ಬ್ರಹ್ಮಜ್ಞಾನ ಪಡಿದುಕೊಂಡು ಮೋಕ್ಷ ಹೊಂದಬೇಕು: ಶಿವಪುತ್ರ ಅವಧೂತರು
ಜಮಖಂಡಿ 26: ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗ ಆಶ್ರಯದಲ್ಲಿ ಹಮ್ಮಿಕೊಳ್ಳುವ ಶ್ರೀಗುರುದೇವ ಸತ್ಸಂಗದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ತೋರದಯ್ಯಾ ಸುಖ ತೋರದಯ್ಯಾ ಎಂಬ ವಿಷಯ ಕುರಿತು ಅವರು ಅನುಭಾವ ಹಂಚಿಕೊಳ್ಳುತ್ತ ಆಶೀರ್ವಚನ ನೀಡಿದರು. ವಿಷಯಾತೀತ ಆನಂದ ಆಗಬೇಕಾದರೆ ಮಾಯೆಯನ್ನು ಮೀರಿ ಮನಸ್ಸು ಅಂತರ್ಮುಖಿಯಾಗಬೇಕು. ಅದಕ್ಕೆ ಸತ್ಸಂಗ ಮಾಡಬೇಕು. ನಾನು ಎಂದರೆ ಯಾರು, ನಾಮರೂಪ ನಾನಲ್ಲ. ನಾಮರೂಪ ಕೇವಲ ವ್ಯವಹಾರಕ್ಕಾಗಿ. ಆದ್ದರಿಂದ ಬ್ರಹ್ಮಜ್ಞಾನ ಮಾಡಿಕೊಂಡು ಮೋಕ್ಷ ಹೊಂದಬೇಕು ಎಂದು ಲಿಂಗನೂರಿನ ಅವಧೂತ ಮಠದ ಶಿವಪುತ್ರ ಅವಧೂತರು ಹೇಳಿದರು. ವಿಷಯಾತೀತ ಸುಖ ತೋರಬೇಕಾದರೆ ಬ್ರಹ್ಮಜ್ಞಾನ ಬೇಕು. ಬ್ರಹ್ಮಜ್ಞಾನ ಎಂದರೆ ಆತ್ಮಜ್ಞಾನ. ಆತ್ಮಜ್ಞಾನ ಎಂದರೆ ನಿಜದ ಅರಿವು. ಅದಕ್ಕೆ ಅನುಭಾವ ಎನ್ನುತ್ತಾರೆ. ಮೋಕ್ಷ ಸಾಮ್ರಾಜ್ಯ ಸೇರಲು ನೀತಿಯಿಂದ ನಡೆಯಬೇಕು. ಬ್ರಹ್ಮಜ್ಞಾನ ಸಂಪಾದಿಸಬೇಕು ಎಂದರು.
ಹುಲ್ಯಾಳ ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಬ್ರಹ್ಮಜ್ಞಾನ ಕ್ಷಣಿಕವಲ್ಲ. ಆದರೆ, ಬರಿ ಬ್ರಹ್ಮಜ್ಞಾನದಿಂದ ಸುಖವಿಲ್ಲ. ನಿರಂತರವಾಗಿ ಸುಖ ಪಡೆಯಲು ಬ್ರಹ್ಮಜ್ಞಾನ ಅನುಭವ ಸಿದ್ಧಿಯಾಗಬೇಕು. ನಾನು ನನ್ನೊಳಗೆ ಇದ್ದಾಗ ಮಾತ್ರ ನಿಜವಾದ ಸುಖ ಪ್ರಾಪ್ತಿಯಾಗುತ್ತದೆ.ಸುಖ ಮತ್ತು ಆನಂದ ಹೊರಗೆ ಎಲ್ಲಿಯೂ ಇಲ್ಲ. ವಸ್ತು ಮತ್ತು ವಿಷಯಗಳಲ್ಲಿ ಸುಖವಿಲ್ಲ. ನನ್ನನ್ನು ನಾನು ಅರಿತುಕೊಳ್ಳುವುದರಲ್ಲಿಯೇ ಸುಖವಿದೆ. ನನ್ನ ಸಮೀಪ ನಾನಿದ್ದಾಗ ಮಾತ್ರ ಸುಖ ಲಿಭಿಸುತ್ತದೆ. ಆತ್ಮ, ಪರವಸ್ತು ತಾನಾಗಬೇಕು. ಆಗ ನಾನು ಪರವಸ್ತು ಅನ್ನುವುದು ಸಹ ಉಳಿದಿರುವುದಿಲ್ಲ. ಆ ಅವಸ್ಥೆಯಲ್ಲಿ ಒಂದೇ ಇರುತ್ತದೆ. ಎರಡು ಸಹ ಇರುವುದಿಲ್ಲ ಎಂದರು. ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ, ಪುಂಡಲೀಕ ಭಜಂತ್ರಿ, ಶಿವಾನಂದ ಬಾಡನವರ ಸಂಗೀತ ಸೇವೆ ಸಲ್ಲಿಸಿದರು. ಹೃಷಿಕೇಸಿಯ ಗಂಗಾನಂದ ಮಹಾರಾಜರು, ಶ್ರೀಗುರುದೇವಾಶ್ರಮದ ಪುಂಡಲೀಕ ಶಾಸ್ತ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವೀರಾಜ ಹೊನಗೌಡ ಸ್ವಾಗತಿಸಿ, ನಿರೂಪಿಸಿದರು. ಪೋಟೊ: ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ನಡೆದ ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದ ಮಹಾಪ್ರಸಾದದ ದಾಸೋಹಿ ಬಸವರಾಜ ಬಿರಾದಾರ ದಂಪತಿ ಹಾಗೂ ಅವರ ಮಕ್ಕಳನ್ನು ಸನ್ಮಾನಿಸಲಾಯಿತು. ಶಿವಪುತ್ರ ಶ್ರೀಗಳು, ಹರ್ಷಾನಂದ ಶ್ರೀಗಳು ಇದ್ದಾರೆ.