ಬೆಂಗಳೂರು 06: ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ನಟ ದರ್ಶನ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ನಟ ದರ್ಶನ್ ಸೇರಿದಂತೆ 7 ಮಂದಿಯ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್, ಜಗದೀಶ್ ಅವರ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲಾಗಿದೆ.
ಸುಪ್ರೀಂಕೋರ್ಟ್ ವಕೀಲ ಅನಿಲ್ ಸಿ ನಿಶಾನಿ ಅವರು ಪೊಲೀಸರ ಪರವಾಗಿ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ.
ಇತ್ತ ದರ್ಶನ್ ಅವರಿಗೆ ಮೈಸೂರಿಗೆ ತೆರಳಲು ಕೋರ್ಟ್ ನೀಡಿದ್ದ ಎರಡು ವಾರಗಳ ಗಡುವು ಭಾನುವಾರಕ್ಕೆ ಅಂತ್ಯಗೊಂಡಿದೆ. ಬೆಂಗಳೂರಿಗೆ ಆಗಮಿಸುವ ನಟ ದರ್ಶನ್ ತಮ್ಮ ಅನುಮತಿ ವಿಸ್ತರಣೆ ಮಾಡುವಂತೆ ಮತ್ತೆ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಯಿದೆ. ಬೆನ್ನು ನೋವಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ದರ್ಶನ್ ಅವರು ಸರ್ಜರಿಗೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ.