ಕೆರೂರ ಪಟ್ಟಣದ ವಿವಿಧಡೆ ಅವ್ಯವಸ್ಥೆ ಆಗರ * ರಸ್ತೆಗಳ ಮೇಲೆ ಗಟಾರ ನೀರು*ಕಸ-ಕಡ್ಡಿಗಳ ಚಲ್ಲಾಪಿಲ್ಲಿ ದುರ್ವಾಸನೆಯ ನಾಥ
ವರದಿ. ಅಬೂಬಕರ್ ಯಡಹಳ್ಳಿ
ಕೆರೂರ 21: ಪಟ್ಟಣದ ವಿವಿಧ ರಸ್ತೆಗಳು ಚರಂಡಿ ಮಾದರಿಯಲ್ಲಿ ಗೋಚರಿಸುತ್ತಿದ್ದು ರಸ್ತೆಗಳ ಅಕ್ಕ-ಪಕ್ಕದಲ್ಲಿ ಕಸ-ಕಡ್ಡಿಗಳ ಚಲ್ಲಾಪಿಲ್ಲಿ ದೃಶ್ಯಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದು ನಾಗರಿಕರ ಆಕ್ರೋಶಕ್ಕೆ ತುತ್ತಾಗಿ ಪಟ್ಟಣ ಪಂಚಾಯತ ಆಡಳಿತ ವ್ಯವಸ್ಥೆಯು ಕೆಂಗಣ್ಣಿಗೆ ಗುರಿಯಾಗಿದೆ.
ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಕೊರತೆ ಎದ್ದು ಕಾಣುತ್ತಿದ್ದು, ಬಹುತೇಕ ಪ್ರಮುಖ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ರಸ್ತೆ ಮೇಲೆ ಚರಂಡಿ ನೀರು ಹರಿದು ರಸ್ತೆಗಳೆಲ್ಲ ಚರಂಡಿಯಂತಾಗಿ ಮಾರ್ಪಟಟಿವೆ. ಈಚಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ ನೀಡಿದ ನಾಲ್ಕಾರು ಕಾಮಗಾರಿಗಳನ್ನು ಬಿಟ್ಟರೆ ಜನಪರ ಅಭಿವೃದ್ಧಿ ಕಾಮಗಾರಿಗಳು ಮರೀಚಿಕೆಯಾಗಿವೆ.
ಪಟ್ಟಣ 20ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು ನಗರದಲ್ಲಿ ಸುಸಜ್ಜಿತ ರಸ್ತೆಗಳಿಲ್ಲ, ಚರಂಡಿಗಳು ತುಂಬಿ ರಸ್ತೆಗಳ ಮೇಲೆ ಚರಂಡಿ ನೀರು ಹರಿಯುವುದು ಮಾಮೂಲಾಗಿದೆ. ಬೀದಿ ದೀಪಗಳ ರಾತ್ರಿ ಹೊತ್ತಿನಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತ ವೃದ್ಧರು, ಮಕ್ಕಳು ಪಾದಚಾರಿಗಳ ಸುತ್ತಾಟ ದುಸ್ತರವಾಗಿದೆ. ಅಭಿವೃದ್ಧಿ ಅನ್ನೋದು ಮಾಯವಾಗಿದೆ ಎಂದು ಪ್ರಜ್ಞಾವಂತರು ದೂರಿದ್ದಾರೆ.
ನಗರದ ಕಿಲ್ಲಾ ಓಣಿ, ಹಳಪೇಟೆ, ಹೊಸಪೇಟೆ, ನೆಹರುನಗರ ಸೇರಿದಂತೆ ಅನೇಕ ಕಡೆಯ ಗಲ್ಲಿ ಗಲ್ಲಿಗಳ ಮುಖ್ಯ ರಸ್ತೆಗಳು ಹದಗೆಟ್ಟು ನಾದುರಸ್ಥೆಯ ಪರಿಣಾಮ ನಾಗರಿಕರು ಹಿಡಿಶಾಪ ಹಾಕುವಂತಾಗಿದೆ. ಕಳೆದ ಐದಾರು ವರ್ಷಗಳಿಂದ ರಸ್ತೆಗಳ ದುರಸ್ತಿ ಕಾರ್ಯ ನಡೆದಿರುವದು ವಿಪರ್ಯಾಸ. ಚರಂಡಿ ವ್ಯವಸ್ಥೆ ಇದ್ದು ಇಲ್ಲದಂತಾಗಿದೆ ಪಟ್ಟಣದ ಕಿಲ್ಲಾಪೇಟೆ ಹಳಪೇಟೆ ಹೊಸಪೇಟೆಗಳ ವಿವಿಧ ಬಡಾವಣೆಗಳ ಶೇಕಡಾ 90ರಷ್ಟು ಚರಂಡಿ ವ್ಯವಸ್ಥೆ ಇಲ್ಲದೆ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿದ್ದು ಪ್ರಸಕ್ತ ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದ್ದು ಕೆಲ ಪ್ರದೇಶಗಳಲ್ಲಿ ಇರುವ ಅಲ್ಪ ಪ್ರಮಾಣದ ಚರಂಡಿಗಳು ಕಲ್ಲು ಕಟ್ಟೆಗಳಿಂದ ತುಂಬಿ ಅವುಗಳು ದುರ್ವಾಸನೆ ಹರಡಿ ಸೊಳ್ಳೆಗಳ ಉತ್ಪಾದನೆ ಕೇಂದ್ರವಾಗಿ ಕ್ರಿಮಿ, ಕೀಟಗಳ ವಾಸ ಸ್ಥಾನವಾಗಿದೆ. ನಾಗರೀಕರು ಅನಾರೋಗ್ಯದ ಭೀತಿಯ ನಡುವೆ ಮೂಲ ಸೌಕರ್ಯಕ್ಕಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಪ್ರಾರ್ಥನಾ ಮಂದಿರದ ಮುಂದೆ ಗಲೀಜು ನೀರು: ಕಿಲ್ಲಾ ಪೆಟ್ಟೇಯ ಸುಂಕದ ಗಲ್ಲಿಯ ಪ್ರಾರ್ಥನಾ ಮಂದಿರದ ಮುಂಭಾಗದ ರಸ್ತೆಯಲ್ಲಿ ಮೊಣಕಾಲು ಉದ್ದ ತಗ್ಗು ಬಿದ್ದಿದೆ, ಚರಂಡಿ ನೀರು ಅಲ್ಲಿ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ದುರಸ್ತಿ ಮಾಡುವಂತೆ ಅಲ್ಲಿನ ನಿವಾಸಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಪ್ರಾರ್ಥನೆ ಮಾಡಲು ದಿನನಿತ್ಯ ಇಲ್ಲಿಗೆ ಬರುವ ನೂರಾರು ಜನರು ಪಪಂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಬೆಳಗಂಟಿ ಸಮಸ್ಯೆಗೆ ಮುಕ್ತಿ ಎಂದು ?: ಕೆರೂರ ಪಟ್ಟಣ ಸಂಪೂರ್ಣ 24ಥ7 ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಯಾಗಿದೆ.ಆದರೆ ಎರಡು ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು ಶಾಶ್ವತ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ.ಇನ್ನು ಪಟ್ಟಣಕ್ಕೆ ಒಳಪಡುವ ಬೆಳಗಂಟಿಗೆ ಆ ಯೋಜನೆ ಇವರಿಗೆ ಜಾರಿಗೆ ಬಂದಿಲ್ಲ ಅಲ್ಲಿಗೆ ನಿವಾಸಿಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಊರಲ್ಲಿಯ ಕುಡಿವ ನೀರಿನ ಟ್ಯಾಂಕಿನಿಂದ ಹರಿಯುವ ನೀರು ಮತ್ತು ಗ್ರಾಮದ ಕೊಳಕು ರಸ್ತೆ ತುಂಬ ಹರಿದು ಇಲ್ಲಿನ ಜನರು ಅಂಗವಿಕಲರು ಸುಗಮವಾಗಿ ನಡೆದಾಡುವುದೇ ದುಸ್ತರವಾಗಿದೆ. ಅಲ್ಲಿಯ ಸಾಮೂಹಿಕ ಶೌಚಾಲಯ ಸುಮಾರು 10ವರ್ಷಗಳಿಂದ ಹಾಳು ಬಿದ್ದು ಹೋಗಿವೆ. ಬೆಳಗ್ಗೆ ಮತ್ತು ರಾತ್ರಿ ಕತ್ತಲಲ್ಲಿ ಕೈಯಲ್ಲಿ ಚೊಂಬು ಹಿಡಿದು ಮಹಿಳೆಯರು ಪುರುಷರು ರಸ್ತೆ ಶೌಚಾಲಯಕ್ಕೆ ತೆರಳುವುದು ಅಲ್ಲಿನ ನಿವಾಸಿಗಳಿಗೆ ಅನಿವಾರ್ಯವಾಗಿದೆ. ಪಪಂ ಅಧಿಕಾರಿಗಳು ಬೆಳಗಂಟಿಗೂ ಮತ್ತು ಕೆರೂರ ಪಟ್ಟಣ ಪಂಚಾಯಿತಿಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ನಮ್ಮ ಊರ ಕಡೆ ಕಣ್ಣೆತ್ತಿ ನೋಡುತ್ತಿಲ್ಲ ಎಂಬುದು ಅಲ್ಲಿನ ಜನರ ಆಕ್ರೋಶಭರಿತ ನುಡಿಗಳಾಗಿವೆ.
ನಮ್ಮ ಬೆಳಗಂಟಿಗೆ ಮೂಲ ಸೌಕರ್ಯದ ಜತೆ ಶುದ್ಧ ನೀರಿನ ವ್ಯವಸ್ಥೆ ಜಾರಿಗೆ ತರಬೇಕು. ಇಲ್ಲದೇ ಹೋದರೆ ಗ್ರಾಮಸ್ಥರು ಸೇರಿ ಪಪಂ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ
ಆಸಂಗೆಪ್ಪ ನಾಯ್ಕರ
(ಬೆಳಗಂಟಿ ನಿವಾಸಿ)
ಬೆಳಗಂಟಿ ಕುಡಿಯುವ ನೀರಿನ ಶಾಶ್ವತ ಯೋಜನೆ ಟೆಂಡರ್ ಹಂತದಲ್ಲಿ ಇದೆ. ರಸ್ತೆ ಚರಂಡಿ ದುರಸ್ತಿಗಾಗಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ.
ರಮೇಶ ಮಾಡಬಾಳ
( ಪಟ್ಟಣ ಪಂಚಾಯತ ಮುಖ್ಯಾಧಿಕಾರಿ )
ಪಟ್ಟಣದ ಬಹುತೇಕ ಬಡಾವಣೆಗಳ ರಸ್ತೆಗಳು ಹಾಳಾಗಿ ತೆಗ್ಗು-ದಿನ್ನಿಗಳಾಗಿ ಮಾರಪಟ್ಟಿವೆ ಸಾಕಷ್ಟು ಬಾರಿ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಬರುವ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ವಿಶೇಷ ಅನುದಾನ ನೀಡುವಂತೆ ಶಾಸಕರುಗೆ ಆಗ್ರಹಿಸಿದ್ದಾರೆ
ಕುಮಾರ ಐಹೊಳೆ
(ಪಟ್ಟಣ ಪಂಚಾಯತ ಸದಸ್ಯ)