ ಬರುವ ಭಕ್ತಾಧಿಗಳಿಗೆ ತಾಲೂಕು,ಜಿಲ್ಲಾಡಳಿತ ಮೂಲಭೂತ ಸೌಲಭ್ಯ ಕಲ್ಪಿಸಲು ಸಿದ್ದತೆ ಮಾಡಿಕೊಂಡಿದೆ.
ರಥಸಪ್ತಮಿಯಂದು ದೇವಸ್ಥಾನ ಧರ್ಮಕರ್ತರಾದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಅವರು ಮೈಲಾರಲಿಂಗ ಸ್ವಾಮಿ, ಕಾರ್ಣಿಕ ಬಿಲ್ಲಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಬಾಬ್ದಾರರು, ಕಂಚಿವೀರರು, ಹಾಗೂ ಭಕ್ತಾಧಿಗಳು ಸಾಂಪ್ರದಾಯಿಕವಾಗಿ ಹಾಲು ಉಕ್ಕಿಸುವ ಮೂಲಕ ಜಾತ್ರೆ ಚಾಲನೆ ಪಡೆದುಕೊಂಡಿತು. ರಾಕ್ಷಸರಾದ ಮಣಿಕಾಸುರ ಮತ್ತು ಮಲ್ಲಾಸುರನ ಮರ್ದನಕ್ಕಾಗಿ ಮೈಲಾರಲಿಂಗಸ್ವಾಮಿ ಯುದ್ದಕ್ಕೆ ಹೋಗುವ ಕುರುವಿಗಾಗಿ ಸ್ವಾಮಿಯ ಪಲ್ಲಕ್ಕಿ ಉತ್ಸವದೊಂದಿಗೆ ಗುಪ್ತ ಮೌನ ಸವಾರಿ ಡೆಂಕನ ಮರಡಿಗೆ ಸಾಗಿತು. ನಂತರ ಮೈಲಾರಲಿಂಗಸ್ವಾಮಿಯ ಆರಾಧಕರಾದ ಗೊರವಪ್ಪರು ಭಕ್ತರು ತಂದಿದ್ದ ಕಡುಬುಗಳನ್ನು ಪರಸ್ಪರ ಹೊಡೆದುಕೊಳ್ಳುವ ಮೂಲಕ ರಾಕ್ಷಸರನ್ನು ಸಂಹರಿಸಿದ ಪೌರಾಣಿಕ ಹಿನ್ನೆಲೆಯ ಕಡುಬಿನ ಕಾಳಗ ನಡೆಯಿತು.
ಶ್ರೀ ಸ್ವಾಮಿಯ ಮೌನ ಸವಾರಿ ಡೆಂಕನ ಮರಡಿಗೆ ಸಾಗಿರುವುದರಿಂದ 11 ದಿನಗಳವರೆಗೆ ದೇವಸ್ಥಾನದಲ್ಲಿ ಜಾಗಟೆ, ಘಂಟಾನಾದ ಮೊಳಗುವುದಿಲ್ಲ, ಮಂಗಳಾರತಿ ಬೆಳಗುವಂತ್ಲಿಲ. ದೇವಸ್ಥಾನ ಅರ್ಚಕರು ದಿನಕ್ಕೆರಡು ಬಾರಿಯಂತೆ ಸ್ವಾಮಿಯನ್ನು ಪ್ರತಿಷ್ಠಾಪಿಸಿರುವ ಡೆಂಕನಮರಡಿಗೆ ತೆರಳಿ ಪೂಜಾ ನೆರವೇರಿಸುತ್ತಾರೆ.
ಹರಕೆ ಹೊತ್ತ ಭಕ್ತರು 11ದಿನಗಳವರೆಗೆ ಡೆಂಕನ ಮರಡಿ ಕಾಯುವ ಸೇವೆಯಲ್ಲಿ ತೊಡಗಿರುತ್ತಾರೆ. ಗ್ರಾಮ ಮತ್ತು ಸುತ್ತಮುತ್ತಲಿನವರು ಹರಕೆ ಹೊತ್ತ ಭಕ್ತರಿಗೆ ಅಂಬಲಿ, ಮಜ್ಜಿಗೆ, ಪಾನಕ ನೀಡಿ ತಮ್ಮ ಸೇವೆ ಸಲ್ಲಿಸುತ್ತಾರೆ. ಇದೇ ತಿಂಗಳು 12ರ ವರೆಗೆ ಮೈಲಾರ ಸುಕ್ಷೇತ್ರದಲ್ಲಿ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ನೆರವೇರಲಿವೆ.