ಟೆಸ್ಲಾ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಮಳಿಗೆ ತೆರೆದರೆ, ಅಮೆರಿಕಕ್ಕೆ ಮಾಡುವ ಅನ್ಯಾಯ: ಟ್ರಂಪ್‌

If Tesla opens a car dealership in India, it will be an injustice to America: Trump

ವಾಷಿಂಗ್ಟನ್‌ 20: ಸುಂಕ ತಪ್ಪಿಸಲು ಟೆಸ್ಲಾ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಮಳಿಗೆ ತೆರೆದರೆ ಅದು ಅಮೆರಿಕಕ್ಕೆ ಮಾಡುವ ಅನ್ಯಾಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

ಖಾಸಗಿ ಸುದ್ದಿಸಂಸ್ಥೆ ಸಂದರ್ಶನದ ವೇಳೆ ಮಾತನಾಡಿದ ಟ್ರಂಪ್‌, ಇವಿ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುವುದು ಎಲಾನ್‌ ಮಸ್ಕ್‌ಗೆ ಅಸಾಧ್ಯ ಎಂದಿದ್ದಾರೆ.

ಅಮೆರಿಕಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಲಾ ಸಿಇಒ ಇಲಾನ್‌ ಮಸ್ಕ್‌ ಅವರೊಟ್ಟಿಗೆ ಬಾಹ್ಯಾಕಾಶ, ಮೊಬಿಲಿಟಿ ಮತ್ತು ತಂತ್ರಜ್ಞಾನ ವಿಷಯ ಕುರಿತು ಚರ್ಚಿಸಿದ್ದರು. ಇದರ ಬೆನ್ನಲ್ಲೇ ದೇಶದಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಟೆಸ್ಲಾ ಕಂಪನಿಯು ಅರ್ಜಿ ಆಹ್ವಾನಿಸಿತ್ತು. 

ಟೆಸ್ಲಾ ವಿಶ್ವದ ಅತಿದೊಡ್ಡ ಇ.ವಿ ಕಾರು ತಯಾರಿಕಾ ಕಂಪನಿಯಾಗಿದೆ. 2022ರಿಂದಲೂ ದೇಶದ ಇ.ವಿ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ನಡೆಸಿತ್ತು. ಕಳೆದ ವರ್ಷವೇ ದೇಶದಲ್ಲಿ ಶೋರೂಂ ಆರಂಭಿಸುವ ಸಂಬಂಧ ಸೂಕ್ತ ಸ್ಥಳದ ಹುಡುಕಾಟ ನಡೆಸಿತ್ತು.

ನವದೆಹಲಿ ಮತ್ತು ಮುಂಬೈನಲ್ಲಿ ಟೆಸ್ಲಾ ತನ್ನ ಕಾರು ಮಾರಾಟ ಮಳಿಗೆ ತೆರೆಯುವ ಸಾಧ್ಯತೆಯಿದೆ ಎಂದು ಸುದ್ದಿಯಾಗಿತ್ತು. ಆದರೆ ಇದಕ್ಕೆ ಕಂಪನಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಕೇಂದ್ರ ಸರ್ಕಾರವು ಕಳೆದ ವರ್ಷ ಹೊಸ ಎಲೆಕ್ಟ್ರಿಕ್‌ ವಾಹನ ನೀತಿಯನ್ನು ಪ್ರಕಟಿಸಿದೆ. ಇದರಡಿ ಕನಿಷ್ಠ 500 ಮಿಲಿಯನ್‌ ಅಮೆರಿಕನ್‌ ಡಾಲರ್‌ (ರೂ. 4,350 ಕೋಟಿ) ಹೂಡಿಕೆಯೊಂದಿಗೆ ದೇಶದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾಯಿತಿ ಘೋಷಿಸಿದೆ.