ಲೋಕದರ್ಶನ ವರದಿ
ಕೊಪ್ಪಳ 10: ಕಾವ್ಯ ವರ್ತಮಾನದ ತಲ್ಲಣಗಳಿಗೆ ಮುಖಾ ಮುಖಿಯಾದಾಗಲೇ ಕವಿ ಮತ್ತು ಕಾವ್ಯಕ್ಕೆ ನ್ಯಾಯ ದಕ್ಕುತ್ತದೆ ಎಂದು ನ್ಯಾಯವಾದಿ ಹಾಗೂ ಸಾಹಿತಿ ವಿಜಯ ಅಮೃತರಾಜ ಅಭಿಪ್ರಾಯಪಟ್ಟರು.
ಇಲ್ಲಿಯ ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನಗಳು, ಭಾಗ್ಯನಗರದ ಡಿ ಎಂ ಬಡಿಗೇರ ಅವರ ಮನೆಯ ಆವರಣದಲ್ಲಿ ಆಯೋಜಿಸಿದ್ದ ಎ ಎಸ್ ಮಕಾಂದಾರ್ ಅವರ ಕಾವ್ಯ ಸಂಕಲನ 'ಅಕ್ಕಡಿ ಸಾಲು' ಕುರಿತ ವೀಮರ್ಶೆ ಹಾಗೂ ಸಂವಾದ ಕಾರ್ಯಕ್ರನದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡ ಕವಿ, ಸಾಹಿತಿಗಳು ವಿಜೃಂಭಿಸುವ ಕಾಲ ಇದು. ಹಾಗಾಗಿ ಮುನ್ನೆಲೆಗೆ ಬರಲು ಜಾಲತಾಣಗಳಿಗೆ ಈಗಿನ ಬರಹಗಾರರು ಮುಂದಾಗಬೇಕೆಂದು ಸಲಹೆ ನೀಡಿದರು.
ಸಾಹಿತಿಗೆ ಯಾರ ಹಂಗೂ ಮತ್ತು ಭಯ ಇರಕೂಡದು. ಮುಲಾಜಿಗೂ ಕೂಡ ಸಾಹಿತಿ ಮಣಿಯಬಾರದು. ಅಂದಾಗಲೇ ಆತ ಹೊಸದನ್ನು ಸೃಷ್ಟಿ ಮಾಡಲು ಸಾಧ್ಯವಾಗುತ್ತದೆ ಎಂದರು. ಕಥೆಗಾರ ಹಾಗೂ ಸಂಗಾತ ಪತ್ರಿಕೆಯ ಸಂಪಾದಕ ಟಿ ಎಸ್ ಗೊರವರ ಅವರು 'ಅಕ್ಕಡಿ ಸಾಲು' ಕವನ ಸಂಕಲನ ಕುರಿತು ಮಾತನಾಡುತ್ತ ಕವಿ ಮಕಾನದಾರ ದೇಶಿಯ ಭಾಷೆಯಲ್ಲಿ ಕಾವ್ಯ ರಚನೆಗೆ ಒತ್ತು ಕೊಟ್ಟಿದ್ದು ಸ್ತುತ್ಯರ್ಹ ಅಂದರಲ್ಲದೇ, ಸುತ್ತಲಿನ ಬದುಕು, ಬವಣೆ ಹಾಗೂ ಪರಿಸರ ಕುರಿತ ಕಾವ್ಯಗಳು ಗಮನ ಸೆಳೆಯುತ್ತವೆ ಎಂದರು. ಕವಿ ಮಕಾನಂದಾರ್ ಮಾತನಾಡಿ, ತಮ್ಮ ಕಾವ್ಯಕೃಷಿಗೆ ನಿತ್ಯದ ಬೇಗುದಿಗಳೇ ಕಾರಣ ಎಂದರಲ್ಲದೆ. ತಮ್ಮ ಕಣ್ಣೆದುರಿನ ತಹತಹಗಳು ಕಾವ್ಯದ ಸಾಲುಗಳಲ್ಲಿ ಪದಗಳಾಗಿ ಪವಡಿಸಿವೆ ಎಂದರು. ಮುಖ್ಯ ಬೆಳೆಯ ಜೊತೆಗೆ ಅಕ್ಕಡಿ ಸಾಲೂ ಸಹ ಮಹತ್ವದ್ದಾಗಿದೆ. ಹಾಗಾಗಿ ಸಂಕಲನಕ್ಕೆ ಈ ಶೀರ್ಷಿಕೆ ಎಂದರು.ನನ್ನನ್ನು ಕಾಡಿದ ಅದೆಷ್ಟೋ ಸಂಕಟಗಳು ನನ್ನ ಕಾವ್ಯ ರಚನೆಗೆ ನೆಲೆ ಒದಗಿಸಿವೆ ಎಂದರು.
ಸಾಹಿತಿಗಳಾದ ಎಚ್ ಎಸ್ ಪಾಟೀಲ, ಡಾ ಮಹಾಂತೇಶ ಮಲ್ಲನಗೌಡರ್, ಶಂ ನಿಂ ತಿಮ್ಮನಗೌಡರ್, ಅನಸೂಯ ಜಾಗೀರದಾರ ಶಾಸ್ರೀ, ಶಾಂತಾದೇವಿ ಹಿರೇಮಠ, ಎ ಎಂ ಮದರಿ, ಎಸ್ ಕಾಶೀಂಸಾಹೇಬ್, ಮಂಜುನಾಥ ಚಿತ್ರಗಾರ, ವಿಜಯಲಕ್ಷ್ಮಿ ಕೊಟಗಿ ಹಾಗೂ ಶಿಕಾ ಬಡಿಗೇರ ಸಂವಾದದಲ್ಲಿ ಭಾಗಿಯಾದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಣ್ಣ ನಿಂಗೋಜಿ, ವಾಸುದೇವ ಕುಲಕರ್ಣಿ , ಶಿಕ್ಷಕ ರಂಗನಾಥ ಕುದರಿಮೋತಿ, ಡಾ ಸಿ ಬಿ ಚಿಲ್ಕರಾಗಿ, ರಾಚಪ್ಪ ಕೇಸರಬಾವಿ ಮುಂತಾದವರು ಉಪಸ್ತಿತರಿದ್ದರು. ಡಾ ಶಿವಪ್ರಸಾದ ಹಾದಿಮನಿ ನಿರೂಪಿಸಿದರು. ಪ್ರಕಾಶಕ ಡಿ ಎಂ ಬಡಿಗೇರ ಸ್ವಾಗತಿಸಿ, ವಂದಿಸಿದರು.