ಮುದ್ದೇಬಿಹಾಳ 04: 2024-25 ನೇಸಾಲಿನ ತಾಳಿಕೋಟಿ ಹಾಗೂ ಮುದ್ದೇಬಿಹಾಳ ತಾಲೂಕಿನಲ್ಲಿ ಶೇಕಡಾ 90 ರಷ್ಟು ತೊಗರಿ ಬೆಳೆ ಸಂಪೂರ್ಣ ನಷ್ಟವನ್ನು ಅನುಭವಿಸಿದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ತೊಗರಿ ಬೆಳೆಯ ಬಗ್ಗೆ ಅವಳಿ ತಾಲೂಕಿನಲ್ಲಿ ಸಮಗ್ರ ಸರ್ವೇ ನಡೆಸಿ ಸರಕಾರಕ್ಕೆ ವಾಸ್ತವ ವರದಿ ಸಲ್ಲಿಸುವ ಮೂಲಕ ಸರಕಾರದಿಂದ ರೈತರಿಗೆ ಸೂಕ್ತ ಪರಿಹಾರ ಕೋಡಿಸುವಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಇಲ್ಲದಿದ್ದರೆ ಬರುವ ಡಿ, 9 ರಂದು ಬೆಳಗಾಂವಿಯಲ್ಲಿ ನಡೆಯಲಿರುವ ಅಧಿವೇಶದಲ್ಲಿ ತಾಲೂಕಿನ ಎಲ್ಲ ರೈತರು ಬೆಳಗಾವಿಗೆ ತೆರಳಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಸರಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ನಿಕಟಪೂರ್ವ ಶಾಸಕ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ ಎಸ್ ಪಾಟೀಲ(ನಡಹಳ್ಳಿ) ಎಚ್ಚರಿಕೆ ನೀಡಿದರು.
ರೈತರಿಗೆ ತೊಗರಿ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕಿನ ಬಿದರಕುಂದಿ ಗ್ರಾಮದಿಂದ ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದ ಮಾರ್ಗವಾಗಿ ತಾಲೂಕಾ ಕೃಷಿ ಇಲಾಖೆ ಕಚೇರಿಯವರಿಗೆ ಹಮ್ಮಿಕೊಂಡಿದ್ದ ರೈತರ ಬ್ರಹತ್ ಪ್ರತಿಭಟನಾ ರಾ್ಯಲಿ ಮೂಲಕ ತಹಶಿಲ್ದಾರ ಬಲರಾಮ ಕಟ್ಟಿಮನಿ ಹಾಗೂ ತಾಲೂಕಾ ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿಯವರ ಮೂಲಕ ಸರಕಾರಕ್ಕೆ ಮಂಗಳವಾರ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಈಗಾಗಲೇ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ತೊಗರಿ ಬೀಜಗಳನ್ನ ಖರಿದಿ ಮಾಡಿ ಬಿತ್ತನೆ ಮಾಡಿದ್ದಾರೆ ಆದರೇ ಕಳಪೆ ಗುಣಮಟ್ಟ ಬೀಜ ವಿತರಿಸಿದ್ದರಿಂದ ಈ ಬಾರಿ ತೊಗರಿ ಬೆಳೆ ಹೂ ಉದುರಿ ಕಾಳುಕಟ್ಟದೆ ಸಂಪೂರ್ಣ ನಷ್ವಾಗಿದೆ ಎಂಬುದು ರೈತರ ಆರೋಪವಾಗಿದೆ. ಈ ಹಿನ್ನೇಲೆಯಲ್ಲಿ ಸಧ್ಯ ಕಳಪೆ ಬೀಜ ಹೇಗೆ ಮಾರಾಟ ಮಾಡಲಾಗಿದೆ ಎಂಬುದನ್ನು ತನಿಖೆ ನಡೆಸಿ ಕಳಪೆ ಬೀಜ ಪೂರೈಕೆ ಮಾಡಿದ್ದಾರೆ ಎಂಬುದು ಕಂಡುಬಂದರೆ ಅಂತಹ ತಪ್ಪಿತಸ್ಥ ಕಂಪನಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಆಯಾ ಕಂಪನಿಯವರಿಂದಲೇ ರೈತರಿಗೆ ಪರಿಹಾರ ನೀಡುವಂತೆ ಮಾಡಬೇಕು.
ಗುಲಬರ್ಗದಲ್ಲಿ ಇದೇ ರೀತಿ ರೈತರು ಸಂಕಷ್ಟಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡ ಅಲ್ಲಿನ ಮಹಿಳಾ ಜಿಲ್ಲಾಧಿಕಾರಿಗಳು ಸ್ವತಃ ತಾವೇ ಖುದ್ದಾಗಿ ಜಿಲ್ಲೆಯ ಆಯಾ ಗ್ರಾಮಗಳ ರೈತರ ಜಮೀನುಗಳಿಗೆ ರೈತರೊಂದಿಗೆ ತೆರಳಿ ಬೆಳೆಗಳ ಸಮೀಕ್ಷೇ ನಡೆಸಿ ವಿಮಾ ಕಂಪನಿಯಿಂದ ಸುಮಾರು 77 ಕೋಟಿ ರೂಗಳ ಹಣವನ್ನು ರೈತರ ಖಾತೆಗೆ ಜಮಾ ಮಾಡಿಸಿದ್ದಾರೆ. ಆದರೇ ಸಧ್ಯ ತೊಗರಿ ಹಾನಿ ಸಂಭವಿಸಿದ ಬಗ್ಗೆ ನಿತ್ಯ ಮಾಧ್ಯಮದವರೂ ವರದಿ ಬಿತ್ತರಿಸುವ ಮೂಲಕ ಸರಕಾರಕ್ಕೆ ಅರಿವೂ ಮೂಡಿಸುವ ಕೆಲಸ ಮಾಡಿದರೂ ವಿಜಯಪುರ ಜಿಲ್ಲಾಧಿಕಾರಿಗಳು ಮಾತ್ರ ಒಂದು ದಿನವೂ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಿನ ರೈತರ ಜಮೀನುಗಳಿಗೆ ಬೇಟಿ ನೀಡಿ ಪರಿಶಿಲನೇ ನಡೆಸಿಲ್ಲ ಸರಕಾರಕ್ಕೆ ವರದಿ ಸಲ್ಲಿಸಿಲ್ಲ ಇದರಿಂದ ರೈತರಿಗೆ ನೋವನ್ನುಂಟು ಮಾಡಿದೆ.
ಕಾರಣ ಈ ಭಾಗದಲ್ಲಿ ತೊಗರಿ ಬೆಳೆ ಸಂಪೂರ್ಣ ಕೈಕೊಟ್ಟು ತೀವೃ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ರೈತರಿಗೆ ಸೂಕ್ತ ನ್ಯಾಯ ಒದಗಿಸಲು ತಾಲೂಕಾ ದಂಡಾಧಿಕಾರಿಗಳ ಹಾಗೂ ತಾಲೂಕಾ ಕೃಷಿ ಇಲಾಖೆ ಅಧಿಕಾರಿಗಳ ಮುಖಾಂತರ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ರೈತರಿಗೆ ಆಗುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲಿ ಅವರಿಗೆ ನ್ಯಾಯ ಕೊಡಿಸಲು ಅವರೊಂದಿಗೆ ಕೃಷಿ ಇಲಾಖೆ ಎದುರು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕಲ ಅವರ ಧ್ವನಿಯಾಗಿ ಅವರ ಪರವಾಗಿ ಸದಾ ನಿಲ್ಲುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ನಾಲತವಾಡ ಪಟ್ಟಣದ ಹಿರಿಯ ಮುಖಂಡ ಮುನ್ನಾ ಧಣಿ, ಮಲಕೇಂದ್ರಾಯಗೌಡ ಪಾಟೀಲ, ಎಂ ಎಸ್ ಪಾಟೀಲ, ಸೇರಿದಂತಗೆ ಹಲವು ಮುಖಂಡರು ಮಾತನಾಡಿದರು. ರೈತ ಮೋರ್ಚಾ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ, ಬಿಜೆಪಿ ತಾಲೂಕಾ ಮಂಡಲದ ಅಧ್ಯಕ್ಷ ಜಗಧೀಶ ಪಂಪಣ್ಣವರ, ಕೆಂಚಪ್ಪ ಬಿರಾದಾರ, ಮುತ್ತಣ್ಣ ಹುಗ್ಗಿ, ರವಿ ಜಗಲಿ, ಗುರಲಿಂಗಪ್ಪಗೌಡ ಸುಳ್ಳಳ್ಳಿ, ನಾಗಲಿಂಗಯ್ಯಾ ಮಠ, ಸಂಗಣ್ಣ ಬಿಸಲದಿನ್ನಿ, ಶ್ರೀಶೈಲ ದೊಡಮನಿ, ಮುತ್ತಣ್ಣ ಹುಂಡೆಕಾರ, ಮಲ್ಲಣ್ಣ ತಂಗಡಗಿ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಪ್ರೀತಿ ಕಂಬಾರ, ಪುನಿತ ಹಿಪ್ಪರಗಿ, ಗುರು ಅಗಸರ, ಕಾವೇರಿ ಕಂಬಾರ, ರೇಖಾ ಕೊಂಡಗೂಳಿ, ಸಂಜು ಬಾಗೇವಾಡಿ ಸೇರಿದಂತೆ ಹಲವರು ಇದ್ದರು
ಈ ವೇಳೆ ಪ್ರಗತಿಪರ ರೈತ ಮುಖಂಡ ಹೇಮರೆಡ್ಡಿ ಮೇಟಿ ಅವರು ಮಾತನಾಡಿ ಸಧ್ಯ ರಾಜ್ಯದಲ್ಲಿ ಸರಕಾರ ಇದೇಯೋ ಇಲ್ಲವೋ ಎಂಬುದು ತಿಳಿಯದಾಗಿದೆ ನಮ್ಮ ಭಾಗದಲ್ಲಿ ತೊಗರಿ ಬೆಳೆ ಹಾನಿಗೊಂಡು ರೈತರು ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಯಾವೂದೇ ಕ್ರಮ ಕೈಗೊಳ್ಳದೇ ನಿರ್ಲಕ್ಷವಹಿಸುತ್ತಿರುವುದನ್ನು ಗಮನಿಸಿದರೇ ರೈತರ ಬಗ್ಗೆ ಅಧಿಕಾರಿಗಳಿಗೆ ಗೌರವವಿಲ್ಲ ಕಾಳಜಿ ಇಲ್ಲವೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಇದು ಹೀಗೆ ಮುಂದುವರೆದರೇ ಸರಕಾರ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಂತೆ ಯಾರೋ ಹೋರಾಟ ಮಾಡುತ್ತಿದ್ದಾರೆ ಎಂದು ರೈತರು ಕೇವಲ ಬಾಗವಹಿಸಿದರೆ ಸಾಲದು ರೈತರು ಕೂಡಾ ತಮಗಾಗುವ ಅನ್ಯಾಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಸಿಡಿದೆಳುವ ಮೂಲಕ ಸರಕಾರದ ಕಣ್ಣು ತೆರೆಸುವ ಕಾರ್ಯದಲ್ಲಿ ತೊಡಗಿದಾಗ ಮಾತ್ರ ರೈತರು ನ್ಯಾಯ ಪಡೆದುಕೊಳ್ಳಲು ಸಾಧ್ಯ ಎಂದರು.
ನಿಕಟಪೂರ್ವ ಶಾಸಕ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ ಎಸ ಪಾಟೀಲ(ನಡಹಳ್ಳಿ) ಅವರ ನೇತೃತ್ವದಲ್ಲಿ ಮಂಗಳವಾರ ಕರೆ ನೀಡಿದ್ದ ರೈತರಿಗೆ ತೊಗರಿ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕಿನ ಬಿದರಕುಂದಿ ಗ್ರಾಮದಿಂದ ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದ ಮಾರ್ಗವಾಗಿ ತಾಲೂಕಾ ಕೃಷಿ ಇಲಾಖೆ ಕಚೇರಿಯವರಿಗೆ ಹಮ್ಮಿಕೊಂಡಿದ್ದ ರೈತರ ಬ್ರಹತ್ ಪ್ರತಿಭಟನಾ ರಾ್ಯಲಿಯಲ್ಲಿ ಟ್ರ್ಯಾಕ್ಟರಗಳು, ಎತ್ತಿನ ಬಂಡಿ,ನೂರಕ್ಕು ಹೆಚ್ಚು ದ್ವೀಚಕ್ರ ವಾಹನ ರಾ್ಯಲಿ ಸೇರಿದಂತೆ ಸಾವಿರಾರು ಜನ ರೈತರು ಮುಖಂಡರು ಬಾಗವಹಿಸಿ ಸರಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ಯಶಸ್ವಿಗೊಳಿಸಿದರು.