ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ಗಳಲ್ಲಿ ಹೆಚ್ಚಿನ ಅನುದಾನವನ್ನು ಆಸ್ಪತ್ರೆಗಳಿಗೆ ಮಿಸಲಿಡಬೇಕು
ಧಾರವಾಡ 03: ಇತ್ತೀಚಿಗಷ್ಟೇ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾದ ಬಾಣಂತಿಯರ ಸಾವು ಅತಿ ಹೆಚ್ಚು ಸಂಭವಿಸಿರುವುದು ತುಂಬಾ ಕಳವಳಕಾರಿಯಾಗಿದ್ದು, ನಮ್ಮ ಆರೋಗ್ಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯಾಗಲಿ ಅಥವಾ ಉತ್ತರ ಕರ್ನಾಟಕಕ್ಕೇ ಹೆಸರಾದ ಕಿಮ್ಸ್ ಆಗಲಿ, ಅವಶ್ಯಕವಾದ ಮೂಲಭೂತ ಸೌಕರ್ಯಗಳು ಇಲ್ಲದೆ ಸಮಸ್ಯೆಗಳ ಆಗರಗಳಾಗಿವೆ.
ಕೆಲವು ದಿನಗಳ ಹಿಂದೆ ಎಲ್‌ಪಿಜಿ ಸಿಲಿಂಡರ್ ಅವಘಡದಲ್ಲಿ ಬೆಂಕಿಯಿಂದ ಸುಟ್ಟುಕೊಂಡು ಅಯ್ಯಪ್ಪ ಸ್ವಾಮಿಗಳು ಕಿಮ್ಸ್ ಗೆ ದಾಖಲಾದರೆ ಬರ್ನೋಲ್ ಮುಲಾಮನ್ನು ಹೊರಗಡೆ ಬರೆದಿದ್ದಾರೆ. ಹಾಗೆಯೇ ಜಿಲ್ಲಾಸ್ಪತ್ರೆಯಲ್ಲಾಗಲಿ ಅಥವಾ ತಾಲೂಕಾಸ್ಪತ್ರೆಯಲ್ಲಾಗಲಿ ರೋಗಿಗಳಿಗೆ ಬರೆದುಕೊಟ್ಟ ಓಷಧಿಗಳಲ್ಲಿ ಕೇವಲ ಅರ್ಧದಷ್ಟು ಮಾತ್ರ ಕೊಡುವರು. ಅಥವಾ ಹೊರಗಡೆ ತೆಗೆದುಕೊಳ್ಳಲು ಹೇಳುವರು.
ಇನ್ನು ವಾರದ ಮೊದಲ ದಿನಗಳಂದು ರೋಗಿಗಳು ಚೀಟಿ ಮಾಡಿಸಲು, ಹಣ ಪಾವತಿ ಮಾಡಲು, ಓಷಧಿ ವಿತರಣಾ ಕೌಂಟರ್‌ನಲ್ಲಿ ನಿಲ್ಲಲು ಜನಜಂಗುಳಿಯೇ ನೆರೆದು, ಕೇವಲ ಪಾಳೆ ಹಚ್ಚಲು ಇಡೀ ದಿನ ಕಳೆಯಬೇಕಾಗುವುದು. ರೋಗಿಯು ರೋಗಕ್ಕಿಂತ ಈ ಪಾಳೆಯಲ್ಲಿಯೇ ಅತಿ ಹೆಚ್ಚು ಬಳಲಿ ನಿತ್ರಾಣಗೊಳ್ಳುವಂತಾಗುತ್ತಿದೆ. ರೋಗಕ್ಕೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್‌ಗಳು, ಪ್ರಯೋಗ ಶಾಲೆಯ ತಪಾಸಣಾ ಸಿಬ್ಬಂದಿಗಳು ಅವಶ್ಯಕತೆಗೆ ತಕ್ಕಷ್ಟು ಸಂಖ್ಯೆಯಲ್ಲಿ ಇಲ್ಲದೇ ಇರುವುದರಿಂದ ತಮ್ಮ ಕೆಲಸ ಬಿಟ್ಟು ರೋಗಿಗಳನ್ನು ನಿಯಂತ್ರಿಸಲು ಹರಸಾಹಸಪಡಬೇಕಾಗಿದೆ. ರೋಗಿಗಳ ಸಂಖ್ಯೆಯಲ್ಲಿ ಆಗುವ ಹೆಚ್ಚಳದಿಂದಾಗಿ ಅತೀವ ಒತ್ತಡದಲ್ಲಿ ಈ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳು ಕೆಲಸ ಮಾಡಬೇಕಾಗಿದೆ.
ಧಾರವಾಡದ ಜಿಲ್ಲಾಸ್ಪತ್ರೆಗೆ ಪಕ್ಕದ ಜಿಲ್ಲೆಗಳ ಹಳಿಯಾಳ, ಸವದತ್ತಿ, ರಾಮದುರ್ಗಗಳಿಂದಲೂ ರೋಗಿಗಳು ಬರುತ್ತಾರೆ. ಇಡೀ ಕಾರವಾರ ಕರಾವಳಿಯಿಂದ ಹಿಡಿದು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ, ಗಂಭೀರ ಕಾಯಿಲೆಯ ರೋಗಿಗಳೂ ಹುಬ್ಬಳ್ಳಿಯ ಕಿಮ್ಸ್‌ಗೆ ಬರುತ್ತಾರೆ. ಅವರುಗಳಿಗೆ ಒಂದೆಡೆ ಸರಿಯಾದ ಚಿಕಿತ್ಸೆಯೂ ಲಭಿಸದೆ, ಸಾಕಷ್ಟು ಓಷಧಿಯೂ ಸಿಗದೇ ಕೇವಲ ಪಾಳೆಯಲ್ಲಿ ನಿಲ್ಲುವಂತಾಗಿ ರೋಗವಾಸಿಯಾಗುವುದಿರಲಿ ಇನ್ನೂ ಹೆಚ್ಚು ರೋಗ ಉಲ್ಬಣವಾಗುವಂತೆ ಆಗಿದೆ. ಈ ಆಸ್ಪತ್ರೆಗಳಲ್ಲಿ ವಿವಿಧ ವಿಭಾಗಗಳಲ್ಲಿ ರೋಗಿಗಳನ್ನು ನೋಡಲು ಸಾಕಷ್ಟು ತಜ್ಞವೈದ್ಯರಿಲ್ಲವೆಂದು ಜಿಲ್ಲಾಸ್ಪತ್ರೆಯಿಂದ ಕಿಮ್ಸ್ ಗೋ ಅಥವಾ ಕಿಮ್ಸ್‌ನಿಂದ ಇನ್ಯಾವುದೋ ಖಾಸಗಿ ಆಸ್ಪತ್ರೆಗೋ ಹೋಗಲು ಸಲಹೆ ಕೊಡುತ್ತಾರೆ. ಯಾವಾಗಲೂ ಕಿಕ್ಕಿರಿದು ತುಂಬುವ ಹೆರಿಗೆ ವಿಭಾಗದಲ್ಲಿ ನುರಿತ ಹಿರಿಯ ವೈದ್ಯರ ಕೊರತೆ ಇದೆ.
ಜಿಲ್ಲಾಸ್ಪತ್ರೆಯಲ್ಲಿ ಕಿವಿ ಮೂಗು ಗಂಟಲು, ಯುರೋಲಜಿ ಇತ್ಯಾದಿಗಳಿಗೆ ವಿಭಾಗಗಳಿಗಂತೂ ತಜ್ಞವೈದ್ಯರೇ ಇಲ್ಲ. ಎಕ್ಸರೇ ವಿಭಾಗದಲ್ಲಿ ರೋಗಿಗೆ ಎಕ್ಸ್ರರೇ ಪ್ರತಿಯನ್ನು ಕೈಗೆ ನೀಡದೇ ಮೊಬೈಲ್‌ನಲ್ಲಿ ವಾಟ್ಸಪ್‌ಗೇ ಬಿಡಲಾಗುವುದೆಂದು ತಾಕೀತು ಮಾಡುತ್ತಾರೆ. ಮೊಬೈಲ್ ಇಲ್ಲದವರು ಮೊಬೈಲ್ ಇದ್ದ ಯಾರನ್ನಾದರೂ ಕರೆದುಕೊಂಡು ಬರಲು ಹೇಳುತ್ತಾರೆ. ಸಿಗದಿದ್ದವರಿಗೆ ಪರಿಹಾರವೇ ಇಲ್ಲ.
ಮೊದಲಿನಿಂದಲೂ ಸರ್ಕಾರಿ ಆಸ್ಪತ್ರೆಗಳೆಂದರೆ ಚಿಕಿತ್ಸೆ ಉಚಿತವಿದ್ದು ನಿರ್ಗತಿಕರಿಗೂ ಕೂಡ ಆರೋಗ್ಯ ಸೇವೆ ಲಭ್ಯ ಎಂಬುದಾಗಿತ್ತು. ಆದರೀಗ ನಿರ್ಗತಿಕರು, ಬಿಪಿಎಲ್ ಕಾರ್ಡ್ ಹೊಂದಿರುವವರು ಕೂಡ ಅರ್ಧದಷ್ಟಾದರೂ ಶುಲ್ಕ ಪಾವತಿಸಬೇಕು ಎಂಬ ನೀತಿಯು ಅತ್ಯಂತ ಜನವಿರೋಧಿ ಅಷ್ಟೇ ಅಲ್ಲ, ಅಮಾನವೀಯ ಕೂಡ. ಈ ಎಲ್ಲಾ ಸಮಸ್ಯೆಗಳ ನಡುವೆ ಜಿಲ್ಲೆಯಲ್ಲಿ ಯಾವಾಗಲಾದರೂ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದರಂತೂ ಅದನ್ನು ಎದುರಿಸಲು ಜಿಲ್ಲೆಯ ಈ ಎಲ್ಲ ಸರ್ಕಾರಿ ಆಸ್ಪತ್ರೆಗಳು ಹರಸಾಹಸ ಪಡುವುದನ್ನು ಜನತೆ ಅನುಭವಿಸಿದ್ದಾರೆ.
ಈ ಮೇಲಿನ ಎಲ್ಲ ಸಮಸ್ಯೆಗಳಿಂದ ಜಿಲ್ಲಾ, ತಾಲೂಕು ಹಾಗೂ ಕಿಮ್ಸ್ ಆಸ್ಪತ್ರೆಗಳು ಬಳಲುತ್ತಿವೆ. ಇವುಗಳ ಕಥೆಯೇ ಹೀಗಾದರೆ ಇನ್ನೂ ಗ್ರಾಮಾಂತರ ಭಾಗದಲ್ಲಿ ಕಾರ್ಯ ನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೂಲಭೂತ ಸೌಕರ್ಯಗಳೂ, ವೈದ್ಯಕೀಯ ಸಿಬ್ಬಂದಿಗಳೂ ಇಲ್ಲದೇ ನರಳಾಡುತ್ತಿವೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಈ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸಾಮಾನ್ಯ ಜನತೆ ದೊಡ್ಡ ಪ್ರಮಾಣದಲ್ಲಿ ಹೋಗುವರು. ಅವರು ತಮ್ಮ ಅನಾರೋಗ್ಯಕ್ಕೆ ಇದೇ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿಕೊಂಡಿರುವವರು. ಇತ್ತೀಚಿಗೆ ತೀವ್ರ ಬೆಲೆಯೇರಿಕೆ, ಆದಾಯದ ತೀವ್ರ ಕುಸಿತದಿಂದಾಗಿ ಮಧ್ಯಮ ವರ್ಗದವರು ಕೂಡ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿದ್ದಾರೆ.
ಆದ್ದರಿಂದಲೇ ಇಲ್ಲಿನ ಸಮಸ್ಯೆಗಳಿಗೆ ಶೀಘ್ರ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ಗಳಲ್ಲಿ ಹೆಚ್ಚಿನ ಅನುದಾನವನ್ನು ನೀಡಬೇಕಾಗಿದೆ. ಅದೇ ರೀತಿ ಜಿಲ್ಲಾಡಳಿತ ಕೂಡ ತನ್ನ ವ್ಯಾಪ್ತಿಯ ಸಮಸ್ಯೆಗಳಿಗೆ ಸೀಮಿತ ಅವಧಿಯಲ್ಲಿ, ನಿರ್ದಿಷ್ಟ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ ಎಸ್‌ಯುಸಿಐ(ಸಿ) ಪಕ್ಷದ ಧಾರವಾಡ ಜಿಲ್ಲಾ ಸಮಿತಿಯು ಈ ಬೃಹತ್ ಜನಹೋರಾಟದ ಹೋರಾಟದ ಮೂಲಕ ಆಗ್ರಹಿಸುತ್ತದೆ.