ಮುಖ್ಯಮಂತ್ರಿ ಕುರ್ಚಿಗಾಗಿ ಯಾವುದೇ ಒಪ್ಪಂದ ಆಗಿಲ್ಲ: ಡಿಕೆಶಿ

No deal for CM seat: DK Shivakumar

ಬೆಂಗಳೂರು 04: ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಅಧಿಕಾರ ಹಂಚಿಕೆ ಕುರಿತು ಚರ್ಚೆ ಆರಂಭವಾಗಿದ್ದು, ನಮ್ಮ ಮಧ್ಯೆ ಯಾವುದೇ ಒಪ್ಪಂದ ಆಗಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇದಕ್ಕು ಮುನ್ನ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ. ಸಮಯ ಬಂದಾಗ ಆ ಬಗ್ಗೆ ಮಾತನಾಡುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. 

ಈ ಬಗ್ಗೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಬಂಡಬೋಯಿನಹಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದರು.

ಡಿಕೆ ಶಿವಕುಮಾರ್ ಮತ್ತು ತನ್ನ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದ ಆಗಿಲ್ಲ, ಹೈಕಮಾಂಡ್ ಹೇಳಿದ್ದನ್ನು ಪಾಲಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಸಿಎಂ ಹೇಳಿದ ಮೇಲೆ ಮುಗಿಯಿತು. ಆ ಬಗ್ಗೆ ಎರಡು ಮಾತಿಲ್ಲ, ಚರ್ಚೆಯಿಲ್ಲ, ಅವರು ಹೇಳಿದ್ದೇ ಫೈನಲ್ ಎಂದರು.

ಇನ್ನು ಸಚಿವ ಸಂಪುಟ ಪುನಾರಚನೆ ಬಗ್ಗೆಯೂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ. ಹೈಕಮಾಂಡ್ ಸೂಚನೆ ನೀಡಬೇಕು. ಬಳಿಕ ನಾನು ನಿರ್ಧರಿಸುತ್ತೇನೆ. ಈಗ ಹೈಕಮಾಂಡ್ ಹೇಳಿಲ್ಲ, ನಾನು ತೀರ್ಮಾನವನ್ನೂ ತೆಗೆದುಕೊಂಡಿಲ್ಲ ಎಂದರು.