ಜಲಾಶಯಗಳಿಂದ ಕೃತಕ ಪ್ರವಾಹ ಉಂಟಾದರೆ ಅಧಿಕಾರಿಗಳು ಹೊಣೆ- ಜಿಲ್ಲಾಧಿಕಾರಿ



ಜಲಾಶಯಗಳಿಂದ ಕೃತಕ ಪ್ರವಾಹ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ- ಜಿಲ್ಲಾಧಿಕಾರಿ


ಕಾರವಾರ,‌ ಅಗಸ್ಟ್ 6 : ಜಲಾಶಯಗಳ ಹೆಚ್ಚುವರಿ ನೀರಿನಿಂದಾಗಿ ಕೃತಕ ಪ್ರವಾಹ ಉಂಟಾದಲ್ಲಿ ಕೆ.ಪಿ.ಸಿ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವದೆಂದು  ಜಿಲ್ಲಾಧಿಕಾರಿ ಡಾ.ಹರೀಶಕುಮಾರ  ಎಚ್ಚರಿಕೆ ನೀಡಿದರು 

ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ,  ಲಿಂಗನಮಕ್ಕಿ,  ಗೇರುಸೊಪ್ಪ,  ಕದ್ರಾ,  ಕೊಡಸಳ್ಳಿ ಹಾಗೂ ಸುಫಾ ಜಲಾಶಯಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯನ್ನು ನಡೆಸುವ ಮೂಲಕ ಚರ್ಚಿಸಿ,  ಕಳೆದ ಮೂರು-ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ  ಮಳೆಯಾಗುತ್ತಿದ್ದು, ಜಿಲ್ಲೆಯ ಎಲ್ಲಾ ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.  ಇದರಿಂದಾಗಿ  ಜಲಾಶಯಗಳ ಕೆಳ ಭಾಗದಲ್ಲಿ ವಾಸಿಸುವ ಗ್ರಾಮಗಳ ಜನರಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ.  

  ಈ ಹಿಂದನ ವರ್ಷ ಜಿಲ್ಲೆಯ ವಿವಿಧ ಜಲಾಶಯಗಳಿಂದ ಕೊನೆಯ ಕ್ಷಣದಲ್ಲಿ ಹೆಚ್ಚುವರಿ ನೀರನ್ನು ಬಿಡುಗಡೆಗೊಳಿಸಿದ್ದರಿಂದ ಜಲಾಶಯದ ಕೆಳಬಾಗದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು ಇರುತ್ತದೆ.  ಈ ಸಂಬಂಧ  ಎರಡು ತಿಂಗಳುಗಳ ಹಿಂದೆ ಅಪರ ಜಿಲ್ಲಾಧಿಕಾರಿ  ನೇತೃತ್ವದಲ್ಲಿ ತಂಡವನ್ನು ರಚಿಸಿ ಜಲಾಶಯಗಳಲ್ಲಿ ಸಾಕಷ್ಟು ಕುಶನ್ ನ್ನು ನಿರ್ವಹಣೆ ಮಾಡಲು ತಿಳಿಸಿದ್ದು ಇರುತ್ತದೆ. ಎಡಿಸಿ  ನೇತೃತ್ವದ ತಂಡದಲ್ಲಿ ನಿರ್ಣಯಿಸಿದಂತೆ ಜಲಾಶಯಗಳಲ್ಲಿ ಅಗತ್ಯ ನೀರಿನ ಪ್ರಮಾಣ ಕಾಯ್ದುಕೊಂಡು, ಹವಾಮಾನ ಇಲಾಖೆ ಬಿಡುಗಡೆಗೊಳಿಸುವ ಮುಂದಿನ ಮಳೆ ಪ್ರಮಾಣ ವರದಿಯನ್ನು ಆಧರಿಸಿ, ನಿರಂತರವಾಗಿ ನೀರನ್ನು ನದಿಗೆ ಬಿಡುಗಡೆಗೊಳಿಸುವದರಿಂದ ಜಲಾಶಯ ಕೆಳ ಭಾಗದಲ್ಲಿರುವ ಗ್ರಾಮಗಳಲ್ಲಿ ಕೃತಕ ಪ್ರವಾಹ ಮತ್ತು ಜನ –ಜಾನುವಾರುಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ಅವರು ತಿಳಿಸಿದರು. 


 ಮುಂದುವರೆದು ಜಲಾಶಯ ಪಾತ್ರದಲ್ಲಿ ಹಾಗೂ ನದಿ ಪಾತ್ರದಲ್ಲಾಗುತ್ತಿರುವ ಮಳೆಯ ಪ್ರಮಾಣವನ್ನು ಹಾಗೂ ಜಲಾಶಯ ಕೆಳಭಾಗದಲ್ಲಿ ಇತರೇ ಹಳ್ಳ-ಕೊಳ್ಳಗಳಿಂದ ನದಿಗೆ ಸೇರಬಹುದಾದ ನೀರಿನ ಪ್ರಮಾಣವನ್ನು ಕೂಡಾ ಗಣನೆಗೆ ತೆಗೆದುಕೊಂಡು ಜಲಾಶಯದಿಂದ ನೀರನ್ನು ಬಿಡುಗಡೆಗೊಳಿಸಿ ನದಿಯ ಮಟ್ಟವನ್ನು ಕೂಡಾ ಕಾಯ್ದುಕೊಳ್ಳುವ  ಯೋಜನೆ ರೂಪಿಸಿ ಕೂಡಲೇ ಕಾರ್ಯರೂಪಕ್ಕೆ ತರಲು ಕೆಪಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರಲ್ಲದೇ,ಕೊನೆಯ ಕ್ಷಣದಲ್ಲಿ ಅವೈಜ್ಞಾನಿಕವಾಗಿ ಜಲಾಶಯಗಳಿಂದ  ನೀರನ್ನು ಹೊರ ಬಿಟ್ಟು ಜಿಲ್ಲೆಯ ಜನರಿಗೆ ತೊಂದರೆಯುಂಟಾದಲ್ಲಿ ಕೆಪಿಸಿ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವದು ಎಂದರು.  

       ಈ ಸಂದರ್ಭದಲ್ಲಿ  ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ.ಹೆಚ್.ಕೆ, ಸಹಾಯಕ ಆಯುಕ್ತರಾದ  ಪ್ರೀಯಾಂಗ. ಎಂ, ಲಿಂಗನಮಕ್ಕಿ ಜಲಾಶಯದ  ಮುಖ್ಯ ಇಂಜಿನಿಯರ್  ಮಹೇಂದ್ರ, ಕೊಡಸಳ್ಳಿ ಜಲಾಶಯದ ಕಾರ್ಯ ನಿರ್ವಾಹಕ  ಇಂಜಿನಿಯರ್  ಶಿವಪ್ರಸಾದ, ಕದ್ರಾ ಜಲಾಶಯದ ಕಾರ್ಯ ನಿರ್ವಾಹಕ  ಇಂಜಿನಿಯರ್  ಎಸ್.ಯು.ಬಾಂದೇಕರ್  ಸೇರಿದಂತೆ  ಇತರರು ಹಾಜರಿದ್ದರು.