ಹುಕ್ಕೇರಿ 21: ಇತಿಹಾಸ ಅವಲೋಕಿಸಿದಾಗ ನಮ್ಮ ದೇಶದ ಸಾಮ್ರಾಜ್ಯಗಳು ನಂಬಿದವರ ಮೋಸದಿಂದ ಹಾಳಾಗಿವೆ. ಪ್ರಸ್ತುತ ಅದೇ ರೀತಿಯ ವಾತಾವರಣ ಮುಂದುವರೆದಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಅಡವಿಸಿದ್ದೇಶ್ವರ ಮಠದ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿಯನ್ನು ಬುಧವಾರ ಅನಾವರಣಗೊಳಿಸಿ ಮಾತನಾಡಿದ ಅವರು, ಇಂದಿನ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿಯೂ ನಾವು ನಂಬಿ ಬೆಳೆಸಿದವರು ನಂಬಿಕೆ ದ್ರೋಹವೆಸಗುವ ಗುಂಪು ವ್ಯವಸ್ಥಿತ ಸಂಚು ರೂಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಗಜ್ಯೋತಿ ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮಾ, ಸಂಗೊಳ್ಳಿ ರಾಯಣ್ಣಾ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಮೊದಲಾದವರ ಚರಿತ್ರೆ ಮತ್ತು ಇತಿಹಾಸ ಓದಿದಾಗ ಈ ಅಂಶ ತಿಳಿಯುತ್ತದೆ. ಅದಕ್ಕಾಗಿ ಯುವ ಜನಾಂಗ ಮತ್ತು ಮಕ್ಕಳು ಇತಿಹಾಸ, ಸಾಹಿತ್ಯ, ರಾಜಕೀಯ ಮತ್ತು ಧಾರ್ಮಿಕ ಘಟನೆಗಳನ್ನು ಅರಿಯಲು ನಿತ್ಯ ಓದುವ ಪ್ರವೃತ್ತಿ ಬೆಳೆಸಿಕೊಳ್ಳ ಎಂದು ಸಲಹೆ ನೀಡಿದರು.
ಹುಕ್ಕೇರಿ ಮತಕ್ಷೇತ್ರದ ಸಂಕೇಶ್ವರ ಮತ್ತು ಹುಕ್ಕೇರಿ ಪಟ್ಟಣದಲ್ಲಿ ಬಸವಣ್ಣ, ಡಾ.ಬಾಬಾಸಾಹೇಬ ಅಂಬೇಡ್ಕರ, ಸಂಗೊಳ್ಳಿ ರಾಯಣ್ಣಾ, ಅಕ್ಕಮಹಾದೇವಿ ಸೇರಿದಂತೆ ಮಹಾನ್ ವ್ಯಕ್ತಿಗಳ 11 ಪ್ರತಿಮೆಗಳನ್ನು ರಾಜೇಶ್ವರಿ ವಿಶ್ವನಾಥ ಕತ್ತಿ ಚಾರಿಟೇಬಲ್ ಟೃಸ್ಟ್ ವತಿಯಿಂದ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದರು. ಸಾನಿಧ್ಯ ವಹಿಸಿದ್ದ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಸಂಕೇಶ್ವರ ಶಂಕರಾಚಾರ್ಯ ಮಠದ ಜಗದ್ಗುರು ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಮತ್ತು ಅಭಿನವ ಮಂಜುನಾಥ ಶ್ರೀಗಳು ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರನ್ನು ಒಂದು ಧರ್ಮಕ್ಕೆ ಸೀಮಿತ ಮಾಡದೇ ಅವರಲ್ಲಿದ್ದ ರಾಷ್ಟ್ರಯತೆ ಮತ್ತು ಹಿಂದುತ್ವದ ಭಾವನೆ ಹಾಗೂ ಅವರ ತತ್ವಾದರ್ಶಗಳನ್ನು ನಾವು ಪಾಲಿಸಬೇಕು.ಆಗ ಮಾತ್ರ ಮೂರ್ತಿಯ ಪ್ರತಿಷ್ಠಾಪನೆ ಸಾರ್ಥಕವಾಗುತ್ತದೆ ಎಂದರು.
ಶಾಸಕ ನಿಖಿಲ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆ ಅಧ್ಯಕ್ಷರಾದ ಇಮ್ರಾನ್ ಮೋಮಿನ, ಸೀಮಾ ಹತನೂರೆ, ಹುಕ್ಕೇರಿ ಮರಾಠಾ ಸಮಾಜದ ಅಧ್ಯಕ್ಷ ಪುಟ್ಟು ಖಾಡೆ, ಮುಖಂಡರಾದ ಸತ್ತೆಪ್ಪಾ ನಾಯಿಕ, ರಾಯಪ್ಪಾ ಡೂಗ, ಜಯಗೌಡ ಪಾಟೀಲ, ಬಂಡು ಹತನೂರೆ, ಅಮರ ನಲವಡೆ, ಮಹಾವೀರ ನಿಲಜಗಿ, ಕಿರಣಸಿಂಗ ರಜಪೂತ, ಅಶೋಕ ಪಟ್ಟಣಶೆಟ್ಟಿ, ಶೀತಲ ಬ್ಯಾಳಿ, ಪಿಂಟು ಶೆಟ್ಟಿ, ಅಪ್ಪುಸ್ ತುಬಚಿ, ಸುಹಾಸ ನೂಲಿ, ರಾಜು ಮುನ್ನೋಳಿ ಮತ್ತಿತರರು ಉಪಸ್ಥಿತರಿದ್ದರು.