ಗುಣಮಟ್ಟದ ವಿದ್ಯುತ್ ವಿತರಣೆಗಾಗಿ ರೈತರಿಂದ ಬೃಹತ್ ಹೋರಾಟ

Massive struggle by farmers for quality power supply

* ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆ.ಇ.ಬಿ ವೃತ್ ಕಚೇರಿ ಮುತ್ತಿಗೆ  

* ಬರಗಾಲದಿಂದ ತತ್ತರಿಸಿರುವ ರೈತರ ಜೀವನದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟ 

ವಿಜಯಪುರ 21: ಜಿಲ್ಲೆಯ ರೈತರಿಗೆ ಗುಣಮಟ್ಟದ ಹಾಗೂ ಸಮರ​‍್ಕ ವಿದ್ಯುತ್ ಪೂರೈಸುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರದ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರರಾದ ಸಿದಣ್ಣ ಬೆಂಜಿಗೇರಿ ಅವರ ಮೂಲಕ ಹುಬ್ಬಳ್ಳಿಯ ಹೆಸ್ಕಾಂ ಎಂ.ಡಿ, ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯದ ಇಂಧನ ಸಚಿವರಿಗೆ  ಮನವಿ ಸಲ್ಲಿಸಿ ಬೇಸಿಗೆಯಲ್ಲಿ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. 

ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡುತ್ತಾ ಬಿರು ಬಿಸಿನ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಒಂದೆಡೆ ನೀರಿನ ಸಮಸ್ಯೆಯಾದರೆ ಈಗ ವಿದ್ಯುತ್ ಇಲಾಖೆಯ ಕಣ್ಣಾಮುಚ್ಚಾಲೆ ಹಾಗೂ ಕಳಪೆಮಟ್ಟದ ವಿದ್ಯುತ್ ವಿತರಣೆಯಿಂದಾಗಿ ಅಡಚಣೆ ಉಂಟಾಗುತ್ತಿದೆ, ತೋಟದ ವಸ್ತಿಗಳಲ್ಲಿ ವಾಸಿಸುವ ರೈತರ ಮಕ್ಕಳಿಗೆ ಪರೀಕ್ಷೆಗಳು ಹತ್ತಿರ ಬಂದಿರುವುದರಿಂದ ಅಭ್ಯಾಸ ಮಾಡುವುದಾದರು ಹೇಗೆ, ಹುಳ ಹುಪ್ಪಡಿ, ಕಾಡು ಪ್ರಾಣಿಗಳಿಂದ ಜೀವ ಭಯದಲ್ಲಿ ರೈತರಿದ್ದಾರೆ. ರೈತರ ಪಂಪಸೆಟ್‌ಗಳಿಗೆ ಹಗಲು 12 ಘಂಟೆ ತ್ರೀಫೆಸ್ ವಿದ್ಯುತ್ ನೀಡಬೇಕು ಹಾಗೂ ರಾತ್ರಿಯಿಡಿ ಮೊದಲಿನಂತೆ ಸಿಂಗಲ್ ಫೆಸ್ ವಿದ್ಯುತ್ ನೀಡಬೇಕು, ಈ ವೇಳೆ ಅವಶ್ಯಕತೆ ಇರುವ ರೈತರು ಕೃಷಿ ಪಂಪಸೆಟ್‌ಗಳನ್ನು ಪ್ರಾರಂಭಿಸುವಂತೆ ಅನುಕೂಲ ಮಾಡಿಕೊಡಬೇಕು,  

ರೈತರ ಐ.ಪಿ ಸೆಟ್‌ಗಳಿಗೆ ಆಧಾರ ಕಾರ್ಡ ಜೋಡಣೆ, ಸ್ವಯಂ ವೆಚ್ಚ ಯೋಜನೆ ಜಾರಿ ಮಾಡುತ್ತಿರುವುದು ತೀರಾ ಖಂಡನೀಯ  ವಿಷಯ  ಒಬ್ಬ ಸಣ್ಣ ರೈತ ಐ.ಪಿ ಸೆಟ್‌ಗಗಿ 3-4 ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ ರಾಜ್ಯ ಸರ್ಕಾರದ ಇದರ ಹಿಂದಿನ ಉದ್ದೇಶವೇ ವಿದ್ಯುತ್ ಇಲಾಖೆಯನ್ನು ಖಾಸಗಿಕರಣ ಮಾಡಿ ರೈತರನ್ನು ಒಕ್ಕಲೇಬ್ಬಿಸುವ ಹುನ್ನಾರವಾಗಿದೆ.  ಇದನ್ನು ಕೂಡಲೇ ಕೈಬಿಡಬೇಕು, ಇದನ್ನು ಆಗಲು ರೈತರು ಬಿಡುವುದಿಲ್ಲ ಎಂದರು. 

ಕೋಲಾರ ತಾಲೂಕಾ ಅಧ್ಯಕ್ಷರಾದ ಸೋಮು ಬಿರಾದಾರ ಮಾತನಾಡುತ್ತಾ ರೈತರೆಲ್ಲರು ಆರ್‌.ಆರ್ ನಂಬರ ಮಾಡಿಕೊಂಡು ಕೃಷಿ ಮಾಡುವ ಸ್ಥಿತಿಯಲ್ಲಿ ನಮ್ಮ ದೇಶದ ಯಾವ ರೈತರು ಸಿದ್ಧರಿಲ್ಲ ಅದು ಸಾಧ್ಯವೂ ಇಲ್ಲಾ, ನೆರೆಯ ಕೆಲವೊಂದು ರಾಜ್ಯದಲ್ಲಿ ರೈತರಿಗೆ 24 ಘಂಟೆ ಉಚಿತ ವಿದ್ಯುತ್ ವಿತರಣೆ ಮಾಡುತ್ತಿರುವುದು ನೊಡಿಕೊಂಡು ನಮ್ಮ ರಾಜ್ಯದಲ್ಲಿ 24 ಉಚಿತ ವಿದ್ಯುತ್ ಕೊಡಬೇಕು, ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನ ಅನುಸರಿಸುತ್ತಿದೆ ಇದು ಸರಿಯಲ್ಲ, ಈ ಕುರಿತು ಮುಖ್ಯಮಂತ್ರಿ ಹಾಗೂ ವಿದ್ಯುತ್ ಸಚಿವರು ಚರ್ಚೆ ಮಾಡಿ ರೈತಪರ ನಿರ್ಣಯ ಕೈಗೊಳ್ಳಬೇಕು, ರೈತರಿಗೆ ಸರಿ ವಿದ್ಯುತ್ ಬರದಿದ್ದರೆ ರಾಜ್ಯ ವ್ಯಾಪಿ ಹೋರಾಟ ಮಾಡಬೇಕಾಗುತ್ತದೆ ಎಂದರು. 

ವಿಜಯಪುರ ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ ಮಾತನಾಡುತ್ತಾ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಇನ್ನು ಹಳೆಯ ವಿದ್ಯುತ್ ಕಂಬ, ವಾಯರ್, ಹಾಗೂ ಟಿ,ಸಿಗಳಿದ್ದು ಇದರಿಂದ ಅನೇಕ ಅವಘಡಗಳಾಗಿ ಸಾಕಷ್ಟು ರೈತರಿಗೆ ನಷ್ಟವಾಗಿವೆ, ಕೂಡಲೇ ಇವುಗಳನ್ನು ಹೊಸದಾಗಿ ಬದಲಾಯಿಸಬೇಕು ಎಂದರು. 

ರೈತರ ಟಿ.ಸಿ ಸುಟ್ಟರೆ ನಗರಗಳಲ್ಲಿ 24 ಘಂಟೆ ಹಾಗೂ ಗ್ರಾಮೀಣ ಭಾಗದಲ್ಲಿಯ ರೈತರಿಗೆ 72 ಘಂಟೆಗಳಲ್ಲಿ ಬದಲಾವಣೆ ಮಾಡಿ ಕೊಡಬೇಕಾದ ಇಲಾಖೆಯ ಕೆಲವೊಂದು ಅಧಿಕಾರಿಗಳ ಹಣದ ಬೇಡಿಕೆ ಇಡುತ್ತಿದ್ದು, ಇದು ನಿಲ್ಲಬೇಕು, ಗುತ್ತಿಗೆದಾರರು ಟಿ.ಸಿಗಳನ್ನು ಸರಿಯಾಗಿ ತುಂಬದೇ ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸುತ್ತಿದ್ದು ಇದರಿಂದ ಟಿ.ಸಿ.ಗಳು ಪದೇ ಪದೇ ಸುಡುತ್ತಿವೆ, ಇದರ ಬಗ್ಗೆ ತನಿಖೆ ಆಗಬೇಕು ಹಾಗೂ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. 

ಮುಖಂಡರಾದ ಅನಮೇಶ ಜಮಖಂಡಿ, ರಾಮಸಿಂಗ ರಜಪೂತ, ಸಿದ್ಧನಗೌಡ ಪಾಟೀಲ, ರಾಜೇಸಾ ನದಾಫ ಸೇರಿದಂತೆ ಅನೇಕರು ಮಾತನಾಡುತ್ತಾ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬ ಹಾಗೂ ಅದರ ಕೆಳಗೆ ನೆಡಸಿರುವ ಅರಣ್ಯ ಇಲಾಖೆಯ ಮರಗಳು ಒಂದಕ್ಕೊಂದು ತಾಗಿ ಅವಘಡಗಳು ಉಂಟಾಗಿವೆ, ಹೆಸ್ಕಾಂ ಇಲಾಖೆಯ ಎಲ್ಲಾ ಅಧಿಕಾರಿಗಳು ರೈತರೊಂದಿಗೆ ಸೌಜನ್ಯಯುತವಾಗಿ ಮಾತನಾಡಬೇಕು ಎಂದು ಆಗ್ರಹಿಸಿದರು. 

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ತಾಳಿಕೋಟಿ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ, ಬಬಲೇಶ್ವರ ಅಧ್ಯಕ್ಷರಾದ ಮಕಬುಲ ಕೀಜಿ ಇಂಡಿ ಅಧ್ಯಕ್ಷರಾದ ಎಂ.ಹೆಚ್‌. ಪೂಜಾರಿ, ರಾಮಚಂದ್ರ ಪಾಟೀಲ, ರಾಮಚಂದ್ರ ಬಡಿಗೇರ, ಸಂಗಪ್ಪ ಟಕ್ಕೆ, ಬಸವರಾಜ ನ್ಯಾಮಗೊಂಡ, ಸಂಪತ್ತ ಜಮಾದಾರ, ಶಾನೂರ ನಂದರಗಿ, ನಜೀರ ನಂದರಗಿ, ಚನ್ನು ಜಮಖಂಡಿ, ಬಸವರಾಜ ಮಸೂತಿ, ಕಲ್ಲಪ್ಪ ಪಾರಶೆಟ್ಟಿ, ಮಹಾಂತೇಶ ಮಮದಾಪುರ, ಮಲ್ಲಿಕಾರ್ಜುನ ಘೋಡೆಕಾರ ಸೇರಿದಂತೆ ಅನೇಕರು ಇದ್ದರು.