ಅರಣ್ಯ ದಿನಾಚರಣೆ ನಿಮಿತ್ತ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

The program was launched by planting saplings to mark Forest Day.

ಅರಣ್ಯ ದಿನಾಚರಣೆ ನಿಮಿತ್ತ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ 

ಬ್ಯಾಡಗಿ 24: ಅರಣ್ಯ ಉಳಿದರೆ ಜೀವ ಸಂಕುಲ ಉಳಿಯಲು ಸಾಧ್ಯವೆಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ್ ಹೊಳೆಪ್ಪಗೋಳ ಹೇಳಿದರು.ಅವರು ಪಟ್ಟಣದ ಪುರಸಭೆ ಆವರಣದಲ್ಲಿ ಅರಣ್ಯ ದಿನಾಚರಣೆ ನಿಮಿತ್ತ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅರಣ್ಯವೆಂದರೆ ಬರೀ ಮರ, ಗಿಡಗಳಷ್ಟೇ ಅಲ್ಲ. ಬದಲಿಗೆ ಅವು ಹೊರ ಸೂಸುವ ಗಾಳಿ, ಹಿಡಿದಿಟ್ಟ ಮಣ್ಣು, ಘನೀಕರಿಸಿದ ಮೋಡ, ಸುರಿವ ಮಳೆ, ಹರಿವ ನೀರು ಎಲ್ಲವೂ ಹೌದು. ಮಿಗಿಲಾಗಿ ಅವನ್ನು ಆಶ್ರಯಿಸಿರುವ ರಾಶಿ ರಾಶಿ ಪ್ರಾಣಿ-ಪಕ್ಷಿಗಳೂ ಹುಳ-ಹುಪ್ಪಟೆಗಳೂ ಸೂಕ್ಷ್ಮ ಜೀವಿಗಳೂ ಹೌದು. ಜೊತೆಗೆ ಇವನ್ನೆಲ್ಲಾ ಯಾವ ಇಂಜಿನಿಯರನೂ, ನೇತಾರನೂ ಅದೆಷ್ಟು ಕೋಟಿ ಹಣವಿದ್ದರೂ ಏಕಾಏಕಿ ನಿರ್ಮಿಸಿ ಕೊಡಲಾರ. ಒಳಹೊಕ್ಕಷ್ಟೂ ನಿಗೂಢಗೊಳ್ಳುತ್ತಲೇ ಸಾಗುವ ಈ ಸಂಕೀರ್ಣ ಜೀವ ವ್ಯವಸ್ಥೆಯ ಆಗರ ರೂಪುಗೊಳ್ಳಲು ನೂರಾರು, ಸಾವಿರಾರು ವರುಷಗಳಾಗಲೇ ಬೇಕು ಎಂಬ ಅರಿವು ನಮ್ಮೆಲ್ಲರಲ್ಲಿ ಮೂಡಬೇಕಿದೆ ಆದ್ದರಿಂದ ಪ್ರತಿಯೊಬ್ಬರೂ ಮರ ಗಿಡ, ಅರಣ್ಯ ಉಳಿಸಿ ಬೆಳೆಸಬೇಕಿದೆ ಎಂದರು.ಪರಿಸರ ಅಭಿಯಂತರ ಚನ್ನಪ್ಪ ಅಂಗಡಿ  ಮಾತನಾಡಿಪ್ರತಿ ವರ್ಷ ಮಾರ್ಚ್‌ 21 ನ್ನು ವಿಶ್ವ ಅರಣ್ಯ ದಿನವನ್ನಾಗಿ ಪ್ರಪಂಚದಲ್ಲೆಡೆ ಆಚರಿಸಲಾಗುತ್ತದೆ. ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವುಮೂಡಿಸುವ ಸಲುವಾಗಿ ಆಚರಿಸಲಾಗುತ್ತಿದೆ.ಕಾಡಿದ್ದರೆ ನಾಡು, ಕಾಡಿದ್ದರೆ ನೀರುಕಾಡಿಲಿಲ್ಲದಿದ್ದರೆ ನಾಡಿಲ್ಲ. ಮರವಿದ್ದರೆ ಬರವಿಲ್ಲ ಎನ್ನುವ ಘೋಷವಾಕ್ಯವನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕಿದೆ. ಅಂದರೆ ಕಾಡು ಇಲ್ಲದೇ ಇದ್ದರೆ ನಾಡು ಹೇಗೆ ಇರಲು ಸಾಧ್ಯ, ಮರಗಳನ್ನೆಲ್ಲ ಕಡಿದು ಹಾಕಿದರೆ ಬರ ಬಾರದೇ ಇರದೇ ಎಂದು ನಾವು ನಮ್ಮನ್ನೇ ಕೇಳಿಕೊಳ್ಳುವಂತಹ ಅನಿವಾರ್ಯ ಸನ್ನಿವೇಶ. ಏಕೆಂದರೆ ಕಾಡಿದ್ದರೆ ನಾಡು ಎನ್ನುವುದು ಅನಾದಿ ಕಾಲದಿಂದಲೂ ನಾವು ಅನುಸರಿಸಿಕೊಂಡು ಬಂದಿರುವ ಪ್ರಕೃತಿ ನಿಯಮವೂ ಹೌದು ಆದ್ದರಿಂದ ಕಾಡು ನಾಶ ಮಾಡದೇ ಕಾಡಿನ ಮರಗಳನ್ನು ಸಂರಕ್ಷಣೆಯ ಮಾಡಬೇಕಿದೆ ಎಂದರು. ತಾಲೂಕಾ ಆಶ್ರಯ ಸಮಿತಿ ಸದಸ್ಯ ಗೀರೀಶ ಇಂಡಿಮಠ ಮಾತನಾಡಿದರು.ಈ ಸಂದರ್ಭದಲ್ಲಿ ಇತರರು ಉಪಸ್ಥಿತರಿದ್ದರು.