ಬೆಂಗಳೂರು ೨೨: ಚುನಾವಣಾ ಪ್ರಚಾರದಿಂದ ಎಚ್​ಡಿಕೆ ಸುಸ್ತು; ಪಂಚಕರ್ಮ ಚಿಕಿತ್ಸೆಯ ಮೊರೆ ಹೋದ ಸಿಎಂ

ಬೆಂಗಳೂರು ೨೨: ಕಳೆದ ಒಂದು ತಿಂಗಳಿಂದ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈಗ ಅವರು ರಿಲ್ಯಾಕ್ಸ್​ ಮೂಡ್​ಗೆ ತೆರಳಿದ್ದಾರೆ. ಶಿವಮೊಗ್ಗದ ಚುನಾವಣಾ ಪ್ರಚಾರ ಮುಗಿಸಿ ಎಚ್​ಡಿಕೆ ಉಡುಪಿಗೆ ತೆರಳಿದ್ದು, ಪಂಚಕರ್ಮ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಮತದಾನದ ವೇಳೆ ಮಂಡ್ಯ, ತುಮಕೂರು, ಹಾಸನ, ಮೈಸೂರು ಮೊದಲಾದ ಕಡೆ ಕುಮಾರಸ್ವಾಮಿ ಪ್ರಚಾರ ನಡೆಸಿದ್ದರು. ಮಂಡ್ಯದಿಂದ ಮಗ ನಿಖಿಲ್​ ಕುಮಾರಸ್ವಾಮಿ ಕಣಕ್ಕೆ ಇಳಿದಿರುವುದು ಸಿಎಂಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಭರ್ಜರಿ ರೋಡ್​ ಶೋ ನಡೆಸಿದ್ದರು.

ಮಂಡ್ಯದಲ್ಲಿ ಕೊನೆಯ ದಿನದ ಪ್ರಚಾರದ ವೇಳೆ ಕುಮಾರಸ್ವಾಮಿ ಮನೆಮನೆಗೆ ತೆರಳಿ ಪ್ರಚಾರ ಮಾಡಿದ್ದರು. ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಗೂ ಕುಮಾರಸ್ವಾಮಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಭಾನುವಾರ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಹಾಗಾಗಿ, ಶಿವಮೊಗ್ಗದಲ್ಲಿ ಪ್ರಚಾರ ಮುಗಿಸಿ ಕುಮಾರಸ್ವಾಮಿ ಉಡುಪಿಯ ಕಾಪು ತಾಲೂಕಿನ ಮೂಳೂರಲ್ಲಿರುವ ಹೆಲ್ತ್ ರೆಸಾರ್ಟ್​​ಗೆ ಕುಮಾರಸ್ವಾಮಿ ತೆರಳಿದ್ದಾರೆ.  ಪಂಚಕರ್ಮ ಚಿಕಿತ್ಸೆ, ಧ್ಯಾನದಲ್ಲಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಯೋಗ ಹಾಗೂ ಆಯಿಲ್ ಥೆರಪಿ ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ಅವರು ಇಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.