ಬೆಳಗಾವಿ : ನನಗೆ ಮರಾಠಿ ಭಾಷೆ ಬರೊಲ್ಲ. ಕನ್ನಡದಲ್ಲಿ ಮಾತಾಡಿ ಎಂದು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಮೇಲೆ ಮರಾಠಿ ನೂರಾರು ಪುಂಡರು ಹಲ್ಲೆ ನಡೆಸಿರುವ ಘಟನೆ ಸುಳೆಬಾವಿ ಬಳಿ ಶುಕ್ರವಾರ ನಡೆದಿದೆ.
ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಮಹದೇವ ಹಲ್ಲೆಗೆ ಒಳಗಾದವರು. ಇವರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ ನಲ್ಲಿದ್ದ ಯುವತಿಯೊಬ್ಬಳು ಹುಡುಗನ ಜತೆ ಕುಳಿತಿದ್ದು, ಎರಡು ಟಿಕೆಟ್ ಕೇಳಿದ್ದರು. ಫ್ರೀ ಟಿಕೆಟ್ ಮಹಿಳೆಯರಿಗೆ ಮಾತ್ರ, ಹುಡುಗನಿಗೆ ಟಿಕೆಟ್ ಕೊಡಿ ಎಂದು ಕಂಡಕ್ಟರ್ ಕೇಳಿದ್ದರು. ಆಗ ಮರಾಠಿಯಲ್ಲಿ ಏನೇನೋ ಮಾತನಾಡಿಕೊಂಡಿದ್ದರು ಎನ್ನಲಾಗಿದೆ.
ಆಗ ಕಂಡಕ್ಟರ್ ಮಹದೇವ್, ನನಗೆ ಮರಾಠಿ ಬರೊಲ್ಲ, ಕನ್ನಡದಲ್ಲಿ ಹೇಳಿ. ಅವರ ಟಿಕೆಟ್ ಹಣ ನೀಡಿ, ನಿಮ್ಮಿಬ್ಬರಿಗೆ ಬೇರೆ ಬೇರೆ ಟಿಕೆಟ್ ಕೊಡುತ್ತೇನೆ ಎಂದಿದ್ದರು. ಇದಕ್ಕೆ ಕೋಪಗೊಂಡ ಯುವಕ ಜನರನ್ನು ಕರೆಯಿಸಿ, ಬಸ್ ತಡೆದು ಕಂಡಕ್ಟರ್ ಮಹದೇವ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕಂಡಕ್ಟರ್ ಮಹದೇವ್ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿಸಿಪಿ ರೋಹನ್ ಜಗದೀಶ್, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕನ್ನಡ ಹೋರಾಟಗಾರ ವಾಜೀದ್ ಹೀರೇಕುಡಿ ಸೇರಿದಂತೆ ಕೆಲವರು ಆಸ್ಪತ್ರೆಗೆ ಭೇಟಿ ನೀಡಿ ಕಂಡಕ್ಟರ್ ಮಹದೇವ್ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ. ಹಲ್ಲೆ ಮಾಡಿದವರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.