ಪರೀಕ್ಷೆಗಳು ವಿದ್ಯಾರ್ಥಿ ಜೀವನದ ವಿಜಯದ ಮೆಟ್ಟಿಲುಗಳು: ಹಲಗತ್ತಿ

Exams are the stepping stones to victory in student life: Halagatt

ಧಾರವಾಡ 23: ಪರೀಕ್ಷೆಗಳು ವಿದ್ಯಾರ್ಥಿ ಜೀವನದ ವಿಜಯದ ಮೆಟ್ಟಿಲುಗಳು. ವಿದ್ಯಾರ್ಥಿ ಜೀವನದಲ್ಲಿ ಗೆಲುವು ಸುಮ್ಮನೆ ಬರುವುದಿಲ್ಲ. ಅದಕ್ಕೆ ಪರಿಶ್ರಮ, ಶ್ರದ್ಧೆ, ಛಲ ಮುಖ್ಯ ಎಂದು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.  

ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ‘ಮಕ್ಕಳ ಮಂಟಪ’ವು ಕೊಣ್ಣೂರಿನ ಕೆ.ಇ.ಎಸ್‌. ಪ್ರೌಢ ಶಾಲೆಯಲ್ಲಿ, ಕನಕದಾಸ ಬಾಲಕಿಯರ ಪ್ರೌಢ ಶಾಲೆಯ ಸಹಯೋಗದಲ್ಲಿ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲ್ಪಟ್ಟ “ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ?” ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಮುಂದುವರೆದು ಮಾತನಾಡಿದ ಅವರು, ವಿದ್ಯಾರ್ಥಿ ಜೀವನವೇ ಒಂದು ತಪಸ್ಸು ಇದ್ದಂತೆ. ಅಧ್ಯಯನವನ್ನು ವಿದ್ಯಾರ್ಥಿಗಳು ಒಂದು ಸವಾಲಾಗಿ ಸ್ವೀಕರಿಸಬೇಕು. ನಾನು ಖಂಡಿತಾ ಯಶಸ್ಸು ಸಾಧಿಸುತ್ತೆನೆಂಬ ದೃಢ ಸಂಕಲ್ಪ ಬೇಕು. ನಿಮ್ಮ ಉತ್ತಮ ಭವಿಷ್ಯದ ಕನಸು ಕಂಡ ತಂದೆ ತಾಯಿಯ ಕನಸು ನನಸಾಗಿ ಮಾಡಬೇಕು. ಅವರು ತಮಗಾಗಿ ಏನನ್ನು ಅಪೇಕ್ಷಿಸದೇ ನಿಮಗಾಗಿ ಪಡುತ್ತಿರುವ ಶ್ರಮಅರ್ಥ ಮಾಡಿಕೊಂಡರೆ ನೀವು ವಿಜಯಶಾಲಿ ಆಗಲು ಸಾಧ್ಯಎಂದರು. 

ಕ.ವಿ.ವ. ಸಂಘದ ಕಾರ್ಯಕ್ರಮ ಸಂಯೋಜಕರಾದ ವೀರಣ್ಣಒಡ್ಡೀನ ಮಾತನಾಡಿ, ಪರೀಕ್ಷೆ ಸಮಿಪಿಸುತ್ತಿದ್ದು ಈ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡದೇ ಅಭ್ಯಾಸ ಅಭ್ಯಾಸ ಮಾಡಬೇಕು. ಓದಿನ ಜೊತೆ ಅಕ್ಷರ ಬರವಣಿಗೆಗೂ ಆದ್ಯತೆ ನೀಡಬೇಕು. ಹಾರ್ಡ ವರ್ಕ ಬದಲಾಗಿ ಸ್ಮಾರ್ಟವರ್ಕ ಮಾಡಬೇಕು. ನಿಪುಣತೆ, ಬುದ್ಧಿ ಉಪಯೋಗಿಸಿ ಅಭ್ಯಾಸ ಮಾಡಬೇಕು ಎಂದು ಹೇಳಿದರು. 

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಧಾರವಾಡದ ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಉಪನ್ಯಾಸ ನೀಡಿ, ಪರೀಕ್ಷೆ ಕೆಲವೇ ದಿನ ಉಳಿದಿದ್ದರಿಂದ ಸಮಯ ಹಾಳಾಗದಂತೆ ಓದಬೇಕು. ಕಂಠಪಾಠ ಪ್ರವೃತ್ತಿ ಏಕಾಗ್ರತೆಗೆ ಭಂಗತರುತ್ತದೆ. ಪುನಃ ಪುನಃ ಓದುವುದು ಹಾಗೂ ಬರೆಯುವುದರಿಂದ ಸ್ಮರಣ ಶಕ್ತಿ ಹೆಚ್ಚುವುದು. ಅಂಕಗಳಿಗನುಗುಣವಾಗಿ ಉತ್ತರ ಬರೆಯಬೇಕು. ಓದುವಾಗ ಮನಸ್ಸನ್ನು ಹತೋಟಿಯಲ್ಲಿರಿಸಿ ಓದಬೇಕು. ಅಧ್ಯಯನ ಮಾಡುವಾಗ ಆರೋಗ್ಯದ ಕಡೆಯೂ ಗಮನವಿರಲಿ. ಓದಿದ್ದನ್ನು ಬರೆದುತೆಗೆಯುವುದು ಬಹಳ ಒಳ್ಳೆಯದೆಂದು ಹೇಳಿದರು. 

ಅಧ್ಯಕ್ಷತೆ ವಹಸಿದ್ದ ಮುಖ್ಯಾಧ್ಯಾಪಕರಾದ ಎಂ.ಎಚ್‌. ಹಂಗನಕಟ್ಟಿ ಮಾತನಾಡಿ, ಧಾರವಾಡದ ಕ.ವಿ.ವ. ಸಂಘ ಮಕ್ಕಳಿಗಾಗಿ ಮಾಡುವ ಕಾರ್ಯಕ್ರಮ ಫಲದಾಯಕವಾಗಿದೆ. ನಿರ್ದಿಷ್ಟ ಗುರಿಇರಲಿ. ನಿಮ್ಮ ತಂದೆ, ತಾಯಿ, ಗುರುಗಳ ಭರವಸೆಯನ್ನು ಈಡೇರಿಸಬೇಕು ಎಂದು ಹೇಳಿದರು. 

ವೇದಿಕೆಯಲ್ಲಿ ಎಚ್‌.ಎಸ್‌. ಬೆನ್ನೂರ ಇದ್ದು ಮಾತನಾಡಿದರು. 

ಜಿ.ಎಸ್‌. ಪಾಟೀಲ ಸ್ವಾಗತಿಸಿದರು. ಎಂ.ಎಸ್‌. ಭಾಗತಿ ನಿರೂಪಿಸಿದರು. ಕೆ.ಎಸ್‌. ಲಮಾಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಅಕ್ಷತಾ ಮರ್ಚಪ್ಪನವರ, ಎಚ್‌.ಎಸ್‌. ತಳವಾರ, ಎಸ್‌.ಎಸ್‌. ಪಾಟೀಲ. ಆರ್‌.ಎಸ್‌. ಉಪ್ಪಿನ ಸೇರಿದಂತೆ ಸಿಬ್ಬಂದಿಗಳು ಇದ್ದರು. 

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.