ದೇವದಾಸಿ ಮಹಿಳೆಯರಿಗೆ ಕಾನೂನು ಅರಿವು ಆರೋಗ್ಯ ಕಾರ್ಯಕ್ರಮ
ಹೂವಿನ ಹಡಗಲಿ: ದೇವದಾಸಿ ಮಹಿಳೆಯರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಬೇಕು ಎಂದು ರಾಜ್ಯ ಮಾಜಿ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಎಚ್ ದಂಡೆಮ್ಮ ಹೇಳಿದರು.ತಾಲೂಕಿನ ಸೋಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮಾಜಿ ದೇವದಾಸಿ ಮಹಿಳೆಯರಿಗೆ ಕಾನೂನು ಅರಿವು ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ನಿಮ್ಮ ಹಾಗೂ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ನಿಮ್ಮೆಲ್ಲರ ಪಾತ್ರ ಮಹತ್ವದ್ದು ಎಂದು ತಿಳಿಸಿದರು.ವಕೀಲರಾದ ಸುಜಾತಾ ಮಹಿಳೆಯರು ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಕಾನೂನು ಅರಿವಿನ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.ಮಹಿಳೆಯರ ಅಭಿವೃದ್ಧಿ ಬಗ್ಗೆ ಇಲಾಖೆಯ ವತಿಯಿಂದ ಅನೇಕ ಕಾನೂನುಗಳು ಇವೆ.ಸಲಹೆ ಸಹಕಾರ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.ಯೋಜನಾ ಅನುಷ್ಠಾನ ಅಧಿಕಾರಿ ಎಂ ಜಿ ಹಾಲನಗೌಡ, ತಾಲೂಕು ಎ ಐ ಟಿ ಯು ಸಿ ಮುಖಂಡ ಹಲಗಿ ಸುರೇಶ, ಸೋಗಿ ದಂಡೆಮ್ಮ, ಚೆನ್ನವೀರಮ್ಮ, ಗಂಗಮ್ಮ ಇತರರು ಉಪಸ್ಥಿತರಿದ್ದರು.ಸುಮಾರು 30 ಕ್ಕೂ ಹೆಚ್ಚು ಮಹಿಳೆಯರು ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.