ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಕನ್ನಡ ಜಾನಪದ ಪರಿಷತ್ತಿನ ದಶಮಾನೋತ್ಸವ ಸಮಾರಂಭ

Tenth Anniversary Ceremony of Kannada Folk Parishad at Manjunatha Sainik Training Centr


ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಕನ್ನಡ ಜಾನಪದ ಪರಿಷತ್ತಿನ ದಶಮಾನೋತ್ಸವ ಸಮಾರಂಭ 

ಮೂಡಲಗಿ 10:  ಅಳಿವಿನ ಅಂಚಿನಲ್ಲಿರುವ ಜನಪದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಕನ್ನಡ ಜಾನಪದ ಪರಿಷತ್ತಿ ಕಾರ್ಯ ಶ್ಲಾಘನೀಯ. ಮೂಡಲಗಿ ತಾಲೂಕಿನ ಕನ್ನಡ ಜಾನಪದ ಪರಿಷತ್ತು ಹಮ್ಮಿಕೊಂಡಿರುವ ದಶಮಾನೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾದದ್ದು ಎಂದು ಪಟ್ಟಣದ ಎಂಇಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಹಾಗೂ ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಹೇಳಿದರು.  

ಪಟ್ಟಣದ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಕನ್ನಡ ಜಾನಪದ ಪರಿಷತ್ತು ಮೂಡಲಗಿ ತಾಲೂಕಾ ಘಟಕದ ದಶಮಾನೋತ್ಸವ ಸಮಾರಂಭವನ್ನು ಸಂಭಾಳ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,  ಲಾವಣಿ, ಹಂತಿ, ಸೋಬಾನ, ಹೋಳಿ, ತೊಟ್ಟಿಲ ಹಾಡು, ಬೀಸುವ,ಕುಟ್ಟುವ ಹೀಗೆ ಹುಟ್ಟಿನಿಂದ ಸಾಯುವವರೆಗೂ ಜನಪದ ಸಾಂಸ್ಕೃತಿಕ ಹಾಡುಗಳು ಇಂದು ಕಣ್ಮರೆಯಾಗುತ್ತಿವೆ. ಪ್ರದರ್ಶನ ಕಲೆಗಳು, ವಿವಿಧ ವಾದ್ಯ ಪರಿಕರಗಳು ಆಧುನಿಕರಣಗೊಳ್ಳುತ್ತಿವೆ. ಅವುಗಳನ್ನು ನಶಿಸದಂತೆ ಕಾಯ್ದುಕೊಳ್ಳುವ ಅವಶ್ಯಕತೆ ಇದೆ, ಕನ್ನಡ ಜಾನಪದ ಪರಿಷತ್ತಿನ ಡಾ.ಎಸ್‌. ಬಾಲಾಜಿರವರು ಜಾನಪದ ಉಳಿವಿಗಾಗಿ ಕಟ್ಟಿದ ಪರಿಷತ್ತಿನ ಕಾರ್ಯ ಶ್ಲಾಘನೀಯ, ಮೋಹನ ಗುಂಡ್ಲೂರ ಮತ್ತು ಕೆ.ಎಸ್‌.ಕೌಜಲಗಿರವರು ಕೂಡಾ ನಿರಂತರವಾಗಿ ಜಂಗಮರಂತೆ ನಾಡಿನ ಉದ್ದಗಲಕ್ಕೂ ಕಾರ್ಯಕ್ರಮ ಮಾಡಿಸುತ್ತಿರುವುದು ಅರ್ಥ ಪೂರ್ಣ ಎಂದರು. 

    ಸಾಹಿತಿ  ಬಾಲಶೇಖರ ಬಂದಿ ಮಾತನಾಡಿ, ಜನಪದ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಲು, ಜಾಗೃತಗೊಳಿಸಲು ಕನ್ನಡ ಜಾನಪದ ಪರಿಷತ್ತು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.      

     ಮೂಡಲಗಿ ತಾಲೂಕಿನ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಯೋಜಕ ಡಾ. ಮಹಾದೇವ ಚಂ.ಪೋತರಾಜ ಮಾತನಾಡಿ, ಎಲೆ ಮರೆ ಕಾಯಿಯಂತಿರುವ ಜನಪದ ಕಲಾವಿದರನ್ನು ಗುರುತಿಸಿ, ಪ್ರಶಸ್ತಿಯನ್ನು ನೀಡಲಾಗುವುದು ಎಂದರು.    ಜಾನಪದ ಕಲಾವಿದ ಶಬ್ಬಿರ ಡಾಂಗೆ ಅವರು ಜನಪದ ಸಾಂಸ್ಕೃತಿಕ ಪರಂಪರೆಯಷ್ಟು ಶ್ರೀಮಂತ ಯಾವುದು ಇಲ್ಲ ಎನ್ನುತ್ತ ಹಾಡು ಹಾಡಿ ರಂಜಿಸಿದರು. 

    ಕಾಸಾಪ ತಾಲೂಕಾ ಘಟಕದ ಮಾಜಿ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ,  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲಕ್ಮಣ ಅಡಿಹುಡಿ ಮಾತನಾಡಿದರು.  

   ಮಾರುತಿ ನಡಕಟ್ಟಿ ನಾಟಕ ಪ್ರದರ್ಶನ, ನಾಗೇಂದ್ರ ಮಾನೆ, ಬಾಬು ಮಾನೆ ಹಾಗೂ ಸಂಗಡಿಗರು ಗೊಂದಳಿ ಹಾಡು ಕಲಾ ಪ್ರದರ್ಶನ ಹಾಗೂ ಡಾ.ಚುಟುಕುಸಾಬ  ಜಾತಗಾರ ಹಾಗೂ ಸಂಗಡಿಗರು ಸಿದ್ದಿಸೋಗು ಕಲಾ ಪ್ರದರ್ಶನ ಮಾಡಿದರು.  

   ಸಮಾರಂಭದಲ್ಲಿ ಸಾಹಿತಿಗಳಾದ ಚಿದಾನಂದ ಹೂಗಾರ, ದುರ್ಗಪ್ಪ ದಾಸನವರ, ಜಯಾನಂದ ಮಾದರ, ನಿಂಗಪ್ಪ ಸಂಗ್ರೇಜಿಕೊಪ್ಪ,  ಕಲಾವಿದರಾದ ನಾಗೇಂದ್ರ ಮಾನೆ, ಬಾಬು ಮಾನೆ, ಚುಟುಕು ಸಾಬ್ ಜಾತಗಾರ, ಬಸಪ್ಪ ಇಟ್ಟನ್ನವರ ರವರಿಗೆ ಕನ್ನಡ ಜಾನಪದ ದಶಮಾನೋತ್ಸವ ಪ್ರಶಸ್ತಿಯನ್ನು ನೀಡಲಾಯಿತು.  

ಆರಂಭದಲ್ಲಿ ಹಂತಿ ಹಾಡಿನ ಮೂಲಕ ಬಸಪ್ಪ ಇಟ್ಟನ್ನವರ ಪ್ರಾರ್ಥಿಸಿದರು, ಶಿವಕುಮಾರ ಕೋಡಿಹಾಳ ನಿರೂಪಿಸಿದರು. ಡಾ. ಮಹಾದೇವ ಪೋತರಾಜ ಸ್ವಾಗತಿಸಿದರು, ಪ್ರಕಾಶ ಮೇತ್ರಿ ವಂದಿಸಿದರು.