ರಾಜ್ಯ ಬಿಜೆಪಿಯಲ್ಲಿ ತಂದೆ, ಮಗನ ಕಿತ್ತೊಗೆಯಬೇಕು: ಯತ್ನಾಳ್

State BJP should remove father and son: Yatnal

ನವದೆಹಲಿ 04: ರಾಜ್ಯ ಬಿಜೆಪಿಯಲ್ಲಿ ಚಾಲ್ತಿಯಲ್ಲಿರುವ ಹೊಂದಾಣಿಕೆ ರಾಜಕಾರಣ, ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ವಂಶಾಡಳಿತ ರಾಜಕೀಯದ ಕುರಿತು ಪಕ್ಷದ ನಾಯಕತ್ವಕ್ಕೆ ವಿವರವಾಗಿ ವಿವರಿಸಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸಿ ಬಿಜೆಪಿಯಿಂದ ಶೋಕಾಸ್ ನೋಟಿಸ್ ಸಂಬಂಧ ಪ್ರತಿಕ್ರಿಯಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಕೇಂದ್ರ ಶಿಸ್ತು ಸಮಿತಿ (ಸಿಡಿಸಿ) ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರಿಗೆ ಆರು ಪುಟಗಳ ಉತ್ತರವನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಉತ್ತರಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ಆಂಧ್ರಪ್ರದೇಶಗಳು ಈಗ ಹಿಂದುತ್ವದತ್ತ ವಾಲುತ್ತಿರುವ ಕಾರಣ ನಮ್ಮ ಪಕ್ಷವು ಹೊಂದಾಣಿಕೆ ರಾಜಕಾರಣ, ಬ್ರಹ್ಮಾಂಡ ಭ್ರಷ್ಟಾಚಾರ, ವಂಶಾಡಳಿತ ರಾಜಕಾರಣದ ಕಪಿಮುಷ್ಠಿಯಿಂದ ಹೊರಬರಬೇಕು. ಅಲ್ಲದೆ ಹಿಂದುತ್ವದ ಪರ ಧ್ವನಿ ಗಟ್ಟಿಯಾಗಬೇಕು ಎಂದು ತಮ್ಮ ಪತ್ರದಲ್ಲಿ ಬರೆದಿರುವುದಾಗಿ ಹೇಳಿದರು.

ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧದ ಗಂಭೀರ ಪ್ರಕರಣಗಳು ಮತ್ತು ಹೊಂದಾಣಿಕೆ ರಾಜಕೀಯವನ್ನು ನಾನು ವಿವರಿಸಿದ್ದೇನೆ. ಯಡಿಯೂರಪ್ಪ ಕುಟುಂಬದ ಬಗ್ಗೆ ಅಸಮಾಧಾನ ಹೊಂದಿರುವ ಅನೇಕ ತಟಸ್ಥ ನಾಯಕರಿದ್ದಾರೆ. ಆದರೆ ಆಂತರಿಕ ಶಿಸ್ತಿನ ಕಾರಣದಿಂದ ಮಾಜಿ ಸಿಎಂ ವಿರುದ್ಧ ಯಾರೂ ಮಾತನಾಡುತ್ತಿಲ್ಲ ಎಂದು ಯತ್ನಾಳ್ ಹೇಳಿದರು.

ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ, ವಿಶೇಷವಾಗಿ ಬಿಎಸ್ವೈ ಪುತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನ 'ವಂಶದ ರಾಜಕೀಯ' ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಬಿಜೆಪಿ ಕೇಂದ್ರ ನಾಯಕತ್ವವು ಯಡಿಯೂರಪ್ಪ ಅವರ 'ವಂಶ ರಾಜಕೀಯ'ವನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿರುವುದಾಗಿ ಹೇಳಿದರು.