ವಿಜಯಪುರ: ಬರ ಪರಿಸ್ಥಿತಿ ಎದುರಿಸಲು ಯುದ್ದೋಪಾದಿಯಲ್ಲಿ ಕ್ರಮಕ್ಕೆ ಕಂದಾಯ ಸಚಿವ ದೇಶಪಾಂಡೆ ಸೂಚನೆ

ಲೋಕದರ್ಶನ ವರದಿ

ವಿಜಯಪುರ 19: ಬರ ಪರಿಸ್ಥಿತಿಯನ್ನು ಎದುರಿಸಲು ಯುದ್ದೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಕಂದಾಯ ಖಾತೆ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಹೇಳಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ಜನ-ಜಾನುವಾರುಗಳಿಗೆ ಯಾವುದೇ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಅದರಂತೆ ದನಕರುಗಳು, ಕುರಿ, ಮೇಕೆಗಳಿಗೂ ಕೂಡ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ ಅವರು, ಒಟ್ಟಾರೆ ಬರ ಪರಿಸ್ಥಿತಿಯನ್ನು ಎದುರಿಸಲು ಯುದ್ದೋಪಾದಿಯಲ್ಲಿ ಕಾರ್ಯಪ್ರವೃತ್ತರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು. 

ಜಿಲ್ಲೆಯಿಂದ ಜನರು ಗುಳೆ ಹೋಗದಂತೆ ನೋಡಿಕೊಳ್ಳಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚೆಚ್ಚು ಮಾನವ ದಿನಗಳನ್ನು ಸೃಷ್ಟಿಸಿ, ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ತೀವ್ರ ಬರ ಇರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡಬೇಕು. ಬರ ಪರಿಹಾರ ಕಾರ್ಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರದಂತೆ ತಿಳಿಸಿದ ಅವರು, ಉತ್ತಮ ಕೆಲಸ ಮಾಡುವ ಅಧಿಕಾರಿಗಳನ್ನು ಪ್ರಶಂಸಿಸುವುದಾಗಿ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ದ ನಿದರ್ಾಕ್ಷಿಣ್ಯ ಕ್ರಮಕ್ಕೂ ಸೂಚಿಸಲಾಗಿದೆ ಎಂದು ತಿಳಿಸಿ, ಅಧಿಕಾರಿಗಳು ತುರ್ತು ಸಂದರ್ಭ ಹೊರತುಪಡಿಸಿ ರಜೆಗೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ ಈ ಬಾರಿ 13 ಕೋಟಿ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಲಾಗಿದೆ. ಕಳೆದ ಬಾರಿಯೂ ಕೂಡ 10.47 ಕೋಟಿ ಮಾನವ ದಿನಗಳ ಸೃಜನೆಯ ಗುರಿಯನ್ನು ಸಹ ನೀಡಲಾಗಿತ್ತೆಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಈವರೆಗೆ 6.5ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಿ, 7.18 ಲಕ್ಷ ಮಾನವ ದಿನಗಳನ್ನು ಸಹ ಸೃಜಿಸಲಾಗಿದೆ ಎಂದು ಹೇಳಿದರು. 

ಜಿಲ್ಲೆಯ ಇಂಡಿ, ತಿಕೋಟಾ, ಚಡಚಣ, ತಾಳಿಕೋಟೆ, ದೇವರಹಿಪ್ಪರಗಿ, ಬಬಲೇಶ್ವರ ಕ್ಷೇತ್ರಗಳು ತೀವ್ರ ನೀರಿನ ಅಭಾವ ಎದುರಿಸುತ್ತಿದ್ದು, ಅಧಿಕಾರಿಗಳು ಮುಂದಾಲೋಚನೆಯೊಂದಿಗೆ ಅವಶ್ಯಕ ತುರ್ತು  ಕ್ರಮಗಳನ್ನು ಕೈಗೊಳ್ಳಬೇಕು. ಜನರು ಹಾಗೂ ಜಾನುವಾರುಗಳ ಅನುಕೂಲಕ್ಕಾಗಿ ಪ್ರತಿದಿನ 40 ಲೀಟರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಅವಶ್ಯಕತೆ ಇರುವ ಕಡೆ ತುರ್ತಾಗಿ  ನೀರು ಸರಬರಾಜು ಮಾಡುವಂತೆ ತಿಳಿಸಿದ ಅವರು, ಟ್ಯಾಂಕರ್ ಮೂಲಕ ನೀರು ಸರಬರಾಜು ಜೊತೆಗೆ ಖಾಸಗಿ ಬೊರವೆಲ್ ಮಾಲೀಕರೊಂದಿಗೆ ಮುಂದಿನ ಏಳು ದಿನಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಜೊತೆಗೆ ಸಕಾಲಕ್ಕೆ ಬಿಲ್ ಸಂದಾಯವಾಗುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು. 

ಜಿಲ್ಲೆಯಲ್ಲಿ 113 ಗ್ರಾಮಗಳು ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, 347 ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 323 ಹೆಚ್ಚು ನೀರಿರುವ ಖಾಸಗಿ ಬೊರವೆಲ್ಗಳನ್ನು ಗುರುತಿಸಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಟ್ಯಾಂಕರ್ ಮೂಲಕ ಪೂರೈಸುವ ನೀರಿನ ಬಿಲ್ಲನ್ನು 15 ದಿನಗಳಲ್ಲಿ ಹಾಗೂ  ಖಾಸಗಿ ಬೊರವೆಲ್ಗಳ ಮಾಲೀಕರಿಗೆ 30 ದಿನಗಳೊಳಗೆ ಬಿಲ್ಲಗಳನ್ನು ಸಂದಾಯ ಮಾಡಲು ಸೂಚಿಸಲಾಗಿದೆ. ಟ್ಯಾಂಕರ್ ನೀರು ಸರಬರಾಜುವಿಗೆ ಸಂಬಂಧಪಟ್ಟಂತೆ ತಹಶೀಲ್ದಾರರು ನಿರ್ಣಯಿಸುವ ವರದಿಗೆ ಸಂಬಂಧಪಟ್ಟಂತೆ ಮೂರು ಗಂಟೆಯೊಳಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸಕಾಲಕ್ಕೆ ಅನುಮತಿ ಪಡೆಯಲು ಸೂಚಿಸಲಾಗಿದೆ ಎಂದು ಹೇಳಿದರು. 

ಜಿಲ್ಲೆಯಲ್ಲಿ ಲಿಂಬೆ ಹಣ್ಣು ಬೆಳೆಗಾರರು ತೀವ್ರ ನಷ್ಟನ್ನು ಅನುಭವಿಸಿದ್ದು, ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ಸಹಾಯ ನೀಡಲು ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಗಿದ್ದು, ಈ ರೈತರಿಗೆ ನ್ಯಾಯಯುತ ಸಹಾಯ ನೀಡಲು ಪ್ರಯತ್ನಿಸಲಾಗುವುದು. ಅದರಂತೆ ಈ ಹಿಂದೆ ಮಹಾರಾಷ್ಟ್ರ ರಾಜ್ಯದಲ್ಲಿ ಲಿಂಬೆ ಬೆಳೆಗಾರರಿಗೆ ಪ್ಯಾಕೇಜ್ ಮಾದರಿಯಲ್ಲಿ ನೀಡಲಾದ ಪರಿಹಾರ ಕ್ರಮವನ್ನು ಇಲ್ಲಿಯೂ ಜಾರಿಗೊಳಿಸುವ ಪ್ರಯತ್ನ ಮಾಡಲಾಗುವುದೆಂದು  ಹೇಳಿದರು. 

ಅದರಂತೆ ಈಗಾಗಲೇ ರಾಜ್ಯದ ಜಿಲ್ಲಾಧಿಕಾರಿಗಳಿಗೆ ಬರ ಪರಿಸ್ಥಿತಿ ಎದುರಿಸಲು ಹೆಚ್ಚಿನ ಅನುದಾನ ಸಹ ನೀಡಲಾಗಿದೆ. ಬರ ಪರಿಸ್ಥಿತಿ ನಿಭಾಯಿಸಲು ಹಣದ ಕೊರತೆಯಿಲ್ಲ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1.26 ಲಕ್ಷ ರೈತರಿಗೆ ಇನ್ಪುಟ್ ಸಬ್ಸಿಡಿ ವಿತರಿಸಲಾಗಿದ್ದು, ಬಾಕಿ ರೈತರಿಗೆ ಮುಂಬರುವ ಜೂನ್ರೊಳಗೆ ಆಧಾರ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಿ ಪರಿಹಾರ ಒದಗಿಸಲು ಸೂಚಿಸಲಾಗಿದೆ. ಅದರಂತೆ ನೀರು ಸರಬರಾಜು ವಾಹನಗಳ ಜಿಪಿಎಸ್ ಅಳವಡಿಕೆಗೆ ಸಂಬಂಧಪಟ್ಟಂತೆ ಸಮಸ್ಯೆ ಪರಿಹರಿಸಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಅವಶ್ಯಕತೆ ಇರುವ ಕಡೆ ಗ್ರಾಮ ಪಂಚಾಯತಿಗೆ ಒಂದರಂತೆ ಅಥವಾ ಅವಶ್ಯಕ ಹಳ್ಳಿಗೆ ಒಂದರಂತೆ ಮೇವು ಬ್ಯಾಂಕ್ ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಗೃಹ ಖಾತೆ ಸಚಿವರಾದ ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಮನಗೂಳಿ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.