ಕೊಟ್ಟೂರು: ಗೌರಿ ಹುಣ್ಣಮೆಗೆ ಸಿದ್ಧವಾಗಿವೆ ಬಣ್ಣ ಬಣ್ಣದ ಸಕ್ಕರೆ ಗೊಂಬೆಗಳು

ಲೋಕದರ್ಶನ ವರದಿ

ಕೊಟ್ಟೂರು 09: ಗೌರಿ ಹಬ್ಬ ಹಿನ್ನೆಲೆಯಲ್ಲಿ ವಿವಿಧ ನಮೂನೆಯ ಬಣ್ಣ ಬಣ್ಣದ ಸಕ್ಕರೆ ಗೊಂಬೆಗಳು ಮಾರುಕಟ್ಟಗೆ ಲಗ್ಗೆ ಇಡುತ್ತಿದ್ದು, ಮಹಿಳೆಯರನ್ನು ಕೈ ಬೀಸಿ ಕರೆಯುತ್ತಿವೆ. 

ನ.12ರಂದು ದೊಡ್ಡ ಗೌರಿ ಹುಣ್ಣಿಮೆ ಇದ್ದು, ಮಕ್ಕಳು, ಯುವತಿಯರು ಹಾಗೂ ಮಹಿಳೆಯರ ಪ್ರಮುಖ ಹಬ್ಬವಾಗಿದೆ. ಹುಣ್ಣಿಮೆ ದಿನ ಸಕ್ಕರೆ ಆರತಿಯೊಂದಿಗೆ ಗೌರಿಯನ್ನು ಪೂಜಿಸುವ ಸಂಪ್ರದಾಯವಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಬಗೆಯ ಸಕ್ಕರೆ ಆರತಿಗಳು ಮಕ್ಕಳಾದಿಯಾಗಿ ಹಿರಿಯರನ್ನು ಸೆಳೆಯುತ್ತಿವೆ. 

ಪಟ್ಟಣದಲ್ಲಿ ಈ ಬಾರಿ ಹತ್ತಕ್ಕೂ ಹೆಚ್ಚು ಸಕ್ಕರೆ ಆರತಿ ತಯಾರಕರು ಕ್ವಿಂಟಾಲ್ ಲೆಕ್ಕದಲ್ಲಿ ಆರತಿಗಳನ್ನು ತಯಾರಿಸಿದ್ದಾರೆ. ಪಟ್ಟಣದ ಕೆಂಪಳ್ಳಿ ಸಿದ್ದಪ್ಪ, ಕಂಚಿಕೇರಿ ಬಸವರಾಜ್, ಚಿಗಟೇರಿ ಸೋಮಶೇಖರ್, ತೋಟಗೇರ್ ವೀರೇಶ, ಪಳಾರದ ಅಂಗಡಿ ಮಲ್ಲಪ್ಪ ಇತರರು ಮೂರ್ನಾಲ್ಕು ದಶಕಗಳಿಂದ ಸಕ್ಕರೆ ಆರತಿ ತಯಾರಿಸುವಲ್ಲಿ ನಿರತರಾಗಿದ್ದಾರೆ, ಗಣೇಶ, ಸರಸ್ವತಿ, ನವಿಲು, ಗಿಳಿ, ಹಂಸ, ಕೋಳಿ, ಗೂಳಿ, ಹಸು, ಕುದುರೆ, ಆನೆ, ಒಂಟೆ, ಬುದ್ಧ, ಬಸವ, ಕ್ರೈಸ್ತನ ಕಿರೀಟ, ಗೋಪುರ, ದೀಪ ಸ್ತಂಭ, ಮಸೀದಿ ಮುಂತಾದ ಸಕ್ಕರೆ ಆರತಿಗಳು ಭಾರತೀಯ ಸಂಸ್ಕೃತಿಯ ಏಕತೆಯನ್ನೂ ಸಾರುತ್ತಿದ್ದು, ರಾಜ, ರಾಣಿ, ಸೈನಿಕ, ರಥ, ಮಂಟಪ, ಋಷಿ, ದ್ವಾರ ಬಾಗಿಲು, ಸಖಿಯರು ಸಕ್ಕರೆ ಆರತಿಯಲ್ಲಿ ರೂಪಗೊಂಡಿರುವುದು ಕೌಶಲತೆಗೆ ಸಾಕ್ಷಿಯ ಜತೆಗೆ ಹಬ್ಬಗಳ ಮೆರುಗನ್ನು ಹೆಚ್ಚಿಸುತ್ತಿವೆ.