ಲೋಕದರ್ಶನ ವರದಿ
ಯರಗಟ್ಟಿ 17: ನಾಲ್ಕು ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಯರಗಟ್ಟಿ ಪಟ್ಟಣವು ಅತೀ ವೇಗವಾಗಿ ವಾಣಿಜ್ಯ ಕೇಂದ್ರವಾಗಿ ಬೆಳೆದು ನಿಂತಿದೆ, ಯರಗಟ್ಟಿ ಹೋಬಳಿ ಗ್ರಾಮಗಳಿಂದ ಸವದತ್ತಿ ತಾಲೂಕಾ ಕೇಂದ್ರ ಸುಮಾರು ಅರವತ್ತರಿಂದ ಎಪ್ಪತ್ತು ಕೀ.ಮೀ ಅಂತರವಿದ್ದು ಸಾರ್ವಜನಿಕರು ತಾಲೂಕಾ ಕೇಂದ್ರದಲ್ಲಿನ ಕೆಲಸ ಕಾರ್ಯಗಳಿಗೆ ಹೋಗಿ ಬರುವುದು ತುಂಬಾ ತೊಂದರೆಯಾಗುತ್ತಿದೆ. ತಾಲೂಕಾ ಕೇಂದ್ರ ಘೋಷಣೆ ಮಾಡುವಂತೆ ಹಲವಾರು ಬಾರಿ ಪ್ರತಿಭಟನೆ ಮಾಡಲಾಗಿದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಯರಗಟ್ಟಿ ತಾಲೂಕಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಗ್ರಾಮಸ್ಥರು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರಲ್ಲಿ ಮನವಿ ಮಾಡಿಕೊಂಡರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಮಾತನಾಡುತ್ತಾ ಮುಖ್ಯ ಮಂತ್ರಿಗಳ ಹಾಗೂ ಸಚಿವರ ಗಮನಕ್ಕೆ ತಂದು ಯರಗಟ್ಟಿಯನ್ನು ತಾಲೂಕಾ ಕೇಂದ್ರ ಘೋಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಿಇಓ ರಾಮಚಂದ್ರನ್, ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಉಪ ತಹಶಿಲ್ದಾರ ಎಸ್.ಪಿ.ಮಾಲಿಪಾಟೀಲ, ಸುರೇಶ ಬಂಟನೂರ, ರಫೀಕ್.ಡಿ.ಕೆ, ಪೀರೋಜ ಖಾದ್ರಿ, ರಾಮಣ್ಣ ಪಾಟೀಲ, ರಂಗಪ್ಪ ಅಣ್ಣಿಗೇರಿ, ಕೆ.ಎಪ್.ನಧಾಪ ಮುಂತಾದವರಿದ್ದರು.