ಬೆಂಗಳೂರು 06: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ನಿಕಿತಾ ಸಿಂಘಾನಿಯಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ನಿಕಿತಾ ಸಿಂಘಾನಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರು, ಅರ್ಜಿದಾರರ ವಿರುದ್ಧ ದಾಖಲಿಸಿರುವ ದೂರು ಸಮರ್ಥನೀಯವಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಂಶಗಳಿವೆ ಎಂದು ಹೇಳಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿಚಾರಣಾಧೀನ ನ್ಯಾಯಾಲಯವು ಕಳೆದ ಶನಿವಾರ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆತ್ಮಹತ್ಯೆಗೆ ಪ್ರಚೋದನೆಯಡಿ ಪ್ರಕರಣ ದಾಖಲಿಸಲು ಯಾವುದೇ ಅಂಶಗಳು ಇಲ್ಲ. ಆರೋಪಿಗಳನ್ನು ಬಂಧಿಸುವುದಕ್ಕೆ ಆಧಾರಗಳನ್ನೂ ಪೊಲೀಸರು ನೀಡಿಲ್ಲ. ಹೀಗಾಗಿ, ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.
ಎಫ್‌ಐಆರ್ ಓದಿದರೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಎಲ್ಲ ಅಂಶಗಳು ಸ್ಪಷ್ಟವಾಗಿವೆ. ನನ್ನ ಪ್ರಕಾರ ಎಲ್ಲಾ ವಿವರಗಳನ್ನು ನೀಡಲಾಗಿದೆ. ಎಫ್‌ಐಆರ್‌ನಲ್ಲಿ ಇದಕ್ಕಿಂತ ಇನ್ನೂ ಹೆಚ್ಚಿನದನ್ನು ಏನು ಕೊಡಲಾಗುತ್ತದೆ? ಅಪರಾಧದ ಪ್ರಾಥಮಿಕ ಅಂಶಗಳನ್ನು ದೂರಿನಲ್ಲಿ ಮಾಡಲಾಗಿದೆ. ಆದರೂ ತನಿಖೆ ಮಾಡಲು ನೀವು ಏಕೆ ಬಯಸುವುದಿಲ್ಲ?ಎಂದು ಪೀಠ ಪ್ರಶ್ನಿಸಿತು.
ಟೆಕ್ಕಿ ಅತುಲ್ ಸುಭಾಷ್ ಅವರು, ವಿಚ್ಛೇದನ ಇತ್ಯರ್ಥಕ್ಕಾಗಿ ಪತ್ನಿ ನಿಕಿತಾ ಸಿಂಘಾನಿಯಾ ಅವರು 3 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.