ಜೀವ ಕಳೆದುಕೊಂಡ ಜಲಜೀವನ ಮಿಷನ್ : ಹಳ್ಳ ಹಿಡಿದ ಜೆಜೆಎಂ ಕಾಮಗಾರಿ : ಅಂದ ಕಳೆದುಕೊಂಡ ಗ್ರಾಮಗಳು
ಶಿರಹಟ್ಟಿ 31: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ “ಜಲ ಜೀವನ್ ಮಿಷನ್’ (ಜೆಜೆಎಂ) ಅಡಿಯಲ್ಲಿ ಅಗತ್ಯವಿರುವ ಗ್ರಾಮಗಳಿಗೆ, ಗ್ರಾಮದ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀ. ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ. ಆ ಮೂಲಕ ನೇರವಾಗಿ ಮನೆಗಳಿಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡಿ ನೀರಿನ ಅಪವ್ಯಯ ತಪ್ಪಿಸುವುದೂ ಆಗಿದೆ.
ತಾಲೂಕಿನ ಬಹುತೇಕ ಗ್ರಾಮಳಲ್ಲಿನ ಈ ಜೆಜೆಎಂ ಕಾಮಗಾರಿ ಬಹುತೇಕ ಹಳ್ಳ ಹಿಡಿದಿದ್ದು, ಕಡಕೋಳ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ “ಜಲ ಜೀವನ್ ಮಿಷನ್’ ಕಾಮಗಾರಿ ನಡೆಯುತ್ತಿದೆ. ಗ್ರಾಮದಲ್ಲಿ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದರೂ ಯೋಜನೆ ಮಾತ್ರ ಹಳ್ಳ ಹಿಡಿಯಲು ಕಾರಣವಾಗಿದೆ. ಗ್ರಾಮದ ಎಲ್ಲ ವಾರ್ಡ್‌ಗಳಲ್ಲಿನ ಮನೆಗಳಿಗೆ ಬಹುತೇಕ ಶುದ್ಧ ಕುಡಿಯುವ ನೀರಿನ ಸರಬರಾಜು ಪೈಪಲೈನ್ ಅಳವಡಿಸಿದ ಗುತ್ತಿಗೆದಾರರು ಈ ನಲ್ಲ್ಲಿಯ ಮೂಲಕ ಶುದ್ಧ ನೀರು ಹರಿಸದೇ ಕಣ್ಮರೆಯಾಗಿದ್ದು ವಿಪರ್ಯಾಸದ ಸಂಗತಿಯಾಗಿದೆ. ಈ ಜೆಜೆಎಂ ಕಾಮಗಾರಿ ನೆಪದಿಂದ ಸುಸಜ್ಜಿತವಾದ ಉತ್ತಮ ಸಿಸಿ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡಿದಂತಾಗಿದೆ. ಈ ರೀತಿ ಜೆಜೆಎಂ ಕಾಮಗಾರಿ ನಿರ್ಮಾಣಕ್ಕಾಗಿ ಸಿಸಿ ರಸ್ತೆಗಳನ್ನು ಹಾಳು ಮಾಡುತ್ತಿರುವುದರಿಂದ ಗ್ರಾಮಸ್ಥರು ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ.
ವೃದ್ಧರು, ಮಕ್ಕಳು, ಮಹಿಳೆಯರು, ಬೈಕ್ ಸವಾರರು ರಸ್ತೆಗಳಲ್ಲಿ ಓಡಾಡದಂತಾಗಿದೆ. ಈ ಯೋಜನೆ ತಮ್ಮೂರಿಗೆ ಅಗತ್ಯವಾಗಿದ್ದರೂ ಕೂಡ ಕಾಮಗಾರಿ ನೆಪದಲ್ಲಿ ಇದ್ದ ಬಿದ್ದ ಕಾಮಗಾರಿಗಳನ್ನು ಹಾಳು ಮಾಡಿದ್ದಲ್ಲದೇ ಸುಂದರವಾಗಿದ್ದ ನಮ್ಮೂರಿನ ಸೌಂದರ್ಯವನ್ನು ಹಾಳುಮಾಡಿದ್ದಾರೆ ಜೊತೆಗೆ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರು ಕಣ್ಮರೆಯಾಗಿದ್ದಾರೆ ಇವರನ್ನು ಹುಡುಕಿ ತರುವವರಾ್ಯರು ಎಂದು ಗ್ರಾಮಸ್ಥರು ನಿತ್ಯವೂ ಅಸಮಾದಾನದ ಮಾತುಗಳನ್ನಾಡುತ್ತಿದ್ದಾರೆ.
ಬಾಕ್ಷಿನಲ್ಲಿ
ಶರಣಪ್ಪ ಹರ್ಲಾಪೂರ, ಗ್ರಾಮದ ಯುವ ಮುಖಂಡ
ಕಳೆದ 03 ವರ್ಷಗಳ ಹಿಂದೆ ನಮ್ಮ ಕಡಕೋಳ ಗ್ರಾಮವು ಸುಂದರವಾಗಿತ್ತು, ವಿವಿಧ ಅನುದಾನಗಳಿಂದ ನಮ್ಮೂರಿನ ಎಲ್ಲ ರಸ್ತೆಗಳನ್ನು ಗುಣಮಟ್ಟದಿಂದ ಮಾಡಲಾಗಿತ್ತು, ಆದರೆ ಜೆಜೆಎಂ ಕಾಮಗಾರಿಯಿಂದ ನಮ್ಮೂರಿನ ಎಲ್ಲ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ತಗ್ಗು ಗುಂಡಿಗಳನ್ನು ಮಾಡಿ ಊರಲ್ಲೆಲ್ಲ ನಲ್ಲಿ ಅಳವಡಿಸಿದ್ದಾರೆ. ಆದರೆ ಇತ್ತೀಚೆಗೆ ಈ ನಲ್ಲಿಗಳೂ ಕಾಣ್ತಿಲ್ಲ, ಅಪೂರ್ಣ ಕಾಮಗಾರಿ ಮಾಡಿ ಓಡಿಹೋದ ಗುತ್ತಿಗೆದಾರರೂ ಸಂಪರ್ಕಕ್ಕೆ ಸಿಗ್ತಿಲ್ಲ, ಜೊತೆಗೆ ಎಲ್ಲೆಂದರಲ್ಲಿ ಬಿದ್ದ ತಗ್ಗು ಗುಂಡಿಗಳಿಂದ ನಮ್ಮೂರಿನ ಸೌಂದರ್ಯ ಹಾಳಾಗಿದ್ದಲ್ಲದೇ ಎಲ್ಲರಿಗೂ ಸರಾಗವಾಗಿ ಓಡಾಡಲು ಆಗ್ತಿಲ್ಲ. ಈ ವಿಚಾರವಾಗಿ ಸಂಬಂಧಿಸಿದ ಇಲಾಖೆಗೆ ಸಂಪರ್ಕಿಸಿದರೆ ಅವರಿಂದಲೂ ಕೂಡ ಸಮಂಜಸವಾದ ಉತ್ತರ ಸಿಗುತ್ತಿಲ್ಲ.
ಮಲ್ಲಿಕಾರ್ಜುನ ಪಾಟೀಲ, ಎಇಇ, ಜೆಜೆಂ, ಶಿರಹಟ್ಟಿ
ನಾನು ಈಗ ತಾನೇ ಎಇಇ ಆಗಿ ಅಧಿಕಾರ ಸ್ವೀಕರಿಸಿದ್ದು, ತಾಲೂಕಿನ ಗ್ರಾಮಗಳಲ್ಲಿ ನಡೆದ ಜೆಜೆಂ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಅಪೂರ್ಣ ಕಾಮಗಾರಿ ಮಾಡಿಹೋದ ಗುತ್ತಿಗೆದಾದರರ ವಿವರ ಪಡೆದು ಅವರಿಗೆ ನೋಟೀಸ್ ಜಾರಿ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ.