ಲೋಕದರ್ಶನ ವರದಿ
ವಿಜಯಪುರ 16: ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೇಂದ್ರ ಕಾಪಸೆ ಹಾಗೂ ಬಿ.ಎಲ್.ಡಿ ವೈದ್ಯಕೀಯ ಕಾಲೇಜ ಅಧೀಕ್ಷಕ ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ ಅವರು ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.
ಜಾಥಾದಲ್ಲಿ ಸಕರ್ಾರಿ ಜಿ.ಎನ್.ಎಂ ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿ ನಗರದಲ್ಲಿ ಸಂಚರಿಸಿ ಕರಪತ್ರ ವಿತರಿಸಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಡೆಂಗ್ಯೂ ರೋಗದ ಹರಡುವಿಕೆ ಹಾಗೂ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ನಡೆದ ಮುಕ್ತಾಯ ಸಮಾರಂಭದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಎಸ್.ಎಂ ಗುಣಾರಿ ಮಾತನಾಡಿ ಮಾನ್ಸೂನ ಪ್ರಾರಂಭವಾಗುವ ಮುನ್ನ ಸಮುದಾಯಕ್ಕೆ ಡೆಂಗ್ಯೂ ರೋಗದ ಮಾಹಿತಿ ಅತಿ ಅಗತ್ಯವಾಗಿ ಗೊತ್ತಿರಬೇಕು. ಆ ಕಾರಣ ಮನೆಯ ಸುತ್ತ ಮುತ್ತ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವದು. ಮನೆಯಲ್ಲಿಯ ನೀರು ಸಂಗ್ರಹಕಾರಕಗಳ ಮೇಲೆ ಮುಚ್ಚಳವಿರಬೇಕು. ಹಾಗೂ ವಾರಕ್ಕೊಮ್ಮೆ ನೀರಿನ ಸಂಗ್ರಹಕಾರಗಳನ್ನು ಸ್ವಚ್ಛವಾಗಿ ತೊಳೆದು ತುಂಬಬೇಕು. ಇದರಿಂದ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗಿ ಡೆಂಗ್ಯೂ ರೋಗದ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮೀಕ್ಷಾ ಅಧಿಕಾರಿ ಡಾ.ಎಂ.ಬಿ.ಬಿರಾದಾರ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಈರಣ್ಣ ಧಾರವಾಡಕರ ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಕೆ. ಡಿ. ಗುಂಡಬಾವಡಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕೀಟಶಾಸ್ತ್ರಜ್ಞ ರಿಯಾಜ ದೇವಳ್ಳಿ ವಂದಿಸಿದರು.